Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವಮಾನವ ಸಂದೇಶವನ್ನು ಇಡೀ ನಾಡಿಗೆ ಸಾರುವಂತಹ ಕೆಲಸ ಆಗಬೇಕು : ಕೆ.ಟಿ. ಹನುಮಂತು

ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಇಡೀ ನಾಡಿಗೆ ಸಾರುವಂತಹ ಕೆಲಸ ಆಗಬೇಕೆಂದು ಕೃಷಿಕ ಲಯನ್ ಸಂಸ್ಥೆಯ ಆಡಳಿತ ಅಧಿಕಾರಿ ಕೆ.ಟಿ. ಹನುಮಂತು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ರೈತ ಸಭಾಂಗಣದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಸಭೆ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕೃಷಿಕ ಲಯನ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಮತ್ತು ಸಾಹಿತಿಗಳು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮ ದಿನಾಚರಣೆ ಪ್ರಯುಕ್ತ ಮಾಲಾರ್ಪಣೆ ಹಾಗೂ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಯುವ ಸಮುದಾಯಕ್ಕೆ, ಸಾರ್ವಜನಿಕರಿಗೆ ಸೇರಿದಂತೆ ಎಲ್ಲರಿಗೂ ರಾಷ್ಟಕವಿ ಕುವೆಂಪು ಅವರ ವೈಚಾರಿಕ ಸಂದೇಶವನ್ನು ನಿರಂತರವಾಗಿ ಪ್ರಚುರಪಡಿಸುವ ಕಾರ್ಯವಾಗಬೇಕಿದೆ ಎಂದು ನುಡಿದರು.

ಏಕೆಂದರೆ ಇಂದಿನ ಕಾಲಘಟ್ಟದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಕುವೆಂಪು ಅವರ ವೈಜ್ಞಾನಿಕ, ವೈಚಾರಿಕ ಚಿಂತನೆಗಳು, ವಿಶ್ವಮಾನವ ಸಂದೇಶಗಳನ್ನು ಅರಿತು ಬಾಳಬೇಕಿದೆ ಎಂದು ತಿಳಿಸಿದರು.

ಕುವೆಂಪು ಅವರ ಬಗ್ಗೆ ಸಾಕಷ್ಟು ಮಾಹಿತಿ ಎಲ್ಲರಿಗೂ ತಿಳಿದಿದೆ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಜ್ಞಾನಪೀಠ ಪುರಸ್ಕೃತ ತಂದುಕೊಟ್ಟವರು.2ನೇ ರಾಷ್ಟ್ರಕವಿಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ, ಅವರ ಸಮಗ್ರ ಸಾಹಿತ್ಯಕ್ಕೆ ಯಾವೆಲ್ಲಾ ಪುರಸ್ಕಾರಗಳು, ಪ್ರಶಸ್ತಿಗಳು, ಗೌರವಗಳು ಲಭಿಸಬೇಕಿತ್ತೊ ಅವೆಲ್ಲಾ ಲಭಿಸಿವೆ ಎಂದು ಹೇಳಿದರು.

ಕುವೆಂಪು ಅವರ ಜನ್ಮದಿನವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ, ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಬಿತ್ತರಿಸುವ ಕಾರ್ಯ ಮಾಡುವ ಮೂಲಕ ಕುವೆಂಪು ಅವರನ್ನು ಸ್ಮರಿಸಿಕೊಳ್ಳೋಣ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಪ್ರಾಧ್ಯಾಪಕ ಸಾಹಿತಿ ಡಾ.ಶಂಕರೇಗೌಡ ಅವರನ್ನು ಗಣ್ಯರು ಅಭಿನಂದಿಸಿದರು. ಗಾಯಕ ಪ್ರೊ.ಡೇವಿಡ್ ಮತ್ತು ತಂಡದವರು ಕುವೆಂಪು ವಿರಚಿತ ಹಲವು ಗೀತೆಗಳು, ಕವನಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ,ಕಸಾಪ ತಾಲೂಕು ಅಧ್ಯಕ್ಷ ಮಂಜು ಮುತ್ತಗೆರೆ, ನಗರ ಘಟಕ ಅಧ್ಯಕ್ಷೆ ಸುಜಾತ ಕೃಷ್ಣ, ಅಂಜನಾ ಶ್ರೀಕಾಂತ್, ಸಾಹಿತಿ ಶ್ರೀನಿವಾಸ್ ಶೆಟ್ಟಿ, ಲಿಂಗಣ್ಣ ಬಂಧುಕರ್, ಧರಣೇಂದ್ರಯ್ಯ ಚಿತ್ರ ನಟಿ ಪ್ರೇರಣ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!