Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನಡೆದ ವೈರಮುಡಿ ಉತ್ಸವ

ಪಾಂಡವಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಲಕ್ಷಾಂತರ ಭಕ್ತರ ‘ಗೋವಿಂದ ಗೋವಿಂದ’ ಎಂಬ ನಾಮ ಜಪದ ಹರ್ಷೋದ್ಘಾರದ ನಡುವೆ ಶನಿವಾರ ರಾತ್ರಿ ನಡೆಯಿತು.

ಕರ್ನಾಟಕ, ತಮಿಳುನಾಡು,ಆಂಧ್ರಪ್ರದೇಶ,ಕೇರಳ ಮೊದಲಾದ ರಾಜ್ಯಗಳಿಂದ ಬಂದಿದ್ದ ಭಕ್ತರು ಶ್ರೀದೇವಿ, ಭೂದೇವಿ ಸಮೇತ ಹೂವಿನ ಪಲ್ಲಕ್ಕಿಯಲ್ಲಿ ವೈರಮುಡಿ ಧರಿಸಿ ಅಲಂಕೃತನಾಗಿದ್ದ ಶ್ರೀ ಚೆಲುವನಾರಾಯಣ ಸ್ವಾಮಿಯನ್ನು ಕಣ್ತುಂಬಿ ಕೊಂಡರು.ಚಲುವನಾರಾಯಣ ಸ್ವಾಮಿ ಗೋವಿಂದ,ವೆಂಕಟೇಶ್ವರ ಸ್ವಾಮಿ ಗೋವಿಂದ, ವೆಂಕಟರಮಣ ಗೋವಿಂದ ಎಂಬ ನಾಮ ಜಪ ಭಕ್ತರ ಬಾಯಲ್ಲಿ ಕೇಳಿ ಬರುತ್ತಿತ್ತು.

ರಾಜ ಬೀದಿಯ ಇಕ್ಕೆಲಗಳಲ್ಲೂ ಜನಸಾಗರವೇ ಸಾಲುಗಟ್ಟಿ ನಿಂತು ಚೆಲುವನಾರಾಯಣನ ದರ್ಶನ ಪಡೆದು ಪುಳಕಿತರಾದರು. ಶನಿವಾರ ರಾತ್ರಿ ಪ್ರಾರಂಭವಾದ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಇಂದು ನಸುಕಿನವರೆಗೂ ನಡೆದು,ಲಕ್ಷಾಂತರ ಭಕ್ತ ಸಾಗರದ ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿತ್ತು.

ಎಲ್ಲೆಲ್ಲೂ ಸಂಭ್ರಮ
ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೇಲುಕೋಟೆಯಲ್ಲಿ
ಸಂಭ್ರಮದ ವಾತಾವರಣ ಮನೆಮಾಡಿತ್ತು.

ವೈರಮುಡಿ ಉತ್ಸವ ಕಣ್ಣುಂಬಿಕೊಳ್ಳಲು ರಾಜ್ಯ, ಹೊರರಾಜ್ಯದಿಂದ ಲಕ್ಷಾಂತರ ಜನರು ಇಲ್ಲಿಗೆ ಬಂದಿದ್ದರು. ವಜ್ರಖಚಿತ ಕೀರೀಟ ಧರಿಸಿ ದೇವಾಲಯದಿಂದ ಹೊರಬಂದ ಚೆಲುವನಾರಾಯಣ ಸ್ವಾಮಿ ಮೂರ್ತಿಯನ್ನು ಕಂಡ ಲಕ್ಷಾಂತರ ಭಕ್ತರು ರೋಮಾಂಚನದಿಂದ, ಭಕ್ತಿ ಭಾವದಿಂದ ಪುಳಕಿತಗೊಂಡರು.

ಗಂಡುಭೇರುಂಡ ಸ್ವರೂಪಿ ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ನಿಂತು ಅಲಂಕಾರ ಸ್ವರೂಪಿಯಾಗಿದ್ದ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ವೈರಮುಡಿ ಧಾರಣೆ ಮಾಡಲಾಯಿತು. ತಳಿರು, ತೋರಣ, ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವಾಲಯದ ಚತುರ್ವೀದಿಯಲ್ಲಿ ವೈರಮುಡಿ ಉತ್ಸವ ಸಂಚರಿಸಿತು.ರಾಜ ಬೀದಿಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಭಕ್ತರು ವೈರಮುಡಿ ವೀಕ್ಷಿಸಿ ಭಾವಪರವಶರಾದರು.

ಗರುಡೋತ್ಸವ
ಉತ್ಸವ ಆರಂಭವಾಗುವುದಕ್ಕೂ ಮುನ್ನ ಗರುಡೋತ್ಸವ ನಡೆಯಿತು.ಗರುಡನೇ ನೇರವಾಗಿ ಚೆಲುವನಾ ರಾಯಣಸ್ವಾಮಿಗೆ ವೈರಮುಡಿ ಧಾರಣೆ ಮಾಡುವ ಸಾಂಕೇತವಾಗಿ ಗರುಡೋತ್ಸವ ನಡೆಯಿತು. ನಂತರ ಹಾಗೂ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆದು ವೈರಮುಡಿ ಉತ್ಸವ ದೇವಾಲಯದಿಂದ ರಾಜಬೀದಿಗೆ ಪ್ರವೇಶ ಪಡೆಯಿತು.

ಆಕರ್ಷಕ ದೀಪಾಲಂಕಾರ
ಮೇಲುಕೋಟೆಯಲ್ಲಿರುವ ಎಲ್ಲಾ ದೇವಾಲಯಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಕಲ್ಯಾಣಿಗಳಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು.ಅಕ್ಕ-ತಂಗಿ ಕೊಳ, ಚೆಲುವನಾರಾಯಣಸ್ವಾಮಿ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೂ ದೀಪಾಲಂಕಾರ ಮಾಡಲಾಗಿತ್ತು. ಮೇಲುಕೋಟೆ ಪಟ್ಟಣ ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಜನರ ಮನ ಸೂರೆಗೊಂಡಿತು.

ವೈರಮುಡಿಗೆ ಪೂಜೆ
ಶನಿವಾರ ಬೆಳಿಗ್ಗೆ 6.30 ಕ್ಕೆ ಮಂಡ್ಯದ ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಎಸ್ಪಿ ಎನ್.ಯತೀಶ್ ವೈರಮುಡಿ, ರಾಜಮುಡಿ ತಿರುವಾಭರಣ ಹೊರತೆಗೆದು ಪೂಜೆ ಸಲ್ಲಿಸಿದರು.ನಂತರ ಮಂಡ್ಯ ನಗರದ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಭಕ್ತರು ವೈರಮುಡಿ, ರಾಜಮುಡಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಮಂಡ್ಯದಿಂದ ಮೇಲುಕೋಟೆಗೆ ಹೊರಟ ವೈರಮುಡಿ, ರಾಜಮುಡಿಗೆ ಮಾರ್ಗಮಧ್ಯೆ ಸುಗುವ ಹಳ್ಳಿಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!