Thursday, September 19, 2024

ಪ್ರಾಯೋಗಿಕ ಆವೃತ್ತಿ

”ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಜನಾರ್ಧನ ರೆಡ್ಡಿಯ ಹೊಸ ಪಕ್ಷ

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಮೂಲಕ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜನಾರ್ದನ ರೆಡ್ಡಿ, ಬಿಜೆಪಿಯೊಂದಿಗಿನ 12 ವರ್ಷಗಳ ನಂಟನ್ನು ಕೊನೆಗೊಳಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿರುವ ತಮ್ಮ ನಿವಾಸ ಪಾರಿಜಾತದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೊಸ ಪಕ್ಷ ಸ್ಥಾಪನೆ ವಿಚಾರ ಘೋಷಿಸಿದ ಜನಾರ್ದನ ರೆಡ್ಡಿ ತಮ್ಮ ಮುಂದಿನ ರಾಜಕೀಯ ಹಾದಿ ಬಗ್ಗೆ ಮಾಹಿತಿ ನೀಡಿದರು.

ನಾನು ಯಾವುದೇ ಹೊಸ ಕೆಲಸ ಆರಂಭಿಸಿದರೂ ಸೋತಿಲ್ಲ. ಗೋಲಿ ಆಟದಲ್ಲೇ ನಾನು ಸೋಲು ಒಪ್ಪಿಕೊಂಡಿಲ್ಲ. ಈಗ ಇಲ್ಲೂ ಸೋಲು ಎನ್ನುವುದು ಇಲ್ಲ ಎಂದು ಜನಾರ್ದನ ರೆಡ್ಡಿ ತಮ್ಮ ಹೊಸ ಪಕ್ಷದ ಬಗ್ಗೆ ದೃಢವಾದ ಮಾತುಗಳನ್ನಾಡಿದರು.

ಇದೇ ವೇಳೆ ತಮ್ಮ ಹಾಗೂ ಶ್ರೀರಾಮುಲು ನಡುವಿನ ರಾಜಕೀಯ ಹಾಗೂ ವೈಯಕ್ತಿಕ ಗೆಳೆತನವನ್ನು ನೆನಪಿಸಿಕೊಂಡ ಜನಾರ್ಧನ ರೆಡ್ಡಿ, “ಶ್ರೀರಾಮುಲು ಅವರನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಬಂದಿದ್ದೇವೆ. ರಾಮುಲು ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಪಕ್ಷ ಬಿಟ್ಟು ಬನ್ನಿ ಎಂದು ನನ್ನ ಸ್ನೇಹವನ್ನು ದುರುಪಯೋಗ ಮಾಡಿಕೊಳ್ಳಲ್ಲ” ಎಂದರು.

“ಅವರು ನಮ್ಮ ಜತೆಗೆ ಬರಬೇಕು ಎಂದು ಹೇಳಲ್ಲ. ಆತ ನನ್ನ ಉತ್ತಮ ಸ್ನೇಹಿತ. ಚಿಕ್ಕಂದಿನಿಂದಲೂ ನಾವು ಜೊತೆಯಾಗಿ ಬೆಳೆದಿದ್ದೇವೆ. ಈಗಲೂ ಹಾಗೆಯೇ ಇದ್ದೇವೆ. ರಾಜಕೀಯ ಬೇರೆ, ಸ್ನೇಹವೇ ಬೇರೆ. ರಾಮುಲು ಹಿಂದುಳಿದ ಜನಾಂಗದ ಒಳ್ಳೆಯ ಲೀಡರ್. ಎಷ್ಟೇ ಕಷ್ಟಗಳಿದ್ದರೂ ಅವರು ರಾಜಕೀಯವಾಗಿ ಸಾಧನೆ ಮಾಡಿದ್ದಾರೆ” ಎಂದು ಜನಾರ್ದನ ರೆಡ್ಡಿ ಹೇಳಿದರು.

“ನಾನು ಯಡಿಯೂರಪ್ಪ ಅವರ ಜತೆಗೆ ಮಾತನಾಡಿದ್ದೇನೆ. ನನ್ನ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದರು. ಅವರ ಜತೆಗೆ ಉತ್ತಮ ಭಾಂದವ್ಯ ಇದೆ. ರಾಜಕೀಯವಾಗಿ ಅವರ ಜತೆಗೆ ಮಾತನಾಡುವುದಿಲ್ಲ. ರಾಜ್ಯ ಸರ್ಕಾರ ಈಗಲೂ ನನ್ನನು ಗುರಿಯಾಗಿಸಿಕೊಂಡಿದೆ. ಅದನ್ನೂ ಎದುರಿಸಲು ತಯಾರಿದ್ದೇನೆ” ಎಂದು ಜನಾರ್ದನರೆಡ್ಡಿ ಹೇಳಿದರು.

“ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ಏನು ಯೋಚನೆ ಮಾಡ್ತೀನಿ ಅದನ್ನೇ ಹೇಳ್ತೀನಿ, ಏನು ಹೇಳ್ತೀನಿ ಅದನ್ನೇ ಮಾಡ್ತೀನಿ. ರಾಜ್ಯದ 30 ಜಿಲ್ಲೆಗಳ ಅಭಿವೃದ್ಧಿ ನನ್ನ ಗುರಿ” ಎನ್ನುವ ಮೂಲಕ ತನ್ನನ್ನು ಮೂಲೆ ಗುಂಪು ಮಾಡಿದ್ದ ಬಿಜೆಪಿ ವಿರುದ್ಧ ಜನಾರ್ಧನ ರೆಡ್ಡಿ ಪರೋಕ್ಷ ಸಮರ ಘೋಷಣೆ ಮಾಡಿದ್ದಾರೆ.

ನಮ್ಮ ಪಕ್ಷ ಕಲ್ಯಾಣ ರಾಜ್ಯದ ಕನಸು ಕಾಣುತ್ತಿದೆ. ನಮ್ಮ ಪಕ್ಷದ ಪ್ರಣಾಳಿಕೆ ಇಟ್ಟುಕೊಂಡು ಮಾತನಾಡುತ್ತೇನೆ. ನನ್ನಿಂದ ಅಧಿಕಾರ ಕಿತ್ತುಕೊಳ್ಳಬಹುದು, ಜನರ ಪ್ರೀತಿಯನ್ನಲ್ಲ” ಎಂದು ಜನಾರ್ದನ ರೆಡ್ಡಿ ಭಾವುಕರಾಗಿ ಹೇಳಿದರು.

ಹತ್ತು- ಹದಿನೈದು ದಿನಗಳ ಒಳಗೆ ಪಕ್ಷದ ಚಿಹ್ನೆ, ಬಾವುಟ, ಪ್ರಣಾಳಿಕೆ ಹಾಗೂ ಕೆಲವು ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕೊಡುತ್ತೇನೆ. ನಾನು ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ” ಎಂದು ಹೇಳಿರುವ ಜನಾರ್ದನ ರೆಡ್ಡಿ, “ಯಾರನ್ನೂ ನನ್ನ ಜತೆ ಬರಬೇಕು ಎಂದು ಕೇಳುವುದಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಹೆಜ್ಜೆ ಹಾಕಿದರೆ ನಾನು ಅವರ ಜತೆಗೆ ಇರುತ್ತೇನೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!