Friday, November 20, 2026

ಪ್ರಾಯೋಗಿಕ ಆವೃತ್ತಿ

ಯಾರೀ ಟಿಪ್ಪೂ?

ಯಾರೀ ಟಿಪ್ಪೂ?

ಇವ ಮತ್ತೆ
ಬಂದಿದ್ದಾನೆ,
ಈ ಸಲ
ನಾಟಕವಾಗಿದ್ದಾನೆ,
ನಾಡಿನ ತುಂಬಾ
ಚರ್ಚೆಗೀಡಾಗಿದ್ದಾನೆ;
ಹೌದು, ಅಷ್ಟಕ್ಕೂ
ಯಾರೀ ಟಿಪ್ಪೂ?
ಸುಲ್ತಾನನೋ?
ಸೈತಾನನೋ?
ವೀರನೋ?
ಕಾಫೀರನೋ?
ಯಾರಾಗಿರಬಹುದು
ಇವನು,
ಅವರು
ಕರೆದಾಗಲೆಲ್ಲ ಬಂದು
ಮತ್ತೆಮತ್ತೆ
ಇಣುಕುವವನು.

ಇಲ್ಲ,
ಖಂಡಿತ
ಇವ ಅವನಲ್ಲ!
ಅದು ನನಗೆ ಗೊತ್ತು,
ನನಗಿಂತ ಚೆನ್ನಾಗಿ
ನಿಮಗೂ ಗೊತ್ತು

ಅಂಡಮಾನಿನ
ಕೋಣೆಗಳಿಂದ
ಕ್ಷಮಾಪಣೆಯ ಪತ್ರಗಳು
ಹುಟ್ಟುವುದಕ್ಕೂ
ಬಹಳ-ಬಹಳ ಹಿಂದೆಯೇ
ಆಂಗ್ಲರಿಗೆ ಎದೆಯೊಡ್ಡಿ
ಹುತಾತ್ಮನಾದ
ಆ ವೀರ ಟಿಪ್ಪೂವೆಲ್ಲಿ?
ಚುನಾವಣೆಯ
ವರ್ಷಗಳಲಿ ಮಾತ್ರ
ಹಾಜರಿ ಹಾಕಿ
ಹಾವಳಿಯಿಡುವ
ಈ ಪಾರ್ಟ್‌ಟೈಂ ಟಿಪ್ಪೂವೆಲ್ಲಿ?
ಖಂಡಿತ ಇವ ಅವನಲ್ಲ!

ಕೊಲ್ಲೂರ ಅಂಬಿಕೆಗೆ
ಸಲ್ಲುವ ಸಲಾಂ ಆರತಿಯ
ಮೇಲಾಣೆ;
ತಾಯಿ ಶಾರದೆಯ
ಪೀಠದ ಉದ್ದಾರಕೆ
ಕಾಣಿಕೆಯ ಕೊಟ್ಟು
ಕಂಕಣವ ತೊಟ್ಟು
ಮರಾಠರ ವಿರುದ್ಧ
ಕಾದಾಡಿದ
ಆ ಧರ್ಮಸಹಿಷ್ಣು
ಟಿಪ್ಪೂವೆಲ್ಲಿ?
ನಲವತ್ತು ಪರ್ಸೆಂಟಿನ
ನಾಲಾಯಕ್ಕು ಲಫಡಾಗಳನ್ನು
ಮರೆಮಾಚಲು,
ಅವರ ಕರೆಗೆ ಕಿವಿಗೊಟ್ಟು
ಓಡೋಡಿ ಬಂದಿರುವ
ಭಿತ್ತಿಪತ್ರದಂತಹ
ಈ ಟಿಪ್ಪೂವೆಲ್ಲಿ?
ಖಂಡಿತ ಇವ ಅವನಲ್ಲ!

ರಾಮನಗರದ
ನೂಲು ರೇಷಿಮೆಯ
ಮೇಲಾಣೆ;
ಬಡವರ ಮನೆಯ
ಹೆಣ್ಣುಮಗಳ
ಬೆತ್ತಲು ಎದೆಗೆ
ಬಟ್ಟೆಯ ಕರುಣಿಸಿ
ಮಾನವನು ಕಾಯ್ದ
ಆ ನಿಷ್ಠುರ ಟಿಪ್ಪೂವೆಲ್ಲಿ?
ಕಂಡವರ ಮಕ್ಕಳನು
ಸಾವಿನ ಸೂತಕಕೆ ತಳ್ಳಿ
ಅಧಿಕಾರದ ಮೆಟ್ಟಿಲು ಏರುವ
ಕುತಂತ್ರಿಗಳ ಪರವಾಗಿ
ಮತಕೇಳಲು ಬರುವ
ಈ ಸೋಗಲಾಡಿ ಟಿಪ್ಪೂವೆಲ್ಲಿ?
ಖಂಡಿತ ಇವ ಅವನಲ್ಲ!

ಹಾಗಾದರೆ
ಯಾರಿರಬಹುದು
ಇವನು?

ನಿಮಗೆ ಪ್ರಾಮಾಣಿಕ
ಉತ್ತರ ಬೇಕೆ?

ಹಾಗಿದ್ದರೆ,
ಬೆಲೆಯೇರಿಕೆಯನ್ನೊಮ್ಮೆ
ನಿಲ್ಲಿಸಿ ಕೇಳಿ;
ದುಪ್ಪಟ್ಟಾದ
ಅಡುಗೆ ಎಣ್ಣೆಯನ್ನು
ಮಾತಾಡಿಸಿ ನೋಡಿ;
ಪಾತಾಳಕ್ಕೆ ಕುಸಿಯುತ್ತಿರುವ
ರೂಪಾಯಿಯನ್ನು
ತುಸು ತಡೆದು ಮಾತಾಡಿಸಿ;
ಸಾಧ್ಯವಾದರೆ
ಪೆಟ್ರೋಲ್, ಡೀಸೆಲ್‌ಗಳನ್ನೂ
ಕಂಡು ಬನ್ನಿ;
ಗುಂಡಿ ಬಿದ್ದ
ರಸ್ತೆಗಳಲ್ಲೊಮ್ಮೆ
ಓಡಾಡಿ ನೋಡಿ;
ಸಿಗಲಿದೆ ನಿಮಗೆ
ಈ ಟಿಪ್ಪು ಯಾರೆಂಬ
ಪ್ರಶ್ನೆಗೆ ಉತ್ತರ!
ನೂರಕ್ಕೆ ನೂರು
ಪ್ರತಿಶತದ
ಅಸಲಿ ಉತ್ತರ!
ದಯವಿಟ್ಟು,
ಅದರಲ್ಲೂ
ನಲವತ್ತು ಪರ್ಸೆಂಟಿನ
ರಿಯಾಯಿತಿಯ
ನಿರೀಕ್ಷೆ ಬೇಡ…..

– ಮಾಚಯ್ಯ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ