Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೃಷಿಯೊಂದಿಗೆ ರೇಷ್ಮೆ ಇಲಾಖೆ ವಿಲೀನ ವಾಪಸ್ ಪಡೆಯಲು ಆಗ್ರಹ

ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಿ ಖಾಲಿ ಇರುವ 2,346 ಹುದ್ದೆಗಳನ್ನು ರದ್ದುಮಾಡಿ, ರೇಷ್ಮೆ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿರುವ ಸುಮಾರು 1,384 ರೇಷ್ಮೆ ಬೆಳೆಗಾರರ ಕುಟುಂಬಗಳ ಬದುಕನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ವಾಪಸ್ಸು ಪಡೆಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೇಷ್ಮೆ ಬೆಳೆಗಾರರ ಹೋರಾಟ ಸಮಿತಿ ಒತ್ತಾಯಿಸಿದೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್, ಮಂಡ್ಯ ಜಿಲ್ಲೆಯ ಜೀವಾಳವೇ ಹಾಲು, ಸಕ್ಕರೆ ಹಾಗೂ ರೇಷ್ಮೆ. ಈಗಾಗಲೇ ಹೈನುಗಾರಿಕೆ ಹಾಗೂ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದೆ, ಆದರೆ ಇತ್ತೀಚೆಗೆ ರೇಷ್ಮೆಗೆ ಉತ್ತಮ ಬೆಲೆ ಇರುವುದರಿಂದ ನಿರುದ್ಯೋಗಿ ವಿದ್ಯಾವಂತರು, ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರಿಗೆ ದ್ರೋಹ ಬಗೆಯಲು ಚಿಂತಿಸುತ್ತಿರುವುದು ಸರಿಯಲ್ಲ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸುಮಾರು 3,000 ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ ತೋಟವಿದೆ ಹಾಗೂ ಕನಿಷ್ಠ 2 ಲಕ್ಷ ಜನರು ರೇಷ್ಮೆ ಉತ್ಪಾದನೆಯಲ್ಲಿ ತೊಡಗಿ ರಾಜ್ಯಕ್ಕೆ ಮೊದಲನೆ ಸ್ಥಾನದಲ್ಲಿದ್ದಾರೆ. ಮೈಸೂರು ರೇಷ್ಮೆಗೆ ಟಿಪ್ಪು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಿಂದಲೂ ದೇಶದಲ್ಲೇ ತನ್ನದೆ ಪ್ರಸಿದ್ದಿ ಇದೆ, ಇದನ್ನು ಹಾಳುಗೆಡವಲು ಸರ್ಕಾರ ಹೊರಟಿದೆ ಎಂದು ದೂರಿದರು.

ರಾಜ್ಯದಲ್ಲಿ ಒಟ್ಟು 1,38,964 ರೇಷ್ಮೆ ಬೆಳೆಗಾರರ ಕುಟುಂಬಗಳಿವೆ. 1,10,740 ಹೆಕ್ಟೇರ್ ಹಿಪ್ಪುನೇರಳೆ ತೋಟವಿದೆ, 70,612 ಮೆಟ್ರಿಕ್ ಟನ್ ರೇಷ್ಠಗೂಡು ಉತ್ಪಾದಿಸುತ್ತಿದ್ದಾರೆ, 7,274 ರೀಲರ್ ಕುಟುಂಬಗಳು ರೇಷ್ಮೆ ಕೃಷಿಯನ್ನೇ ಅವಲಂಬಿಸಿವೆ, ಇಂತಹ ಸಂದರ್ಭದಲ್ಲಿ ಮಂಡ್ಯದವರೇ ಆದ ರೇಷ್ಮೆ ಮಂತ್ರಿ ನಾರಾಯಣಗೌಡ ಅವರು ರೇಷ್ಮೆ ಬೆಳೆಗಾರರಿಗೆ ರಕ್ಷಣೆ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.

ರೇಷ್ಮೆ ಇಲಾಖೆಯಲ್ಲಿ ಉದ್ಯೋಗ ಸಿಗಬಹುದೆಂದು ಕನಸು ಹೊತ್ತು ರೇಷ್ಮೆ ಬಿ.ಎ, ಎಂ.ಎಸ್ಸಿ ವ್ಯಾಸಂಗ ಮಾಡಿರುವ ಕೃಷಿಕರ ಮಕ್ಕಳನ್ನು ಬೀದಿ ಪಾಲು ಮಾಡಲು ಸರ್ಕಾರ ಹೊರಟಿದೆ, ಕಳೆದ 25 ವರ್ಷಗಳಿಂದ ನೇಮಕಾತಿಯಾಗದೆ ಇರುವುದರಿಂದ ನೇರ ನೇಮಕಾತಿ ಮೂಲಕ ಖಾಲಿ ಇರುವ ರೇಷ್ಮೆ ಇಲಾಖೆಯ 2,846 ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರೇಷ್ಮೆ ಮಂತ್ರಿ ನಾರಾಯಣಗೌಡ ಅವರನ್ನು ಆಗ್ರಹಿಸಿದರು.

ತೋಟಗಾರಿಕೆ ಇಲಾಖೆಯನ್ನು ವಿಲೀನ ಮಾಡುವ ಪ್ರಕ್ರಿಯೆಯನ್ನು ಕೈಬಿಡಬೇಕು, ಇಲ್ಲವಾದಲ್ಲಿ ಎಲ್ಲಾ ರೇಷ್ಮೆ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರ ಜೊತೆಗೂಡಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಪ್ರಾಂತ ರೈತಸಂಘ ಜಿಲ್ಲಾ ಮುಖಂಡರಾದ ಎನ್.ಲಿಂಗರಾಜಮೂರ್ತಿ, ಸಿದ್ಧೇಗೌಡ, ರೇಷ್ಮೆ ಬೆಳೆಗಾರರ ಹೋರಾಟ ಸಮಿತಿಯ ಜವರೇಗೌಡ, ರೇಷ್ಮೇ ಬೆಳೆಗಾರರಾದ ಎ.ಎಲ್.ಶಿವಕುಮಾರ್, ನಾರಾಯಣಗೌಡ, ಶಿವಲಿಂಗು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!