Friday, May 17, 2024

ಪ್ರಾಯೋಗಿಕ ಆವೃತ್ತಿ

ಸಹಕಾರಿ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರದ ಹಿಡಿತ: ಸಿಎಂ ಸಿದ್ದರಾಮಯ್ಯ ಕಳವಳ

ಸಹಕಾರಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಸವಾರಿ ಮಾಡಲು ಹೊರಟಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಅವರು ಇಂದು ಮಹಾರಾಷ್ಟ್ರದ ಸಹಕಾರಿ ಮಹರ್ಷಿ ಭಾವು ಸಾಹೇಬ್ ಥಾರೋಟ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ ಅಣ್ಣಾ ಸಾಹೇಬ್ ಶಿಂಧೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಲ್ಲಿ ಪಾಲ್ಗೊಂಡು ಮಾತನಾಡಿದರು.

“ಸಹಕಾರ ಕ್ಷೇತ್ರ ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದಲ್ಲಿಯೂ ಹಿಡಿತವನ್ನು ಸಾಧಿಸಲು ಹೊರಟಿರುವುದು ಸಂವಿಧಾನ ವಿರೋಧಿ ನಡೆ. ಸಂವಿಧಾನದಲ್ಲಿ ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಹಕಾರ ಸಚಿವರಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯಗಳ ಅಧಿಕಾರವನ್ನು ಒತ್ತುವರಿ ಮಾಡಿಕೊಳ್ಳುವ ಕೆಲಸ ಯಾರಿಂದಲೂ ಆಗಿರಲಿಲ್ಲ. ಇದರ ಅರ್ಥ ಕೇಂದ್ರ ಸರ್ಕಾರ ಸಹಕಾರಿ ತತ್ವ ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.
ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸುವುದು ಅಗತ್ಯ ಮತ್ತು ಅನಿವಾರ್ಯ” ಎಂದರು.

“ಕೇಂದ್ರ ಸರ್ಕಾರದವರು ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೃಷಿ ಕಾಯ್ದೆ ತಿದ್ದುಪಡಿ ಮಾಡಿದರು. ದೇಶದ ರೈತರು ಇದನ್ನು ವಿರೋಧ ಮಾಡಿದ ಮೇಲೆ ಮಣಿದು ಕಾಯ್ದೆ ವಾಪಸ್ಸು ಪಡೆಯುವ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರದ ಅನೇಕ ತೀರ್ಮಾನಗಳು ರಾಜ್ಯ ಸರ್ಕಾರದ ಹಿತಕ್ಕೆ ವಿರುದ್ಧವಾಗಿವೆ. ಸಹಕಾರ ತತ್ವವಾದ ‘ಒಬ್ಬರಿಗೆ ಎಲ್ಲರೂ, ಎಲ್ಲರಿಗೆ ಒಬ್ಬರು’ ಎಂಬ ಉದಾತ್ತ ಧ್ಯೇಯವನ್ನು ನಾಶ ಮಾಡಲು ಕೇಂದ್ರ ಸರ್ಕಾರ ಹೊರಟಿದೆ” ಎಂದು ವಾಗ್ದಾಳಿ ನಡೆಸಿದರು.

ಡಾ. ಅಣ್ಣಾಸಾಹೇಬ್ ಶಿಂಧೆ ಅವರು ದೇಶದ ಆಹಾರದ ಸ್ವಾವಲಂಬನೆಗೆ ಕಾರಣರಾದವರು. ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಅಣ್ಣಾಸಾಹೇಬ್ ಶಿಂಧೆಯವರು ಹಸಿರು ಕ್ರಾಂತಿಗೆ ಕಾರಣೀಭೂತರು.ಕೃಷಿ ತಜ್ಞ ಡಾ.ಸ್ವಾಮಿನಾಥನ್ ತಮ್ಮ ಲೇಖನದಲ್ಲಿ ಅಣ್ಣಾ ಸಾಹೇಬ್ ಶಿಂಧೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ದೇಶದಲ್ಲಿ 140 ಕೋಟಿ ಜನರಿಗೆ ಆಹಾರದಲ್ಲಿ ಸ್ವಾವಲಂಬನೆ ಹೊಂದಲು ಕಾಂಗ್ರೆಸ್ ಪಕ್ಷ ಕಾರಣ. ಬಾವೂಸಾಹೇಬ್ ಥೋರಟ್ ಹಾಗೂ ಡಾ. ಅಣ್ಣಾಸಾಹೇಬ್ ಶಿಂಧೆ ರವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕಾಗಿದೆ ಎಂದರು.

ಕೃಪೆ:ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!