Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾವು ಭಯೋತ್ಪಾದಕರಲ್ಲ, ಬಲಿಪಶುಗಳು : ರಾಜೀವ್ ಗಾಂಧಿ ಹಂತಕರ ನುಡಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶನಿವಾರ ಬಿಡುಗಡೆಯಾಗಿರುವ ಆರು ಅಪರಾಧಿಗಳಲ್ಲಿ ಒಬ್ಬರಾದ ಆರ್‌ಪಿ ರವಿಚಂದ್ರನ್ ಅವರು ”ನಾವು “ಭಯೋತ್ಪಾದಕರು ಅಥವಾ ಕೊಲೆಗಾರರಲ್ಲ, ಬಲಿಪಶುಗಳು, ನಮ್ಮನ್ನು ಮುಗ್ಧರು ಎಂದು ಸಮಯ ತೀರ್ಪು ನೀಡುತ್ತದೆ ” ಎಂದು ಹೇಳಿಕೊಂಡಿದ್ದಾರೆ.

ಮಧುರೈ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಸಂಸ್ಥೆಗಳ ಜೊತೆ ಮಾತನಾಡಿದ ರವಿಚಂದ್ರನ್, “ಉತ್ತರ ಭಾರತದ ಜನರು ನಮ್ಮನ್ನು ಭಯೋತ್ಪಾದಕರು ಅಥವಾ ಕೊಲೆಗಾರರೆಂದು ನೋಡದೇ, ಬಲಿಪಶುಗಳೆಂದು ನೋಡಬೇಕು. ಸಮಯ ಮತ್ತು ಶಕ್ತಿಯು, ಯಾರು ಭಯೋತ್ಪಾದಕ ಅಥವಾ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ನಿರ್ಧರಿಸುತ್ತದೆ, ನಾವು ಭಯೋತ್ಪಾದಕರು ಎಂಬ ಆರೋಪ ಹೊತ್ತಿದ್ದರೂ ಸಹ, ಸಮಯವು ನಮ್ಮನ್ನು ನಿರಪರಾಧಿ ಎಂದು ನಿರ್ಣಯಿಸುತ್ತದೆ ಎಂದು ಹೇಳಿದ್ದಾರೆ.

ನಳಿನಿ ಮತ್ತು ರವಿಚಂದ್ರನ್ ಅವರು ಜೈಲಿನಲ್ಲಿದ್ದಂತಹ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾಗಿದ್ದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು  ಕಳೆದ ಮೇ.18 ರಂದು ಸುಪ್ರೀಂ ಕೋರ್ಟ್ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರ ಬಳಸಿತ್ತು.

ಕುಟುಂಬದೊಂದಿಗೆ ಇರಲು ಬಯಸುತ್ತೇನೆ

ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು, 32 ವರ್ಷಗಳ ಶಿಕ್ಷೆಯ ಸಮಯದಲ್ಲಿ ತನಗೆ “ಸಹಾಯ” ನೀಡಿದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ನಾನು ತನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಆರ್‌.ಪಿ.ರವಿಚಂದ್ರನ್ ಸೇರಿದಂತೆ ಎಲ್ಲಾ ಆರು ಅಪರಾಧಿಗಳನ್ನು ಬಿಡುಗಡೆಗೊಳಿಸಿ ಶುಕ್ರವಾರ ಸುಪ್ರೀಂ ಕೋರ್ಟ್‌ನ ಆದೇಶ ಹೊರಡಿಸಿದ ನಂತರ ದೇಶದಲ್ಲೇ ಅತಿ ಹೆಚ್ಚು ಕಾಲ ಜೀವಾವಧಿ ಶಿಕ್ಷೆ ಅನುಭವಿಸಿದ ಮಹಿಳಾ ಕೈದಿ ಶ್ರೀಹರನ್ ಅವರನ್ನು, ಶನಿವಾರ ವೆಲ್ಲೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರ ಬಂದ ನಂತರ 32 ವರ್ಷಗಳ ಕಾಲ ತಮ್ಮನ್ನು ಬೆಂಬಲಿಸಿದ ತಮಿಳುನಾಡಿನ ಜನರಿಗೆ ಧನ್ಯವಾದ ಅರ್ಪಿಸಿದರು.

ನಳಿನಿ  ಮಾತನಾಡಿ, ತಾನು ಭಾರತದಲ್ಲಿ ವಾಸಿಸಲಿ ಅಥವಾ ವಿದೇಶಕ್ಕೆ ಶಿಫ್ಟ್ ಆಗಲಿ, ಕುಟುಂಬದೊಂದಿಗೆ ಇರುತ್ತೇನೆ. ತನ್ನ ಕುಟುಂಬದ ಸದಸ್ಯರೆಲ್ಲರೂ ತನಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ, ಅವರೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದರು.

ಗಾಂಧಿ ಕುಟುಂಬವನ್ನು ಭೇಟಿಯಾಗುವ ಯೋಚನೆ ಇಲ್ಲ 

ಬಿಡುಗಡೆಯಾವದ ನಂತರ ಗಾಂಧಿ ಕುಟುಂಬದ ಯಾರನ್ನಾದರೂ ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನಿ, ಹಾಗೆ ಮಾಡಲು ಯೋಚಿಸುತ್ತಿಲ್ಲ, “ನನ್ನ ಪತಿ ಎಲ್ಲಿಗೆ ಹೋದರೂ” ಹೋಗುತ್ತೇನೆ. ನಾವು 32 ವರ್ಷಗಳಿಂದ ಬೇರ್ಪಟ್ಟಿದ್ದೇವೆ, ನಮ್ಮ ಕುಟುಂಬ ನಮಗಾಗಿ ಕಾಯುತ್ತಲೇ ಇತ್ತು. ನಾನು ಗಾಂಧಿ ಕುಟುಂಬದ ಯಾರನ್ನೂ ಭೇಟಿ ಮಾಡಲು ಯೋಜಿಸುತ್ತಿಲ್ಲ, ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಪೆರೋಲ್ ನೀಡಿದ್ದಕ್ಕಾಗಿ ನಾನು ತಮಿಳುನಾಡು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.

ಜೈಲಿನಲ್ಲಿರುವ ಅಪರಾಧಿಗಳ ಉತ್ತಮ ನಡತೆಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಬಿ.ವಿ.ನಾಗರತ್ನ ಅವರ ದ್ವಿಸದಸ್ಯ ಪೀಠವು ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧೀಶರು ನಮ್ಮ ಪ್ರಕರಣವನ್ನು ಅಧ್ಯಯನ ಮಾಡಿದ್ದಾರೆ, ಅಲ್ಲದೇ ಅವರಿಗೆ “ಏನು ತಪ್ಪು ಮತ್ತು ಏನು ಸರಿ  ಎಂದು ಅವರಿಗೆ ತಿಳಿದಿದೆ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!