Friday, June 21, 2024

ಪ್ರಾಯೋಗಿಕ ಆವೃತ್ತಿ

ಹಾಸನ ಲೈಂಗಿಕ ಹಗರಣ| ಅಪಹರಣವಾಗಿದ್ದ ಸಂತ್ರಸ್ಥೆಯ ರಕ್ಷಣೆ ಮಾಡಿದ ಎಸ್ಐಟಿ

ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಸಂತ್ರಸ್ತೆಯೋರ್ವರನ್ನು ಅಪಹರಣಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ರಕ್ಷಿಸುವಲ್ಲಿ ಕೊನೆಗೂ ಎಸ್‌ಐಟಿ ತಂಡದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಅಪಹರಣಕ್ಕೀಡಾಗಿದ್ದ ಸಂತ್ರಸ್ತೆಯನ್ನು ಎಸ್‌ಐಟಿ ಅಧಿಕಾರಿಗಳು ಮೈಸೂರಿನಲ್ಲಿ ರಕ್ಷಣೆ ಮಾಡಿದ್ದಾರೆ. ಎಚ್‌.ಡಿ.ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್‌ ತೋಟದ ಮನೆಯಲ್ಲಿದ್ದ ಸಂತ್ರಸ್ತೆಯನ್ನು ಅಧಿಕಾರಿಗಳು ರಕ್ಷಣೆ ಮಾಡಿರುವುದಾಗಿ ವರದಿಯಾಗಿದ್ದು, ಈ ಬೆಳವಣಿಗೆ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದಂತಾಗಿದೆ.

ಏಪ್ರಿಲ್‌ 29ರಂದು ಕೆ.ಆರ್.ನಗರದ ಮನೆಯಿಂದ ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ರೇವಣ್ಣ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸಂತ್ರಸ್ತೆಯ ಪುತ್ರ ಮೇ.2ರಂದು ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈಗ ಅಧಿಕಾರಿಗಳು ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿರುವ ತೋಟದ ಮನೆಯೊಂದರಿಂದ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯನ್ನು ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್‌ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದ ಎಂದು ತಿಳಿದುಬಂದಿದೆ.

ಸಂತ್ರಸ್ತೆಯ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಎಸ್‌ಐಟಿ ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದರು. ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಅಪಹರಣಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿದ್ದು, ಇದಾದ ಬಳಿಕ ಮಹಿಳೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಮಹಿಳೆಯನ್ನು ಎಸ್‌ಐಟಿ ತಂಡದ ಎದುರು ಹಾಜರುಪಡಿಸಲು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.

“ಪ್ರಜ್ವಲ್ ರೇವಣ್ಣ ನನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಇದರ ಫೋಟೋಗಳು ಬಹಿರಂಗ ಆಗಿದ್ದವು. ಅದಾದ ಬಳಿಕ ನನ್ನ ತಾಯಿ ನಾಪತ್ತೆಯಾಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ನನ್ನ ತಾಯಿಯನ್ನು ಅಪಹರಣ ಮಾಡಿದ್ದಾರೆ” ಎಂದು ಸಂತ್ರಸ್ತೆಯ ಪುತ್ರ ದೂರಿನಲ್ಲಿ ತಿಳಿಸಿದ್ದ.

ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎರಡನೇ ಆರೋಪಿ ಸತೀಶ್ ಬಾಬು ಅವರನ್ನು ಕೆ.ಆರ್.ನಗರ ಪೊಲೀಸರು ಬಂಧಿಸಿದ್ದರು. ರೇವಣ್ಣ ಸಂಬಂಧಿ ಸತೀಶ್ ಬಾಬು ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಿಂದ, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!