Friday, September 20, 2024

ಪ್ರಾಯೋಗಿಕ ಆವೃತ್ತಿ

ವರುಣ ಕ್ಷೇತ್ರದ ಜನರಿಗಾಗಿ ಅಧಿಕಾರಿಯನ್ನು ಬದಲಿಸಿ ಎಂದು ಕೇಳುವುದರಲ್ಲಿ ತಪ್ಪೇನಿದೆ: ಚಲುವರಾಯಸ್ವಾಮಿ

ವರುಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಡಾ.ಯತೀಂದ್ರ ಅವರು ಕ್ಷೇತ್ರವನ್ನು ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ  ಬಿಟ್ಟುಕೊಟ್ಟರು, ಅವರು ಸರ್ಕಾರದ ಸಮಿತಿಯೊಂದರ ಅಧ್ಯಕ್ಷರಾಗಿದ್ದಾರೆ, ಕ್ಷೇತ್ರದ ಜನರ ಹಿತ ಕಾಪಾಡುವ ಜವಾಬ್ದಾರಿ ಮೇಲಿದೆ, ಅಧಿಕಾರಿಯನ್ನು ಬದಲಾಯಿಸಿಕೊಡಿ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಕೇಳುವುದರಲ್ಲಿ ತಪ್ಪೇನಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸಮರ್ಥಿಸಿಕೊಂಡರು.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆಗಾಗಿ ಅಧಿಕಾರಿಯನ್ನು ವರ್ಗಾವಣೆ ಮಾಡಿ ಒಳ್ಳೆಯವರನ್ನು ಹಾಕಿ ಎಂದು ಕೇಳುವ ಹಕ್ಕು ಡಾ.ಯತೀಂದ್ರ ಅವರಿಗಿದೆ. ತಪ್ಪೇನಿದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಅವರ ಕುಟುಂಬ ವರ್ಗದವರು ಅಧಿಕಾರ ಚಲಾಯಿಸಲಿಲ್ಲವೇ  ಇವರನ್ನು ಕೇಳಿ ವರ್ಗಾವಣೆ ಮಾಡಬೇಕಾ ಎಂದು ಕಿಡಿಕಾರಿದರು.

ವಿನಾಕಾರಣ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಹಾಗೂ ನನ್ನನ್ನು ಕಂಡರೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಆಗತ್ತಿಲ್ಲ, ಹಾಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ಇದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲುದಾರಿಕೆಯ ಲುಲು ಮಹಲ್ ವಿಚಾರದಲ್ಲಿ ವಿನಾಕಾರಣ ಆರೋಪ ಮಾಡಿದ್ದಾರೆ, ಅದು ದಶಕಗಳ ಹಿಂದಿನ ವಿಚಾರ, ತಪ್ಪು ಮಾಡಿದ್ದರೆ ಸಮಿತಿ ರಚನೆಯಾಗಲಿ, ತನಿಖೆ ನಡೆಯಲಿ ಎಂದರು.

ಕೆರೆ ಕಬಳಿಕೆ ಮಾಡಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದಾರೆ, ಆ ಭೂಮಿ ನನಗೆ ಸರ್ಕಾರ ಮಂಜೂರು ಮಾಡಿಕೊಟ್ಟಿದ್ದಲ್ಲ, ಅನುಮೋದನೆ ಮಾಡಿಸಿಕೊಂಡು ಇಲ್ಲ, ಜೋಡಿ ಜಮೀನ್ದಾರರ ಜಮೀನಾಗಿದ್ದು, ಹಲವು ತಲೆಮಾರಿನ ನಂತರ ಖರೀದಿ ಮಾಡಿದ್ದೇನೆ, ಸುತ್ತಮುತ್ತಲ ನೂರಾರು ಎಕರೆ ಜಮೀನಿನ ವಿಚಾರವಾಗಿ ನ್ಯಾಯಾಲಯ ಸಮಿತಿ ರಚನೆ ಮಾಡಿದ್ದು ತನಿಖೆ ಪ್ರಗತಿಯಲ್ಲಿದೆ, ಸಂಬಂಧಪಟ್ಟ ಇಲಾಖೆ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟನೆ ನೀಡಿದರು.

ಕುಮಾರಸ್ವಾಮಿಯವರನ್ನ ಕಂಡರೆ ಅಯ್ಯೋ ಅನಿಸುತ್ತೆ

ಅಧಿಕಾರಕ್ಕೂ ಬರಲ್ಲ, ಅಧಿಕಾರ ಕೊಟ್ಟರೂ ಸರಿಯಾಗಿ ಮಾಡುವುದಿಲ್ಲ, ಎಚ್ ಡಿ ಕುಮಾರಸ್ವಾಮಿಯವರನ್ನ ಕಂಡರೆ ಅಯ್ಯೋ ಅನಿಸುತ್ತೆ, ನನ್ನ ರಾಜಕೀಯ ನಿವೃತ್ತಿಯಿಂದ ಅವರಿಗೆ ನೆಮ್ಮದಿಯಾಗುತ್ತಾ ಕೇಳಿಬಿಡಿ ಅದನ್ನು ನೋಡೋಣ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಂಡು ಅವರಿಗೆ ಸಹಿಸಲು ಆಗುತ್ತಿಲ್ಲ, ವಿದ್ಯುತ್ ಕಳ್ಳತನ ಪ್ರಕರಣದಲ್ಲಿ ದಂಡ ಕಟ್ಟಿದ್ದಾರೆ, ಅದಕ್ಕೂ ನಮಗೂ ಸಂಬಂಧ ಇಲ್ಲ ಎನ್ನಬಹುದಾಗಿತ್ತು, ಅದನ್ನೇ ಗಂಭೀರವಾಗಿ ತೆಗೆದುಕೊಂಡು ಮಾಜಿ ಪ್ರಧಾನಿ ರಕ್ಷಣೆ ಇದೆ ಅಂತ ಎಲ್ಲರ ವಿರುದ್ಧವು ಆರೋಪ ಮಾಡಿದರೆ ಏನರ್ಥ ಎಂದು ಪ್ರಶ್ನಿಸಿದರು,

ಬಿಡದಿ ಬಳಿ ಅವರು ವಾಸಿಸುತ್ತಿರುವ ಪ್ರದೇಶ ಅಕ್ರಮ ಪ್ರದೇಶ, ಈ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಆದೇಶ ಮಾಡಿದೆ, ಸರ್ಕಾರ ಏನು ಮಾಡುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ, ವೈಯಕ್ತಿಕವಾಗಿ ನಾನು ಏಕೆ ತೆಗೆದುಕೊಳ್ಳಲಿ ಸಂಬಂಧಪಟ್ಟ ಇಲಾಖೆಯವರು ನೋಡಿಕೊಳ್ಳುತ್ತಾರೆ ಎಂದರು.

ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಾವ್ಯಾರು ಅವರಿಗೆ ಅಡ್ಡಲಾಗಲಿಲ್ಲ, ಸಚಿವರಾಗಿದ್ದ ಡಿ.ಸಿ ತಮ್ಮಣ್ಣ, ಸಿ ಎಸ್ ಪುಟ್ಟರಾಜು ಅವರಿಗೆ ಕಾಲು ಎಳೆಯಲಿಲ್ಲ, ಅಭಿವೃದ್ಧಿಗೆ ಸಹಕರಿಸಿದ್ದೇವೆ, ಇವರು ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಜೆಡಿಎಸ್ ನ 7 ಶಾಸಕರು ಇದ್ದರು, ಯಾವ ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!