ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಂಡು ಜನರನ್ನು ಭಯ ಭೀತರನ್ನಾಗಿಸಿವೆ, ಈ ನಡುವೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ರೈತನು ಜಮೀನಿನಲ್ಲಿ ಮೇವು (ಸೀಮೆಹುಲ್ಲು) ಕೊಯ್ಯುವ ವೇಳೆ ಕಾಡಾನೆ ದಾಳಿ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಕಾಡಾನೆ ದಾಳಿಗೆ ಗ್ರಾಮದ ಮಾದೇಗೌಡ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಮುಂಜಾನೆ 6.30 ಸಮಯದಲ್ಲಿ ತಮ್ಮ ಮನೆಯ ಹಿಂಭಾಗದ ಜಮೀನಿನಲ್ಲಿ ಸೀಮೆ ಹುಲ್ಲು ಕುಯ್ಯುತ್ತಿದ್ದ ವೇಳೆ ಕಾಡಾನೆ ಸೊಂಡಿಲಿನಲ್ಲಿ ತಿವಿದು ನೆಲದಲ್ಲಿ ಉರುಳಾಡಿಸಿದೆ, ಈ ಸಂದರ್ಭದಲ್ಲಿ ಭಯಭೀತನಾಗಿ ಜೋರಾಗಿ ಚೀರಾಟ ಮಾಡಲಾಗಿ ನೆರೆಯ ಜನರು ಧಾವಿಸಿದ್ದು, ಈ ವೇಳೆ ಆನೆಯನ್ನು ಓಡಿಸಲು ಸಾರ್ವಜನಿಕರು ಜೋರಾಗಿ ಸದ್ದು ಮಾಡಲಾಗಿ ಕೋಪಗೊಂಡ ಕಾಡಾನೆ ಜನರ ಮೇಲೆ ದಾಳಿ ಮಾಡಲು ಮುಂದಾದ ವೇಳೆ ರೈತ ಮಾದೇಗೌಡ ಪ್ರಾಣ ಅಪಾಯದಿಂದ ಪಾರಗಿದ್ದಾರೆ.
ಇದೇ ಸಂದರ್ಭದಲ್ಲಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಎದ್ದು ಬಿದ್ದು ಓಡಿ ಹೋಗಿದ್ದಾರೆ. ಈ ವೇಳೆ ಅಲ್ಲೇ ನಿಂತಿದ್ದ ಮಾದೇಗೌಡರ ಬೈಕ್ ನ್ನ ಆನಯೂ ತುಳಿದು ಜಖಂ ಮಾಡಿದೆ.
ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವನ್ನ ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.




