Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ ಪ್ರಚಾರಕ್ಕೆ ಮೊಬೈಲ್ ಆಪ್ ಬಳಕೆ- ದರ್ಶನ್ ಪುಟ್ಟಣ್ಣಯ್ಯ

ಮುಂಬರುವ ಡಿಸೆಂಬರ್ ೨೦,೨೧ ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಉದ್ದೇಶಕ್ಕೆ ಮತ್ತು ಹೆಸರು ನೋಂದಾಯಿಸಲು ಮೊಬೈಲ್ ಆಪ್ ಒಂದನ್ನು ರೂಪಿಸಲಾಗುವುದು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಚಾರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಕಸಾಪ ಮತ್ತು ಸಮ್ಮೇಳನ ನೋಂದಣಿ ಸಮಿತಿಯೊಂದಿಗೆ ಚರ್ಚಿಸಿ ಸಮ್ಮೇಳನಕ್ಕೆ ಸದಸ್ಯರು ನೋಂದಾಯಿಸಲು ಮತ್ತು ಪ್ರಚಾರದ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಜೊತೆಗೆ ಪ್ರಚಾರ ಸಮಿತಿ ಜೊತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಪ್ರಮುಖ ಐದು ಉಪಸಮಿತಿಗಳನ್ನು ರಚಿಸಲಾಗುವುದು ಎಂದರು.

ಮುದ್ರಣ ಮಾಧ್ಯಮ ಪ್ರಚಾರ ಉಪಸಮಿತಿ, ಸಾಮಾಜಿಕ ಜಾಲತಾಣಗಳ ಮಾಧ್ಯಮ ಪ್ರಚಾರ ಉಪಸಮಿತಿ, ವಿದ್ಯುನ್ಮಾನ ಮಾಧ್ಯಮ ಪ್ರಚಾರ ಉಪಸಮಿತಿ, ಗ್ರಾಫಿಕ್ ವಿನ್ಯಾಸ ಮಾಧ್ಯಮ ಪ್ರಚಾರ ಉಪ ಸಮಿತಿ ಹಾಗೂ ಇತರೆ ತಂತ್ರಜ್ಞಾನಗಳ ಮಾಧ್ಯಮ ಪ್ರಚಾರ ಉಪಸಮಿತಿಗಳನ್ನು ರಚಿಸಲಾಗುವುದು. ಪ್ರಚಾರ ಸಮಿತಿಯಲ್ಲಿರುವ ಐದು ಸದಸ್ಯರನ್ನು ಪ್ರತಿ ಉಪಸಮಿತಿಗೆ ನೇಮಕ ಮಾಡಲಾಗುವುದು. ಆಯಾ ಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಕಾರ್ಯೋನ್ಮುಖ ರಾಗುತ್ತಾರೆ ಎಂದು ತಿಳಿಸಿದರು.

ಪ್ರಚಾರ ಕಾರ್ಯ ರೂಪಿಸುವ ಕಂಪನಿಗಳನ್ನು ಪಾರದರ್ಶಕವಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ಆಯ್ಕೆ ಮಾಡಲಾಗುವುದು ಎಂದರು.

ನಿಯಮಿತವಾಗಿ ಗೂಗಲ್ ಮೀಟ್ ಮೂಲಕ ಸಭೆಗಳನ್ನು ನಡೆಸುವುದರ ಜೊತೆಗೆ ಸಮ್ಮೇಳನ ಮುಗಿಯುವವರೆಗೆ ಪ್ರತಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗಳನ್ನು ಆಯೋಜಿಸಿ ಪ್ರಗತಿ ಪರಿಶೀಲಿಸಲಾಗುವುದು ಎಂದರು.

ಪ್ರಚಾರ ಚುರುಕುಗೊಳಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಜಾಥಾ ಪ್ರಭಾತಭೇರಿ ಕಾರ್ಯಕ್ರಮಗಳನ್ನು ಬಿಇಒಗಳ ನೇತೃತ್ವದಲ್ಲಿ ನಡೆಸಲಾಗುವುದು ಎಂದರು.

ಸಮಿತಿಯ ಸದಸ್ಯ ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಪದ್ಮ ಪುರಸ್ಕೃತರಾದ ಸಾಹಿತಿಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಜಿಲ್ಲೆಯ ಮಾಹಿತಿ ತಿಳಿಯಲು ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ರಸಪ್ರಶ್ನೆ ಸ್ಪರ್ಧೆ ನಡೆಸಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಮ್ಮೇಳನದ ಸಮಿತಿಯಲ್ಲಿ ಸ್ಥಾನ ಕಲ್ಪಿಸಿ ಅವರ ಮಾರ್ಗದರ್ಶನ ಪಡೆಯಬೇಕೆಂದರು. ಎಲ್ಲಾ ಸಮಿತಿಗಳಲ್ಲೂ ಒಂದಿಬ್ಬರು ಪತ್ರಕರ್ತರು ಇರಲಿ ಎಂದರು

ಸಭೆಯಲ್ಲಿ ಎಫ್‌ಎಂ ರೇಡಿಯೋ ಮೂಲಕ, ಚಿತ್ರಮಂದಿರಗಳಲ್ಲಿ ಸಾಕ್ಷ್ಯ ಚಿತ್ರ ಪ್ರದರ್ಶನದ ಮೂಲಕ ಪ್ರಚಾರ ಕೈಗೊಳ್ಳಬಹುದು ಎಂದು ಸದಸ್ಯರು ಸೂಚಿಸಿದರು.

ಸಭೆಯಲ್ಲಿ ಸಮ್ಮೇಳನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಸಮಿತಿ ಸದಸ್ಯ ಕಾರ್ಯದರ್ಶಿ ರಾಘವೇಂದ್ರ, ಸಂಚಾಲಕರಾದ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಹೆಚ್.ನಿರ್ಮಲ ಕಸಾಪ ಕಾರ್ಯದರ್ಶಿಗಳಾದ ಡಾ.ಹುಸ್ಕೂರು ಕೃಷ್ಣೇಗೌಡ, ಹರ್ಷ ವಿ ಪಣ್ಣೆದೊಡ್ಡಿ, ಬಿ.ಎಂ.ಅಪ್ಪಾಜಪ್ಪ, ಧನಂಜಯ,ಚಂದ್ರಲಿಂಗು, ಕೆ.ಶಂಭು ಕಬ್ಬನಹಳ್ಳಿ, ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!