Friday, September 20, 2024

ಪ್ರಾಯೋಗಿಕ ಆವೃತ್ತಿ

ವಿಜಯ್ ರಾಮೇಗೌಡರ ಸಮಾಜಸೇವೆ ಸದ್ಬಳಕೆಯಾಗಲಿ- ದೇವರಾಜು

ಮಿತ್ರ ಫೌಂಡೇಷನ್ ಮೂಲಕ ಶಿಕ್ಷಣ, ಆರೋಗ್ಯ, ಕ್ರೀಡೆ ಸಮಾಜಮುಖಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತಿರುವ ವಿಜಯ ರಾಮೇಗೌಡರ ಸಾಮಾಜಿಕ ಸೇವೆಯನ್ನು ತಾಲ್ಲೂಕಿನ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಕರೆ ನೀಡಿದರು.

ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೇಲ್ ನ ಸುಲೋಚನಮ್ಮ ಪಾರ್ಟಿ ಹಾಲ್ ನಲ್ಲಿ ಮಿತ್ರ ಫೌಂಡೇಷನ್ ನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಜಯ ರಾಮೇಗೌಡರಂತಹ ಹಲವು ಕೊಡುಗೈ ದಾನಿಗಳು ತಾಲ್ಲೂಕಿನಲ್ಲಿ ಹಲವರಿದ್ದಾರೆ, ಅವರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಲು ನಾವೆಲ್ಲ ಮುಂದಾಗಬೇಕು, ತಾಲ್ಲೂಕಿನ ಕೆಲವು ಅಧಿಕಾರಿಗಳು ಕೆ.ಎಸ್.ಎಸ್., ಐಎಎಸ್, ಐಪಿಎಸ್, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರದ ಉನ್ನತ ಹುದ್ದೆಯಲ್ಲಿದ್ದಾರೆ. ಅವರೆಲ್ಲರನ್ನು ಒಗ್ಗೂಡಿಸಿ ತಾಲ್ಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಅಥವಾ ಉನ್ನತ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ತಾಲ್ಲೂಕಿನ ನಿರುದ್ಯೋಗಿ ಯುವಕರು ಮದ್ಯಪಾನದ ಚಟಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿ, ತಾಲ್ಲೂಕಿನ ಜನತೆ ಆರ್ಥಿಕ ಸ್ಥಿತಿವಂತರಾಗುತ್ತಿರುವ ಕಾಲಘಟ್ಟದಲ್ಲಿ ಯುವಜನಾಂಗವನ್ನು ಸನ್ಮಾರ್ಗದತ್ತ ಕರೆದೊಯ್ಯಲು ನಾವೆಲ್ಲರೂ ಮುಂದಾಗಬೇಕು. ವಿಜಯ ರಾಮೇಗೌಡರಿಗೆ ಉನ್ನತ ಮಟ್ಟ ಸಂಪರ್ಕಗಳಿದ್ದು, ಸಮಾಜಮುಖಿ ಕಾರ್ಯಕ್ಕೆ ಅವರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

nudikarnataka.com

ಜಿ.ಪಂ.ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿ, ಮಿತ್ರ ಫೌಂಡೇಷನ್ ಮೂಲಕ ಮೈಸೂರು ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ತೆರೆಮರೆಯಲ್ಲಿ ಸಮಾಜಸೇವೆಗೆ ನಿರತರಾಗಿರುವ ವಿಜಯ ರಾಮೇಗೌಡರಿಂದ ಹಲವರಿಗೆ ಅನುಕೂಲವಾಗಿದೆ. ಆರ್ಥಿಕ ಸ್ಥಿತಿವಂತರಲ್ಲಿ ಸಮಾಜ ಸೇವೆಗೈಯುವ ಕಳಕಳಿ ಇರುವುದು ವಿರಳ. ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಸಮಾಜಕ್ಕೆ ಸದ್ಬಳಕೆ ಮಾಡುತ್ತಿರುವ ವಿಜಯ ರಾಮೇಗೌಡರಿಗೆ ಭವಿಷ್ಯದಲ್ಲಿ ಒಳಿತಾಗಲಿ ಎಂದು ಹಾರೈಸಿದರು.

ಮಿತ್ರ ಪೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ವೃದ್ದ ತಂದೆ ತಾಯಿಗಳನ್ನು ಇಂದಿನ ಜನಾಂಗ ಕಡೆಗಣಿಸುತ್ತಿರುವುದನ್ನು ಕಂಡು ಅವಕೃಪೆಗೆ ಒಳಗಾದ ಹಿರಿಯರನ್ನು ಸಲುಹುವ ಉದ್ದೇಶದಿಂದ 2017ರಲ್ಲಿ ಮಿತ್ರ ಪೌಂಡೇಷನ್ ಆರಂಭಿಸಲಾಯಯಿತು. ಇದಕ್ಕೆ ನನ್ನ ತಂದೆ ಪ್ರೇರಣೆಯಾದರು. ನನ್ನ ದುಡಿಮೆಯ ಶೇ.10ರಷ್ಟು ಪಾಲನ್ನು ಮಿತ್ರ ಪೌಂಡೇಷನ್ ಮೂಲಕ ಕ್ರೀಡೆ, ಶಿಕ್ಷಣ, ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳ ಉನ್ನತಿಗೆ ಸದ್ಬಳಕೆ ಮಾಡಲಾಗುತ್ತಿದೆ, ನೊಂದವರ ಸೇವೆಯನ್ನು ಮಾಡುವ ಮೂಲಕ ವಿದ್ಯಾವಂತ ಯುವಕರಿಗೆ ಉತ್ತಮ ದಾರಿ ತೋರಬೇಕೆಂಬುದೇ ಫೌಂಡೇಷನ್ ಉದ್ದೇಶವಾಗಿದ್ದು, ಮುಂಬರುವ ದಿನದಲ್ಲಿ ತಾಲ್ಲೂಕಿನ ಕೃಷಿ ಕ್ಷೇತ್ರದಲ್ಲಿ ಕೌಶಲ್ಯ ವೃದ್ದಿಸುವ ಹೊಣೆಗಾರಿಕೆ ನಿರ್ವಹಿಸಿ ಯುವಕರಿಗೆ ಸ್ವಯಂ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುವುದೆಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ಮಾತನಾಡಿ, ಕಳೆದ ಒಂದೂವರೆ ದಶಕದಿಂದ ಮೈಸೂರಿನಲ್ಲಿ ಹಲವು ಸಾಮಾಜಿಕ ಸೇವೆಗೈಯುತ್ತಿರುವ ವಿಜಯ್ ರಾಮೇಗೌಡರು ಕಳೆದ 3 ವರ್ಷಗಳಿಂದ ತಾಲ್ಲೂಕಿನ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ. ಇವರ ಜನಪರ ಕಾರ್ಯಕ್ಕೆ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವಾರು ನೀರಾವರಿ ಯೋಜನೆಗಳು ಕುಂಠಿತವಾಗಿವೆ, ಕಳೆದ 25 ವರ್ಷಗಳ ಹಿಂದೆ ಮಂಜೂರಾಗಿದ್ದ ಹೊಸಹೊಳಲು ಮೇಲ್ಗಾಲುವೆ ಲುವೆ ಕಾಮಗಾರಿ, ಶೀಳನೆರೆ ಮತ್ತು ಸಂತೇಬಾಚಹಳ್ಳಿ ಏತನೀರಾವರಿ ಯೋಜನೆಗೆ ಅಗತ್ಯ ಅನುದಾನ ತರಲು ನಾವೆಲ್ಲ ಒಂದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಸಮಾಜದ ಒಳ್ಳೆಯ ಕೆಲಸಗಳಿಗೆ ಸಹಾಯ ಮಾಡುವ ಕೊಡುಗೈದಾನಿಗಳು ಹಲವರಿದ್ದಾರೆ, ಅದೇ ಸಾಲಿನಲ್ಲಿ ಮುಂದುವರಿಯುತ್ತಿರುವ ವಿಜಯ ರಾಮೇಗೌಡರ ಸಮಾಜ ಸೇವೆಯ ತುಡಿತ ಬಡ ಜನರಿಗೆ ಸಹಾಯವಾಗಲಿ, ಆ ಮೂಲಕ ಅವರಿಗೂ ಒಳಿತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕೆ.ಎಸ್.ಸೋಮಶೇಖರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಕೆ.ಹರಿಚರಣ್ ತಿಲಕ್ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಪಿ.ಎಲ್.ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಗೋವಿಂದರಾಜು, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ದಿವಾಕರ್, ಸಲ್ಲು, ಮುಖಂಡರಾದ ನಂಜಪ್ಪ, ವೆಂಕಟಪ್ಪ, ಪತ್ರಕರ್ತ ನೀಲಕಂಠ ಉಪಸ್ಥಿತರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!