Sunday, September 22, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಗಲಭೆ| ‘ಬ್ರೈನ್ ಸ್ಟ್ರೋಕ್‌’ನಿಂದ ಯುವಕ ಸಾವು; ಪೊಲೀಸರು ನೀಡಿದ ಸ್ಪಷ್ಟನೆ ಏನು ?

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ತಮ್ಮನ್ನೂ ಬಂಧಿಸಬಹುದೆಂಬ ಭಯದಲ್ಲಿ ಊರು ತೊರೆದಿದದ ಯುವಕ ‘ಬ್ರೈನ್‌ ಸ್ಟ್ರೋಕ್‌’ನಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಡ್ಯ ಪೊಲೀಸರು, ‘ಮೃತ ಯುವಕ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿಲ್ಲ’ ಎಂದು ತಿಳಿಸಿದ್ದಾರೆ.

ಶನಿವಾರ, ವರದಿ ಮಾಡಿದ್ದ ಮಾಧ್ಯಮಗಳು, “ನಾಗಮಂಗಲ ಗಲಭೆ ಪ್ರಕರಣದಲ್ಲಿ ಬದ್ರಿಕೊಪ್ಪಲು ಗ್ರಾಮದ ಕಿರಣ್ ಕೂಡ ಆರೋಪಿಯಾಗಿದ್ದ. ಬಂಧನ ಭೀತಿಯಿಂದ ಕಿರಣ್ ತಮ್ಮ ಗ್ರಾಮವನ್ನು ತೊರೆದು, ತಲೆಮರೆಸಿಕೊಂಡಿದ್ದರು. ಇದೀಗ, ಅವರು ‘ಬ್ರೈನ್ ಸ್ಕ್ರೋಕ್‌’ನಿಂದ ಸಾವನ್ನಪ್ಪಿದ್ದಾರೆ. ಗಲಭೆ ಪ್ರಕರಣದಲ್ಲಿ ಕಿರಣ್ ಅವರ ತಂದೆಯೂ 17ನೇ ಆರೋಪಿಯಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ವರದಿ ಮಾಡಿದ್ದವು.

ಈ ವರದಿಯನ್ನು ಅಲ್ಲಗಳೆದಿರುವ ಪೊಲೀಸರು, “ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿರುವ ಯುವಕ ಕಿರಣ್, ಗಲಭೆ ಪ್ರಕರಣದಲ್ಲಿ ಆರೋಪಿಯಲ್ಲ. ಗಲಭೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದದ್ದು ಕಿರಣ್ ಕುಮಾರ್ ಎಸ್‌ ಎಂಬಾತ. ಆತನನ್ನು ಬಂಧಿಸಲಾಗಿದೆ. ಆತನನ್ನು ಮಂಡ್ಯದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸಾವನ್ನಪ್ಪಿರುವ ಕಿರಣ್‌ಗೂ ಗಲಭೆ ಪ್ರಕರಣಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಗಲಭೆ ಪ್ರಕರಣದಲ್ಲಿ ಈವರೆಗೆ ಪೊಲೀಸರು 52 ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ, ಬದ್ರಿಕೊಪ್ಪಲು ಗ್ರಾಮದ 13 ಮಂದಿ ಸೇರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!