Wednesday, May 15, 2024

ಪ್ರಾಯೋಗಿಕ ಆವೃತ್ತಿ

ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿ : ಸಿದ್ದರಾಮಯ್ಯ


  • ನಾಗಮೋಹನ್ ದಾಸ್ ಸಮಿತಿ ವರದಿ ಅಂಗೀಕಾರಕ್ಕೆ ಆಗ್ರಹ 

  • ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಗೆ ಒತ್ತಾಯ

2011ರ ಜನಗಣತಿ ಪ್ರಕಾರ ಎಸ್.ಸಿಗಳು ಶೇ.17.15ರಷ್ಟಿದ್ದು, ಎಸ್.ಟಿಗಳು ಶೇ.6.95 ರಷ್ಟಿಸಿದ್ದಾರೆ. ಎರಡೂ ವರ್ಗ ಸೇರಿಸಿ, ಶೇ.24.10 ರಷ್ಟು ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18ರಷ್ಟಿದೆ. ಹೀಗಾಗಿ ಮೀಸಲಾತಿ  ಹೆಚ್ಚಳಕ್ಕೆ ಒತ್ತಾಯ ಬಂದಿದೆ, ಆದ್ದರಿಂದ ಕೂಡಲೇ ಮೀಸಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಾಗಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಅವರಿಗೆ ಮೀಸಲಾತಿ ನೀಡಬೇಕು ಎಂದು ಬಹಳ ವರ್ಷಗಳಿಂದ ಒತ್ತಾಯ ಇದೆ, ಅದನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಗಳಿಗೆ ಮೀಸಲಾತಿ ಎಸ್ಸಿಗಳಿಗೆ ಶೇ.15 ಹಾಗೂ ಎಸ್.ಟಿ ಗಳಿಗೆ ಶೇ.7.5 ರಷ್ಟು ಮೀಸಲಾತಿ ನೀಡಲಾಗಿದೆ. ಎರಡೂ ಸೇರಿಸಿದರೆ ಶೇ.22.5ರಷ್ಟು ಇದೆ. ಕರ್ನಾಟಕದಲ್ಲಿ ಎಸ್.ಸಿ ಗಳಿಗೆ ಶೇ.15 ಹಾಗೂ ಎಸ್.ಟಿಗಳಿಗೆ ಶೇ.3ರಷ್ಟು ಮೀಸಲಾತಿ ಇದ್ದು, ಒಟ್ಟು ಶೇ.18ರಷ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5ರಷ್ಟು ವ್ಯತ್ಯಾಸವಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸಿ ಹೋರಾಟ ಮಾಡುತ್ತಿದ್ದಾರೆ ಎಂದರು.

ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಅವರು 02-07-2020ರಲ್ಲಿ ವರದಿ ನೀಡಿದ್ದು, ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಾಗಿದ್ದು, ಇಂದಿನವರೆಗೂ ಈ ವರದಿ ಒಪ್ಪಿ ಅದನ್ನು ಜಾರಿ ಮಾಡಿಲ್ಲ. ಅದಕ್ಕಾಗಿ ಎಸ್ ಟಿ ಜನಾಂಗದ ವಾಲ್ಮೀಕಿ ಮಠದ ಸ್ವಾಮಿಜಿ ಧರಣಿ ಆರಂಭಿಸಿದ್ದಾರೆ. ನಾನು ಹಾಗೂ ಪರಿಶಿಷ್ಟ ಸಮುದಾಯದ ಶಾಸಕರು, ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದು, ಈ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಮೇಲ್ವರ್ಗದ ಬಡವರಿಗೆ ಒಂದೇ ದಿನದಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅನುಮತಿ ನೀಡಿ ಶೇ.10ರಷ್ಟು ಮೀಸಲಾತಿ ನೀಡಿದ್ದಾರೆ. ಆದರೆ ಇವರು 2 ವರ್ಷದಿಂದ ವರದಿ ನೀಡಿದ್ದರೂ ಅವರಿಗೆ ಯಾಕೆ ನೀಡಿಲ್ಲ? ಅವರಿಗೆ ಯಾವ ವರದಿ ಮೇಲೆ ನೀಡಿದರು, ಇವರಿಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದು., ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಗೆ ಬಂದು ಭಾಗವಹಿಸಿದ್ದಾರೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಬಂದು ಸಣ್ಣ ಗ್ರಾಮದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ. ಜತೆಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಎಲ್ಲ ವರ್ಗದ ಜನರ ಜತೆ ಹೆಜ್ಜೆ ಹಾಕಿ ನಮಗೆ ಶಕ್ತಿ ತುಂಬಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಅವರಿಗೆ ರಾಜ್ಯದ ಜನತೆ ಪರವಾಗಿ ಧನ್ಯವಾದ ಸಲ್ಲಿಸಿ ಅಭಿನಂದನೆ ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ಆ ಹೆಣ್ಮುಮಗಳು ಪಕ್ಷದ ಪರವಾಗಿ ನಿಂತು ಶಕ್ತಿ ತುಂಬಿದರು ಎಂದರು.

ನಾಗಮೋಹನ್ ದಾಸ್ ಅವರ ವರದಿ ಜಾರಿ ಆಗಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇದು ಭಾರತ ಜೋಡೋ ಯಾತ್ರೆಯ ಪ್ರಮುಖ ವಿಚಾರಗಳಲ್ಲಿ ಒಂದಾದ ಸಾಮಾಜಿಕ ನ್ಯಾಯದ ಭಾಗವಾಗಿದೆ. ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿ ಅವರು ಎಲ್ಲ ವರ್ಗದ ಜನರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ ಎಂದರು.

ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೈತರ ಹೆಸರಲ್ಲಿ ಸಾಕಷ್ಟು ಪ್ರಮಾಣ ಮಾಡಿತ್ತು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಮತ ಹಾಕಿಸಿಕೊಂಡು, ಎಂಟು ವರ್ಷದಲ್ಲಿ ಯಾವುದೇ ಆದಾಯ ಹೆಚ್ಚಳ ಮಾಡಿಲ್ಲ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ರೈತರಿಗೆ ಡಬಲ್ ದೋಖಾ ಆಗಿದೆ ಎಂದು ಬಹಳ ಸ್ಪಷ್ಟವಾಗಿದೆ ಎಂದರು.

ಇಂದು ರಾಹುಲ್ ಗಾಂಧಿ ಅವರು ಮಂಡ್ಯ ರೈತರ ಜತೆ ಮಾತನಾಡಿದ್ದು, ರೈತರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಇಲ್ಲಿನ ರೈತರು ನಮಗೆ Free Trade ಬದಲಿಗೆ Faire Trade ಬೇಕು ಎಂದು ಆಗ್ರಹಿಸಿದ್ದಾರೆ. ಅಂದರೆ ನಾವು ಬೆಳೆಯುತ್ತಿರುವ ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಕೇಂದ್ರದ ಕರಾಳ ಕಾನೂನಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆಯೇ ಹೊರತು ರೈತರ ಬದುಕು ಸುಧಾರಿಸಿಲ್ಲ ಎಂದರು.

ಇಂದು ಈ ಚರ್ಚೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರು ಕೂಡ ಆಗಮಿಸಿ ತಮ್ಮ ನೋವು ಹಂಚಿಕೊಂಡರು. ಮಂಡ್ಯದಲ್ಲಿ 150ಕ್ಕೂ ಹೆಚ್ಚು ರೈತರು ಕಳೆದ ನಾಲ್ಕು ವರ್ಷಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಬಹುತೇಕರಿಗೆ ಪರಿಹಾರವೂ ಸಿಕ್ಕಿಲ್ಲ ಎಂದು ದೂರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!