Friday, September 20, 2024

ಪ್ರಾಯೋಗಿಕ ಆವೃತ್ತಿ

ಕಳ್ಳರ ಹಿಡಿಯಲು ಕಳ್ಳರೇ ಹೋಗಬೇಕಾದ ಸ್ಥಿತಿ ನಿರ್ಮಾಣ: ವಾಟಾಳ್ ನಾಗರಾಜ್ ವ್ಯಂಗ್ಯ

ಇಂದು ಊರೆಲ್ಲಾ ಕಳ್ಳರೇ ತುಂಬಿದ್ದು, ಕಳ್ಳರನ್ನು ಹಿಡಿಯಲು ಕಳ್ಳರೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್ ಪೆನ್ ಡ್ರೈವ್ ವಿಚಾರ ನಾಚಿಕೆಗೇಡಿನ ಸಂಗತಿ.ಇಂದು ಊರೆಲ್ಲಾ ಕಳ್ಳರೇ ತುಂಬಿದ್ದಾರೆ. ಇವನು ಕಳ್ಳ, ಅವನು ಕಳ್ಳ, ಹಿಡಿವವನು ಕಳ್ಳ ಎಂಬ ವ್ಯವಸ್ಥೆ ನಮ್ಮ ಮುಂದೆ ಇದೆ.ಪ್ರಜ್ವಲ್ ಪ್ರಕರಣದಿಂದ ಇಡೀ ದೇಶ, ಪ್ರಪಂಚಕ್ಕೆ ಕರ್ನಾಟಕದಿಂದ ಕೆಟ್ಟ ಸುದ್ದಿ ಹೋಗಿದೆ.ನಾವು ನಿಜಕ್ಕೂ ರಾಜಕಾರಣಿ ಗೌರವಸ್ಥನಾಗಿದ್ದರೆ, ಪ್ರಾಮಾಣಿಕನಾಗಿದ್ದರೆ ಎಲ್ಲರೂ ರಾಜೀನಾಮೆ ನೀಡಬೇಕಿತ್ತು.ರಾಜ್ಯದಲ್ಲಿಇಂತಹ ಘಟನೆ ನಡೆದಿದೆ.ಇದರ ನೈತಿಕ ಹೊಣೆ ಹೊತ್ತು ಸಂಸದ, ಸರ್ಕಾರ, ವಿರೋಧ ಪಕ್ಷ ಎಲ್ಲರೂ ರಾಜೀನಾಮೆ ನೀಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿತ್ತು. ಆದರೆ ಇಂದು ಅಂತಹ ವಾತಾವರಣ ಇಲ್ಲವಾಗಿದೆ ಎಂದು ಟೀಕಿಸಿದರು.

ಕಳೆದ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ಪ್ರಜ್ವಲ್ ರೇವಣ್ಣ ವಿಚಾರ ಬಿಟ್ಟರೆ ಬೇರೇನೂ ಬರುತ್ತಿಲ್ಲ.ದಿನನಿತ್ಯ ಟಿವಿಯನ್ನು ನೋಡಲು ಆಗುತ್ತಿಲ್ಲ. ದಿನನಿತ್ಯ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಸುತ್ತಲೇ ಮಾಧ್ಯಮಗಳು ಸುತ್ತುತ್ತಿವೆ. ಈ ನಾಡಿನಲ್ಲಿ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಬಿಟ್ಟು ಪೆನ್ ಡ್ರೈವ್ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಅಂತವರು ಈಗಿಲ್ಲ

1962ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದರು. ತುಮಕೂರು ಜಿಲ್ಲೆಯ ಗಾಂಧಿವಾದಿ ಎಂ.ವಿ. ರಾಮರಾವ್ ಗೃಹ ಮಂತ್ರಿ ಆಗಿದ್ದರು.ಆಗ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯಿತು. ಈ ವಿಚಾರವಾಗಿ ಸದನದಲ್ಲಿ ಭಾರೀ ಕೋಲಾಹಲವೇ ನಡೆಯಿತು.

ಶಿವಪ್ಪ ಗೋಪಾಲಗೌಡರಂತಹವರು ವಿಧಾನಸಭೆಯಲ್ಲಿದ್ದರು.ಸದನದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ, ಅವರ ಪಕ್ಕದಲ್ಲಿ ಗೃಹ ಮಂತ್ರಿ ಎಂ.ವಿ. ರಾಮರಾವ್ ಕುಳಿತಿದ್ದರು. ಸದನದಲ್ಲಿ ಎಲ್ಲರೂ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ, ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ನಡೆದಿದ್ದರೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಈ ಮಧ್ಯೆ ಗೃಹ ಮಂತ್ರಿ ರಾಮರಾವ್ ಏನನ್ನೋ ಬರೆಯುತ್ತಾ ಇದ್ದರು. ಎಲ್ಲರ ಮಾತು ಕೇಳಿಸಿಕೊಂಡ ನಂತರ ಗೃಹ ಮಂತ್ರಿ ರಾಮರಾವ್ ಎದ್ದು,ನಾನು ಎಲ್ಲರ ಮಾತುಗಳನ್ನು ಕೇಳಿದ್ದೇನೆ. ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ನಡೆದಿದ್ದರಿಂದ ಇದಕ್ಕೆ ಪೊಲೀಸ್ ಇಲಾಖೆಯೇ ಹೊಣೆ, ಗೃಹ ಮಂತ್ರಿಯಾಗಿ ನಾನು ಕೂಡ ಇದರ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಾವು ಬರೆದು ಇಟ್ಟುಕೊಂಡಿದ್ದ ರಾಜೀನಾಮೆ ಪತ್ರವನ್ನು ಸದನದಲ್ಲಿ ಸಿಎಂ ನಿಜಲಿಂಗಪ್ಪನವರಿಗೆ ನೀಡಿದರು. ನಿಜಲಿಂಗಪ್ಪನವರು ಕೂಡ ರಾಜೀನಾಮೆ ನೀಡುವುದು ಬೇಡ ಎನ್ನದೆ, ಕೂಡಲೇ ರಾಜೀನಾಮೆ ಪತ್ರ ಪಡೆದು ರಾಜ್ಯಪಾಲರಿಗೆ ಕಳುಹಿಸಿದರು. ಆದರೆ ರಾಮರಾವ್, ನಿಜಲಿಂಗಪ್ಪ ಅಂತಹ ವ್ಯಕ್ತಿಗಳು ಈಗಿಲ್ಲ ಎಂದರು.

ರೇಟ್ ಫಿಕ್ಸ್

ಕಳೆದ 25-30 ವರ್ಷಗಳಿಂದ ಚುನಾವಣೆ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಪ್ರತಿ ಚುನಾವಣೆಯಲ್ಲೂ ದುಡ್ಡಿದ್ದವರಿಗೆ ಆದ್ಯತೆ ನೀಡಲಾಗುತ್ತಿದೆ. ನಾನು ಮಂತ್ರಿ ನನ್ನ ಮಗನಿಗೆ ಟಿಕೆಟ್ ಕೊಡಿ, ನಾನು ಎಂಎಲ್ಎ ನನ್ನ ಹೆಂಡತಿಗೆ ಟಿಕೆಟ್ ಕೊಡಿ, ನನ್ನ ಬಂಧು-ಬಳಗಕ್ಕೆ ಟಿಕೆಟ್ ಕೊಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಎಂಎಲ್ಎಗೆ ಇಷ್ಟು, ಎಂಪಿಗೆ ಇಷ್ಟು ಎಂದು ರೇಟ್ ಫಿಕ್ಸ್ ಆಗಿದೆ. ಪ್ರಾಮಾಣಿಕರು ರಾಜಕಾರಣಕ್ಕೆ ಬರಲು ಆಗುತ್ತಿಲ್ಲ. ಇದನ್ನೆಲ್ಲಾ ಸರಿಪಡಿಸಬೇಕಾದ ಜವಾಬ್ದಾರಿ ಮತದಾರರು,ಮಾಧ್ಯಮಗಳ ಕೈಲಿದೆ ಎಂದರು.

ಗೋಷ್ಠಿಯಲ್ಲಿ ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಬೇಕರಿ ರಮೇಶ್, ಜೋಶಿ , ಚಂದ್ರಶೇಖರ್, ವಿ.ಕುಮಾರ್ ಉಪಸಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!