Friday, November 20, 2026

ಪ್ರಾಯೋಗಿಕ ಆವೃತ್ತಿ

ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತನಾಡಲು ನನಗೆ ಮತ ನೀಡಿ: ವಾಟಾಳ್ ನಾಗರಾಜ್

ಪ್ರಸ್ತುತ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಮರ್ಥವಾಗಿ ಮಾತನಾಡಲು ನನಗೆ ಮತ ನೀಡಬೇಕೆಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಮೇಲ್ಮನೆ ವಿಧಾನ ಪರಿಷತ್ತಿಗೆ ಬಹಳ ಒಳ್ಳೆಯ ಜನರು ಆಯ್ಕೆಯಾಗಿ ಬರುತ್ತಿದ್ದರು. ಆದರೆ ಇಂದು ವಿಧಾನ ಪರಿಷತ್ ಸದಸ್ಯರ ಆಯ್ಕೆಯನ್ನು ನೋಡಿದಾಗ ಸಂಕಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ ಗಾಂಭೀರ್ಯ ಕಳೆದುಕೊಂಡಿದ್ದು ಯಾರನ್ನು ಬೇಕಾದರೂ ನಾಮಕರಣ ಮಾಡುವ ಪರಿಪಾಠ ನಡೆಯುತ್ತಿದೆ. ವಿಧಾನ ಪರಿಷತ್ತಿಗೂ ಕುಟುಂಬಸ್ಥರನ್ನು ನಿಲ್ಲಿಸುವ, ನಾಮಕರಣ ಮಾಡುವ ಸ್ಥಿತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ಗುಬ್ಬಿ ವೀರಣ್ಣ, ಬಿ. ಜಯಶ್ರೀ ಅಂತಹ ಕಲಾವಿದರು, ಸಾಹಿತಿಗಳು ವಿಧಾನ ಪರಿಷತ್ತಿನಲ್ಲಿ ಕಾಣುತ್ತಿದ್ದರು. ಆದರೆ ಇಂದು ಇಂಥವರ ಆಯ್ಕೆ ನಡೆಯುತ್ತಿಲ್ಲ. ವಿಧಾನ ಪರಿಷತ್ತಿಗೆ 75 ಮಂದಿ ಆಯ್ಕೆಯಾಗಬೇಕು. ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಮೇಲ್ಮನೆಯ ಗಾಂಭೀರ್ಯ ಹೊರಟು ಹೋಗಿದೆ ಅನ್ನಿಸುತ್ತದೆ. ಎ.ಕೆ. ಸುಬ್ಬಯ್ಯ, ಎಂ. ಸಿ.ನಾಣಯ್ಯ ಅಂಥವರು ಈಗ ಇಲ್ಲ.ರಾಜ್ಯದ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಮತ್ತು ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಾನು ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಸಭೆಯೊಂದರಲ್ಲಿ ಅವರಿಗೆ ಕನ್ನಡದಲ್ಲಿಯೇ ಭಾಷಣ ಮಾಡಬೇಕು ಎಂದು ಗಟ್ಟಿಯಾಗಿ ಹೇಳಿದ್ದೆ. ನನ್ನ ಹೋರಾಟ ತಡೆಯಲಾರದೆ ಖುರ್ಷಿದ್ ಆಲಂ ಖಾನ್ ರವರು ಸಭೆಯಿಂದಲೇ ನಿರ್ಗಮಿಸಿದರು. ಇತ್ತೀಚೆಗೆ ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಸಭೆಯೊಂದರಲ್ಲಿ ಸಿಕ್ಕಿದ್ದರು. ಅವರು ಹಿಂದಿ ಭಾಷಿಕರಾದರೂ ಸಹ ಅವರಿಗೆ ನೀವು ಮನಸು ಮಾಡಿದರೆ ಮೂರು ತಿಂಗಳಲ್ಲಿ ಕನ್ನಡ ಕಲಿಯಬಹುದು. ಒಬ್ಬ ಕನ್ನಡ ಪಂಡಿತರನ್ನು ನೇಮಕ ಮಾಡಿಕೊಂಡು ಕನ್ನಡ ಭಾಷೆ ಕಲಿಯಿರಿ ಎಂದು ಸಲಹೆ ನೀಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿಂದೆ ರಾಜ್ಯಪಾಲರಾಗಿದ್ದ ರಮಾದೇವಿಯವರು ತೆಲುಗು ಭಾಷಿಕರಾಗಿದ್ದರೂ, ಕನ್ನಡ ಕಲಿತು ಮಾತನಾಡಿದ್ದರು ಎಂದು ತಿಳಿಸಿದರು.

ಹೆದರದೆ ಮತ ಚಲಾಯಿಸಿ

ದಕ್ಷಿಣ ಶಿಕ್ಷಕರ ಕ್ಷೇತ್ರದ ನೋಂದಾಯಿತ ಶಿಕ್ಷಕರು ಯಾರಿಗೂ ಹೆದರದೆ ನಿಮಗೆ ಅರ್ಹ ಎನಿಸುವ ವ್ಯಕ್ತಿಗೆ ಮತ ನೀಡಬೇಕು. ಶಾಸಕ, ಸಚಿವ ಲ,ಸಂಸದ ಯಾರಿಗೂ ಹೆದರದೆ ಪ್ರಾಮಾಣಿಕವಾಗಿ ಮತ ನೀಡಬೇಕು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಒಂದು ದಿನವೂ ಸದನಕ್ಕೆ ಗೈರು ಹಾಜರಾಗಿರಲಿಲ್ಲ.ಈ ಬಗ್ಗೆ ಈಗಿನ ಮುಖ್ಯಮಂತ್ರಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಅನ್ನೋದು ಕಲುಷಿತವಾಗಬಾರದು. ಈ ಹಿನ್ನಲೆಯಲ್ಲಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಶಿಕ್ಷಕರನ್ನು ಅನೇಕ ಸಮಸ್ಯೆಗಳು ಕಾಡುತ್ತಿದ್ದು, ಕೆಟ್ಟ ರಾಜಕೀಯ ಪರಿಸ್ಥಿತಿಯ ಬಗ್ಗೆ ಶಿಕ್ಷಕರಲ್ಲಿ ಅರಿವು ಮೂಡಬೇಕು.ಸಮಸ್ಯೆಗಳ ಪರಿಣಾಮಕಾರಿಯಾಗಿ ಬಗೆಹರಿಸಲು ನನಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಬೇಕರಿ ರಮೇಶ್, ಜೋಶಿ , ಚಂದ್ರಶೇಖರ್, ವಿ.ಕುಮಾರ್ ಉಪಸಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ