Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಧಾನಿಗೆ ದೇವೇಗೌಡ ಪತ್ರ: ಸಿಎಂ ಸಿದ್ದರಾಮಯ್ಯ ಸ್ವಾಗತ

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

“>

ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ.

ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ.ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಬೇಕು. ಅತೀ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನಿಯವರು, ಭೇಟಿ ಮಾಡುವಂತೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡಾ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!