2030ರ ವೇಳೆಗೆ ಹಸಿವು ಮುಕ್ತ ಜಗತ್ತು ನಿರ್ಮಿಸುವ ಸಂಕಲ್ಪ ಎಲ್ಲಾ ದೇಶಗಳ ಧ್ಯೇಯವಾಗಿದೆ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದಲ್ಲಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋರೂಂ ಸಭಾಂಗಣದಲ್ಲಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ವಿಶ್ವ ಹಸಿವು ದಿನ ಮತ್ತು ನಿರ್ಗತಿಕರಿಗೆ ನಿರಂತರ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಸಿವು ಎನ್ನುವುದು ಜಾಗತಿಕ ಸಮಸ್ಯೆಯಾಗಿದೆ. ಹಸಿವು ನಿವಾರಣೆಗಾಗಿ 2011ರಿಂದ ಎಲ್ಲಾ ದೇಶಗಳು 2030ರ ವೇಳೆಗೆ ಹಸಿವು ಮುಕ್ತ ಜಗತ್ತು ನಿರ್ಮಿಸುವ ಸಂಕಲ್ಪ ಮಾಡಿವೆ ಎಂದು ತಿಳಿಸಿದರು.
ಹಸಿದವನಿಗೆ ಗೊತ್ತು ಅನ್ನದ ಮೌಲ್ಯ, ಸಾಕಷ್ಟು ಜನ ಮನೆ-ಸಭೆ-ಸಮಾರಂಭ-ಮದುವೆ ಕಾರ್ಯಗಳಲ್ಲಿ ಸಾಕಷ್ಟು ಆಹಾರ ಪದಾರ್ಥಗಳನ್ನು ತಿನ್ನದೆ ಬಿಟ್ಟುಬಿಡುವುದನ್ನು ನೋಡುತ್ತಿದ್ದೇವೆ. ಜಗತ್ತಿನಲ್ಲಿ ಹತ್ತಾರು ಕೋಟಿ ಜನರಿಗೆ ಒಂದೊತ್ತು ಊಟ ಸಿಗುತ್ತಿಲ್ಲ.ವಿಶ್ವಾದ್ಯಂತ 820 ಕೋಟಿ ಜನಸಂಖ್ಯೆಯಿದೆ.ಸಾಕಷ್ಟು ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತದೆ. ಆದರೂ ಹಸಿವು ಮುಕ್ತ ದೇಶ,ರಾಜ್ಯಗಳು ನಿರ್ಮಾಣವಾಗಲೇ ಇಲ್ಲ ಎಂದರು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋರೂಂ ಮಂಡ್ಯ ಶಾಖೆ ವ್ಯವಸ್ಥಾಪಕ ದಿಲೀಪ್ ಕುಮಾರ್ ಹೆಗಡೆ ಮಾತನಾಡಿ, ಮಲಬಾರ್ ಚಾರಿಟೇಬಲ್ ಟ್ರಸ್ಟ್ ಆರಂಭವಾದಗಿನಿಂದ ಭಾರತದಾದ್ಯಂತ 310ಕೋಟಿ ರೂ.ಗಳಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಹಸಿವು ಮುಕ್ತ ಜಗತ್ತು, ವಿದ್ಯಾರ್ಥಿವೇತನ, ಅಜ್ಜಿಮನೆ,ಮೈಕ್ರೋ ಲರ್ನಿಂಗ್ ಸೆಂಟರ್, ವೈದ್ಯಕೀಯ,ವಸತಿಗೆ ನೆರವು, ಮದುವೆಗೆ ನೆರವು,ಸಂಚಾರಿ ವೈದ್ಯಕೀಯ ಸೌಲಭ್ಯ ಸ್ಥಾಪಿಸಲಾಗಿದೆ ಎಂದರು.
ಈ ಹಣಕಾಸು ವರ್ಷದಲ್ಲಿ ಸಿಎಸ್ಆರ್ ಯೋಜನೆಗಳಿಗೆ ಒಟ್ಟು 150ಕೋಟಿ ರೂ. ಮೀಸಲಿಟ್ಟಿದ್ದು, ಕರ್ನಾಟಕಕ್ಕೆ 18ಕೋಟಿ ರೂ. ಮೀಸಲಿಟ್ಟಿದೆ ಎಂದು ವಿವಿಧ ಯೋಜನೆಗಳಿಂದ ಜನರಿಗೆ ಸಮರ್ಪಿಸಿರುವ ಸೇವಾಕಾರ್ಯಗಳ ಮಾಹಿತಿ ತೆರೆದಿಟ್ಟರು.
3 ಘಟಕಗಳ ಸಂಚಾರಿ ವೈದ್ಯಕೀಯ ಚಿಕಿತ್ಸಾಲಯ ಯೋಜನೆಯಲ್ಲಿ ಸುಮಾರು 4600 ಹಳ್ಳಿಗಳ 5ಲಕ್ಷ ಜನರಿಗೆ ಈ ಯೋಜನೆ ತಲುಪಿದೆ.2945 ಯುವತಿಯರ ಮದುವೆಗಾಗಿ 9.66ಕೋಟಿ ರೂ.ಸದ್ಬಳಕೆ ಮಾಡಲಾಗಿದೆ. 22,490 ಕುಟುಂಬಗಳಿಗೆ 80 ಕೋಟಿ ರೂ.ಗಳಲ್ಲಿ ಗೃಹ ನಿರ್ಮಾಣಕ್ಕೆ ನೆರವು ನೀಡಲಾಗಿದೆ, 41.39 ಕೋಟಿ ರೂ.ಗಳನ್ನು 7.80 ಲಕ್ಷ ಜನರ ಆರೋಗ್ಯಕ್ಕಾಗಿ ವಿನಿಯೋಗಿಸಿದ್ದೇವೆ ಎಂದರು.
18ರಾಜ್ಯಗಳಲ್ಲಿ 716ಮೈಕ್ರೋ ಲರ್ನಿಂಗ್ ಕೇಂದ್ರ ಸ್ಥಾಪಿಸಿ, 32,042 ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ, ಶಾಲೆಯಿಂದ ಹೊರಗುಳಿದ 8,949 ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಿದ್ದೇವೆ. ಅಜ್ಜಿ ಮನೆ ಯೋಜನೆಯಡಿ 8.82 ಕೋಟಿ ರೂ.ಗಳನ್ನು ಆರೈಕೆ, ಪೋಷಣೆಗೆ ವಿನಿಯೋಗಿಸಿದ್ದೇವೆ ಎಂದರು.
18 ರಾಜ್ಯಗಳಲ್ಲಿ 1,14,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ 77.40ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದ್ದು, ಕರ್ನಾಟಕದಲ್ಲಿ 21.57 ಕೋಟಿ ರೂ.ಗಳನ್ನು ನೀಡಲಾಗಿದೆ, ಈವರ್ಷ 4.74ಕೋಟಿ ರೂ.ನೀಡಲಾಗಿದೆ ಎಂದು ತಿಳಿಸಿದರು.
ಹಸಿವು ಮುಕ್ತ ಜಗತ್ತು ಯೋಜನೆಯಡಿ ಭಾರತದ 112 ನಗರಗಳಲ್ಲಿ 25.4 ಮಿಲಿಯನ್ ಊಟವನ್ನು ನೀಡಿ, 53ಕೋಟಿ ರೂ.ಗೂ ಹೆಚ್ಚು ನೆರವು ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದ 19 ಜಿಲ್ಲಾ ಸ್ಥಳಗಳಲ್ಲಿ 7,425 ಊಟಗಳನ್ನು ನೀಡಿದ್ದೇವೆ.ಹೀಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಮುಂದುವರಿಯುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ್, ಸದಸ್ಯೆ ಮಂಜುಳಾ, ಮುಖಂಡರಾದ ಸುರೇಶ್, ಅಭಿಷೇಕ್, ಗುರುಸಿದ್ದು, ಅಮರ್ಗೌಡ, ಸೋಮಶೇಖರ್, ಜಗದೀಶ್ ಮತ್ತಿತರರಿದ್ದರು.




