Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಸಾಯನಿಕ ಗೊಬ್ಬರ ಬಳಕೆ ತ್ಯಜಿಸಿ

ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಕೊಟ್ಟಿಗೆ ಗೊಬ್ಬರ ಬಳಸುವ ಮೂಲಕ ಭೂಮಿಯನ್ನು ಉಳಿಸುವ ಜೊತೆಗೆ ಉತ್ತಮ ರೇಷ್ಮೆ ಫಸಲನ್ನು ಪಡೆಯಬಹುದೆಂದು ಸಿಲ್ಕ್ ಆಸೋಷಿಯೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ರಾಮಚಂದ್ರೇಗೌಡ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಐನೋರಹುಂಡಿಯಲ್ಲಿ ರೇಷ್ಮೆ ಇಲಾಖೆ ನೌಕರರ ಸೇವಾ ಕೇಂದ್ರ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ,ವಲಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರೇಷ್ಮೆ ಕೃಷಿಯ ತಾಂತ್ರಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರೇಷ್ಮೆಯಲ್ಲಿ ಅಭಿವೃದ್ದಿ ಹೊಂದಬಹುದಾಗಿದೆ. ರೇಷ್ಮೆ ಕೃಷಿಯ ಸಮಸ್ಯೆಗಳಿಗೆ ತಾಂತ್ರಿಕ ತರಬೇತಿ ಮೂಲಕ ಪರಿಹಾರ ಪಡೆಯಬಹುದಾಗಿದೆ ಎಂದರು.

ಹಿಪ್ಪುನೇರಳೆ ಸೊಪ್ಪು ಬೆಳೆಯುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷಿಸಬೇಕು. ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಯಾವ ಗೊಬ್ಬರ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ದೊರೆಯುತ್ತದೆ. ಆಗ ಮಾತ್ರ ಉತ್ತಮ ಸೊಪ್ಪು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಮಣ್ಣಿನ ಭೌತಿಕ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ರೇಷ್ಮೆ ಕೃಷಿಯಲ್ಲಿ ಹನಿ ನೀರಾವರಿಯನ್ನು ಅವಳವಡಿಸಿಕೊಂಡರೆ ಕಳೆಯ ನಿರ್ವಹಣೆ ಜೊತೆಗೆ ಗೊಬ್ಬರ ಪೋಲಾಗುವುದನ್ನು ತಡೆಯುತ್ತದೆ ಎಂದು ಹೇಳಿದರು.

ರೇಷ್ಮೆ ಹುಳುವಿನ ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳಬೇಕು.ರೇಷ್ಮೆ ಮನೆಯನ್ನು ಸ್ವಚ್ಚವಾಗಿಟ್ಟಿಕೊಳ್ಳಬೇಕು, ರೇಷ್ಮೆಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳುವಳಿಕೆ ನೀಡಿದರು.

ನಿವೃತ್ತ ಉಪ ನಿರ್ದೆಶಕ ಚಿಗರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮವಾದ ಸೊಪ್ಪು ಬೆಳೆಯಲು 16 ಪೋಷಕಾಂಶಗಳು ಬೇಕಾಗುತ್ತದೆ. ಹುಳು ಸಾಗಾಣಿಕೆ ಪದ್ಧತಿಯಲ್ಲಿ ಹಂತಕ್ಕೊಂದು ಸೊಪ್ಪು ಎಂಬ ಪದ್ಧತಿಯಿಂದ ಹಿಪ್ಪುನೇರಳೆ ರೆಂಬೆಯ ಮೂಲಕ ಹುಳುಗಳಿಗೆ ಪೋಷಕಾಂಶ ಒದಗಿಸಲು ಸಾಧ್ಯವಾಗಿದೆ. ಈ ಪದ್ಧತಿಯಿಂದ ಕಡಿಮೆ ಕಾರ್ಮಿಕರನ್ನು ಬಳಸಿ ಕೂಲಿ ಖರ್ಚಿನಲ್ಲಿ ಮಿತವ್ಯಯ ಸಾಧಿಸಬಹುದು ಎಂದರು.

ಹಿಪ್ಪನೇರಳೆಯಲ್ಲಿ ಥ್ರಿಪ್ಸ್, ಮೈಟ್ಸ್ ಮತ್ತು ಎಲೆ ಸುರುಳಿ ಕೀಟಗಳ ನಿಯಂತ್ರಣ ಕುರಿತು ವಿಚಾರ ಸಂಕಿರಣದಲ್ಲಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಮಹಿಬಾ ಎಲಿನ್, ನಿವೃತ್ತ ಉಪ ನಿರ್ದೇಶಕ ರಾಜಪ್ಪ, ಸಿಲ್ಕ್ ಅಸೋಷಿಯೇಷನ್ ಪದಾಧಿಕಾರಿಗಳಾದ ನವೀನ್, ಚಂದ್ರಶೇಖರ್, ಪ್ರಸನ್ನ, ರವಿ, ಕಿರಣ್‌ಗೆರೆ ತ್ಯಾಗರಾಜ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!