ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ವೈಕಂ ಎಂಬ ಸ್ಥಳದಲ್ಲಿ ಪ್ರಸಿದ್ದವಾದ ಮಹಾದೇವ ಶಿವನ ದೇವಸ್ಥಾನ ಇದೆ. ಈ ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿನ ರಸ್ತೆಗಳನ್ನು ಶೂದ್ರ ಹಿಂದುಳಿದ ದಲಿತ ಜಾತಿಯ ಜನರಿಗೆ ಮುಚ್ಚಲ್ಪಟ್ಟಿದ್ದವು. ಈ ರಸ್ತೆಗಳಲ್ಲಿ ಅವರು ನಡೆದಾಡುವುದು ಸಹ ಅಪರಾಧ ವಾಗಿತ್ತು, ತಿರುವಾಂಕೂರು ರಾಜರೂ ವೈದಿಕರ ಪರವಾಗಿ ನಿಂತು ಕಠಿಣವಾದ ಶಿಕ್ಷೆ ವಿಧಿಸುತ್ತಿದ್ದರು.
ಇದರ ವಿರುದ್ದವಾಗಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಳುವಳಿ ರೂಪಿಸಿತ್ತು. ಇದಕ್ಕೆ ಸ್ವತಃ ಮಹಾತ್ಮ ಗಾಂಧಿ ಅವರೇ ಬೆಂಬಲ ಸೂಚಿಸಿದ್ದರು, ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಪೆರಿಯಾರ್ ಇದರ ಮುಂಚೂಣಿನಾಯಕರಾಗಿದ್ದರು, ಹೋರಾಟಕ್ಕೆ ಮಣಿದ ತಿರುವಾಂಕೂರು ರಾಜರು ದೇವಸ್ಥಾನದ ಮೂರು ದಿಕ್ಕಿನ ರಸ್ತೆಗಳನ್ನು ಎಲ್ಲಾ ಜಾತಿ ಜನರಿಗೆ ಮುಕ್ತ (open) ಮಾಡಿದರು, ಆದರೆ ಪೂರ್ವ ದಿಕ್ಕಿನಲ್ಲಿಯೂ ಸಹ ಅವಕಾಶ ನೀಡುವಂತೆ ಪೆರಿಯಾರ್ ಅವರ ನಾಯಕತ್ವದಲ್ಲಿ ಪುನಃ ಹೋರಾಟ ನಡೆಯಿತು, ಈ ಹೋರಾಟದಲ್ಲಿ ಪೆರಿಯಾರ್ ಅವರು ಎರಡು ಬಾರಿ ಜೈಲಿಗೆ ಹೋಗಿ ಬಂಧನಕ್ಕೆ ಒಳಪಡಬೇಕಾಯಿತು.
ಇತಿಹಾಸಲ್ಲಿ ವೈಕಂ ಹೋರಾಟ ಹಿಂದುಳಿದ ದಲಿತ ಜಾತಿಗಳ ಸ್ವಾಭಿಮಾನದ ಪ್ರತೀಕದ ಹೋರಾಟವಾಗಿ ದಾಖಲಾಗಿದೆ. ತಮಿಳುನಾಡು ಸರ್ಕಾರ ವೈಕಂ ಹೋರಾಟದ ನೂರು ವರ್ಷದ ಆಚರಣೆಯ ಭಾಗವಾಗಿ ಸ್ಥಾಪಿಸಿರುವ ವೈಕಂ ಪ್ರಶಸ್ತಿಗೆ ಕನ್ನಡದ ಹಿರಿಯ ಸಾಹಿತಿ ಹಾಗೂ ನಾಡಿನ ಸಾಕ್ಷಿ ಪ್ರಜ್ಞೆ ದೇವನೂರ ಮಹಾದೇವ ಅವರಿಗೆ ನೀಡಿ ಗೌರವಿಸಿದೆ.




