Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕ: ಮಂಗಲ ಯೋಗೇಶ್

ಸಹಭಾಗಿತ್ವದ ನೀರಾವರಿ ಆಡಳಿತ ನಡೆಸಲು ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡಬೇಕೆಂದು ಮಂಗಲ ನೀರು ಬಳಕೆದಾರರ ಸಹಕಾರ ಸಂಘದ ನಿರ್ದೇಶಕ ಮಂಗಲ ಯೋಗೇಶ್ ಆಗ್ರಹ ಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಭಾಗಿತ್ವದಲ್ಲಿ ನೀರಾವರಿ ಆಡಳಿತವನ್ನು ಪ್ರಾರಂಭಿಸಿ ಆ ಮೂಲಕ ರೈತರಲ್ಲಿ ನೀರು ನಿರ್ವಹಣೆ, ನೀರಿನ ಮಿತ ಬಳಕೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯೊಡನೆ ಪ್ರಾರಂಭಿಸಿದ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಅವಶ್ಯಕವಾಗಿದೆ. ಹಾಗಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲವರ್ಧನೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಮೂರು ದಶಕಗಳಿಂದಲೂ ನೀರು ಬಳಕೆದಾರರ ಸಹಕಾರ ಸಂಘಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಾಧಿಸಿಲ್ಲ. ಈ ಸಂಬಂಧ ನೀರು ಬಳಕೆದಾರರ ಸಹಕಾರ ಸಂಘ, ವಿತರಣಾ ವ್ಯಾಪ್ತಿಯ ಒಕ್ಕೂಟ, ಅಣೆಕಟ್ಟೆ ವ್ಯಾಪ್ತಿಯಲ್ಲಿ ಯೋಜನಾ ಮಟ್ಟದ ಮಹಾಮಂಡಳ, ರಾಜ್ಯಮಟ್ಟದಲ್ಲಿ ಶೃಂಗ ಮಹಾ ಮಂಡಳಗಳ ರಚನೆಯನ್ನು ಜರೂರಾಗಿ ಮಾಡಬೇಕಿದೆ ಎಂದರು.

ವಿಕೇಂದ್ರಿತ ಸಂಘಗಳ ಕಾರ್ಯ ಚಟುವಟಿಕೆಗಳು ಪ್ರಸಕ್ತ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಯೋಜನೆಗಿಂತ ಮುನ್ನ 2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯಿದೆಗೆ ತಿದ್ದುಪಡಿ ತಂದಿರುವುದು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಸಹಕಾರಿಯಾಗಿದ್ದು,ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಷ್ಟ್ರೀಯ ಬ್ಯಾಂಕುಗಳು ರೈತರಿಗೆ ಸಾಲ ವಿತರಿಸುವಾಗ ನೀರು ಬಳಕೆದಾರರ ಸಹಕಾರ ಸಂಘಗಳಿಂದಲೇ ಬಾಕಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಬೇಕು. ಕೇಂದ್ರ ಸರ್ಕಾರದ ಧನಸಹಾಯದ ಕಾರ್ಯಕ್ರಮದಲ್ಲಿ ನೀರು ಬಳಕೆದಾರರ ಸಂಘಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು .ವಾರ್ಷಿಕ ಕಾರ್ಯ ಧನವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಬೇಕು. ವಿಸಿ ನಾಲಾ ಆಧುನಿಕರಣ ಕಾಮಗಾರಿಯನ್ನು ನಿಲ್ಲಿಸಿ ಮುಂಗಾರಿನಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಮಹಾಮಂಡಲಗಳಿಗೆ ಶೇರುಧನವಾಗಿ ಒಂದು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೊತ್ತತ್ತಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ರವಿ, ಎಂ.ಬಿ ಸುರೇಶ, ಚನ್ನಪ್ಪ, ಚಂದ್ರಶೇಖರ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!