Thursday, September 19, 2024

ಪ್ರಾಯೋಗಿಕ ಆವೃತ್ತಿ

ಉರೀಗೌಡ – ದೊಡ್ಡ ನಂಜೇಗೌಡ ಫ್ಲೆಕ್ಸ್ ತೆರವುಗೊಳಿಸಿ | ಮಂಡ್ಯ ಶಾಂತವಾಗಿರಲು ಕ್ರಮ ಕೈಗೊಳ್ಳಿ : ಜಿಲ್ಲಾಡಳಿತಕ್ಕೆ ಸಿಪಿಐಎಂ ಒತ್ತಾಯ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ‘ ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಎಂಬ ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರೆವುಗೊಳಿಸಿ ಜಿಲ್ಲೆಯನ್ನು ಕೋಮು ದಳ್ಳುರಿಗೆ ತಳ್ಳುವ ಬಿಜೆಪಿಯ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದು ಮಂಡ್ಯ ಜಿಲ್ಲಾಡಳಿತವನ್ನು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಫ್ಲೆಕ್ಸ್ ಬೋರ್ಡ್‌ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಆಶಯಗಳ ಉಲ್ಲಂಘನೆಯಾಗುತ್ತದೆ, ಬಿಜೆಪಿ ಮತ್ತು ಸಂಘ ಪರಿವಾರದ ಕೋಮುವಾದಿ ಉದ್ದೇಶವನ್ನು ಈಡೇರಿಸಿಕೊಳ್ಳಲು ಬಳಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉರೀಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದ ಸೈನಿಕರು ಎಂದು ಸುಳ್ಳು ಕತೆ ಕಟ್ಟಿ ಒಕ್ಕಲಿಗರನ್ನು ಟಿಪ್ಪು ವಿರುದ್ಧ ಹೋರಾಡಿ ಬ್ರಿಟೀಷರಿಗೆ ಸಹಾಯ ಮಾಡಿದರು ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಒಕ್ಕಲಿಗರನ್ನು ಬ್ರಿಟೀಷರ ಏಜೆಂಟರು ಎಂದು ಅವಮಾನಿಸುವ ಕೆಲಸವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡುತ್ತಿದೆ. ಇದರ ಮುಂದುವರಿಕೆಯಾಗಿ ಪ್ರಧಾನಿಯೊಬ್ಬರ ಭೇಟಿಯ ಘನತೆಯನ್ನೂ ಮಣ್ಣು ಪಾಲು ಮಾಡಿ ತನ್ನ ಸುಳ್ಳಿನ, ವಿಕೃತಿಯ ಪ್ರಚಾರದಲ್ಲಿ ಬಿಜೆಪಿ ನಿರತವಾಗಿದೆ.

ಜಿಲ್ಲಾಡಳಿತ ಇಂದು ಸಂಜೆಯೊಳಗೆ ಈ ವಿವಾದಾತ್ಮಕ, ವಿಕೃತ ಫ್ಲೆಕ್ಸ್‌ ಬೋರ್ಡ್‌ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಸಿಪಿಐಎಂ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆಯೇ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  ಜಿಲ್ಲಾಡಳಿತ ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್‌ಗಳನ್ನ ತೆರೆವುಗೊಳಿಸಬೇಕೆಂದು ಸಿಪಿಐಎಂ ಮಂಡ್ಯ ಜಿಲ್ಲಾ ಸಮಿತಿಯ ಪರವಾಗಿ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್. ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!