Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್

ಸೂಚನಾ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲೇ ಇರಬೇಕು ಎಂದು ನಾವು ಕಾನೂನು ಮಾಡಿ ಸುಗ್ರಿವಾಜ್ಞೆ ಹೊರಡಿಸಿದ್ದೆವು. ಸುಗ್ರಿವಾಜ್ಞೆಯ ಬದಲು ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ’ಗೆ ತಿದ್ದುಪಡಿ ತರಲು ಜನವರಿ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು.

ಸುಗ್ರೀವಾಜ್ಞೆಯನ್ನು ಹೊರಡಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವು ರಾಜ್ಯಪಾಲರನ್ನು ಕೋರಿತ್ತು. ಆದರೆ, ರಾಜ್ಯಪಾಲರು ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಮಂಡದಲದಲ್ಲಿ ಅಂಗೀಕರಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಧಿವೇಶನ ನಡೆಯದ ಕಾರಣ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಹೊರಡಿಸಲು ಮುಂದಾಗಿತ್ತು.

ನಾಮಫಲಕಗಳಲ್ಲಿ ಕನ್ನಡ ಬಳಸದೇ ಇರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಟಿಎ ನಾರಾಯಣಗೌಡರ ಬಣದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ದೇವನಹಳ್ಳಿ ಸಮೀಪದ ಸಾದಹಳ್ಳಿ ಗೇಟ್‌ನಿಂದ ಮೆರವಣಿಗೆ ನಡೆಸಿದ್ದ ಕನ್ನಡ ಪರ ಕಾರ್ಯಕರ್ತರು ವ್ಯವಹಾರ ಸಂಸ್ಥೆಗಳ ಇಂಗ್ಲಿಷ್ ನಾಮಫಲಕಗಳನ್ನು ಒಡೆದು ಹಾಕಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಾರಾಯಣಗೌಡ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ತೀವ್ರಗೊಂಡ ಹಿನ್ನೆಲೆ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯ ಅನುಷ್ಠಾನಕ್ಕೆ 2024ರ ಫೆ.2ರ ಗಡುವು ನೀಡಿದ್ದರು. ಅಲ್ಲದೆ, ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಕಾಯ್ದೆಯೆ ಸೆಕ್ಷನ್ 17(6) ಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲು ಮತ್ತು ನಿಯಮಗಳನ್ನು ರೂಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಸುಗ್ರಿವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!