ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಗೊಳಿಸಿದ್ದು,ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಡಾ.ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದರು.
ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿಂಗಾಲೇಶ್ವರ ಮಠಾಧೀಶರೇ ಸ್ವತಃ ಈ ಸರ್ಕಾರಕ್ಕೆ ಶೇ.30 ಪರ್ಸೆಂಟ್ ಕಮಿಷನ್ ನೀಡದಿದ್ದರೆ ಶ್ರೀ ಮಠದ ಅಭಿವೃದ್ಧಿಗೆ ನೀಡಿದ ಅನುದಾನವೂ ಬಿಡುಗಡೆಯಾಗುವುದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ.
ರಾಜ್ಯ ಸರ್ಕಾರದ ಇಂತಹ ಜನವಿರೋಧಿ ನೀತಿ ಹಾಗೂ ಭ್ರಷ್ಟಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ನೋಡಿಕೊಂಡು ಸುಮ್ಮನಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವತಃ ಬಿಜೆಪಿ ಕಾರ್ಯಕರ್ತನಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್, ಸಚಿವರಾದ ಕೆ.ಎಸ್.ಈಶ್ವರಪ್ಪ ಅವರೇ ಖುದ್ದಾಗಿ 40% ಕಮಿಷನ್ ಗೆ ಒತ್ತಾಯಿಸಿದ್ದಾರೆ. ಗುತ್ತಿಗೆ ನಡೆಸಿರುವ ಕಾಮಗಾರಿಗೆ ಆದೇಶ ಪತ್ರವನ್ನೇ ನೀಡಿಲ್ಲ. ಬಡ್ಡಿಗೆ ಹಣವನ್ನು ಪಡೆದುಕೊಂಡು ಕಾಮಗಾರಿ ನಡೆಸಿದ್ದೇನೆ, ಸತತವಾಗಿ ನಷ್ಠ ಅನುಭವಿಸಿರುವದನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಎಲ್ಲರಿಗೂ ವಾಟ್ಸಾಪ್ ಸಂದೇಶ ಕಳಿಸಿ ಸಾವಿಗೆ ಶರಣಾಗಿದ್ದಾರೆ.
ಇಷ್ಟಾದರೂ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಶೇ.40% ಕಮಿಷನ್ ವಿಷಯದ ಬಗ್ಗೆ ಒಂದಿಷ್ಟೂ ಚರ್ಚೆಯಾಗದಿರುವುದು ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಗಂಗೋತ್ರಿಯಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ದೊರೆತಂತಾಗಿದೆ ಎಂದರು.
ರಾಜ್ಯ ಸರ್ಕಾರವು, ಸಂತೋಷ್ ಪಾಟೀಲ್ ಆತ್ಮಹತ್ಯೆ ಕುರಿತು, ನಡೆಸುತ್ತಿರುವ ಸಿಐಡಿ ತನಿಖೆಯಿಂದ ನಿಜಾಂಶವು ಹೊರಬೀಳುವುದಿಲ್ಲ, ಬದಲಾಗಿ ಈ ಪ್ರಕರಣವೇ ಮುಚ್ಚಿಹೋಗುವ ಸಾಧ್ಯತೆಯಿದೆ. ಆದ್ದರಿಂದ ನ್ಯಾಯಾಧೀಶರಿಂದ ಇಲ್ಲವೇ ವಿಶ್ರಾಂತ ನ್ಯಾಯಾಧೀಶರಿಂದ, ಅಥವಾ ಲೋಕಾಯುಕ್ತರಿಂದ ತನಿಖೆ ಮಾಡಿಸಿ, ಸತ್ಯಾಂಶವನ್ನು ಅನಾವರಣ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಡಾ.ಕೃಷ್ಣಮೂರ್ತಿ ಆಗ್ರಹಿಸಿದರು.
ರಾಜ್ಯ ಸರ್ಕಾರವು ಎಸ್ಸಿ/ಎಸ್ಟಿ ಹಣವನ್ನು ಜಲಜೀವನ್ ಮಿಷನ್ ಯೋಜನೆಗೆ ವರ್ಗಾವಣೆ ಮಾಡಿದೆ. ಇದರಿಂದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳ ಜನರಿಗೆ ಅನ್ಯಾಯವಾಗಿದೆ, ದಲಿತ ಬಂಧುಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನು ನಿರ್ದಿಷ್ಟವಾದ ಯೋಜನೆಗೆ ಬಳಸಬೇಕು ಎಂದು ಹೇಳಿದರು.
ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆಗೆ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರೇ ನೇರವಾಗಿ ಕಾರಣರಾಗಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯ ಹಾಗೂ 40% ಕಮಿಷನ್ ಆರೋಪ ಕುರಿತ ವಿಚಾರದ ದಿಕ್ಕುತಪ್ಪಿಸಲು ಗಲಭೆಯನ್ನು ಪೂರ್ವನಿಯೋಜಿತಗೊಳಿಸಿ ಮಾಡಲಾಗಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ತಾಲ್ಲೂಕು ಉಸ್ತುವಾರಿ ಗೋವಿಂದರಾಜು, ತಾಲ್ಲೂಕು ಉಪಾಧ್ಯಕ್ಷ ಶಂಕರ ಚಮ್ಮಾರ್, ಪ್ರಧಾನ ಕಾರ್ಯದರ್ಶಿ ಡಿಜಿಎಸ್ ಗಂಗಾಧರ, ನಗರ ಘಟಕದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಶಿವಣ್ಣ, ಬಿವಿಎಫ್ ಸಂಯೋಜಕ ಮೊಬೈಲ್ ರವಿ, ನವೀನ ಕುಮಾರ್ ಮತ್ತು ಮೋಹನ್ ಚಿಟ್ಟೆ ಉಪಸ್ಥಿತರಿದ್ದರು.