Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ದ್ವೇಷ ಹರಡುವುದು ನೀಚ ಕೃತ್ಯ : ಯತೀಂದ್ರ ಸಿದ್ದರಾಮಯ್ಯ

ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ದ್ವೇಷ ಹರಡುವಿದು ನೀಚ ಕೃತ್ಯ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕಮ್ಮತಾಯಿ ಪುಣ್ಯಕ್ಷೇತ್ರದಲ್ಲಿ 11ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ, ‘ಕೆಂಡ ಕಾರಿತು’ ಕಾದಂಬರಿ ಬಿಡುಗಡೆ ಹಾಗೂ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮದ ಮೂಲ ಉದ್ದೇಶ, ಮನುಷ್ಯನ ಜೀವನದಲ್ಲಿ ಅಂತಿಮವಾಗಿ ಜ್ಞಾನವನ್ನು ಮೂಡಿಸುವುದು. ಎಲ್ಲಾ ಧರ್ಮಗಳ ಸಾರವು ಒಂದೇ. ನಾವು ಯಾವ ರೀತಿ ನಮ್ಮ ಧರ್ಮವನ್ನು, ದೇವರನ್ನು ಪ್ರೀತಿಸುತ್ತೇವೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿರುವ ಧರ್ಮದ ಜನರನ್ನು, ನೆರೆಹೊರೆಯವರನ್ನು, ಸಮಾಜವನ್ನು ಪ್ರೀತಿಸಬೇಕು. ಅವರನ್ನು, ಅವರ ಧರ್ಮವನ್ನು ಕೂಡ ನಾವು ಪ್ರೀತಿಯಿಂದ ಸಮಾನವಾಗಿ ನೋಡಬೇಕು ಎನ್ನುವುದನ್ನು ಧರ್ಮವು ತಿಳಿಸುತ್ತದೆ. ಕೆಲವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ಇತರ ಧರ್ಮದ ಜನರ ನಡುವೆ ದ್ವೇಷ ಹರಡುವುದು ನೀಚ ಕೃತ್ಯ‌. ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡುವವರ ಬಗ್ಗೆ ಜನರು ಎಚ್ಚರವಾಗಿರಬೇಕೆಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಗ್ರಾಮೀಣ ಪ್ರದೇಶದ ಜನರು ವರ್ಷವಿಡೀ ಕೃಷಿಯಲ್ಲಿ ತೊಡಗುತ್ತಾರೆ. ಊರೆಲ್ಲಾ ಒಗ್ಗಟ್ಟಾಗಿ, ವೈಮನಸ್ಯವನ್ನೆಲ್ಲ ಮರೆತು ದೇವರ ಪೂಜೆಯಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಉತ್ತಮ ಕಾರ್ಯ. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯವರು ಧರ್ಮವನ್ನು ಉಳಿಸಿಕೊಂಡೇ ತಮ್ಮ ತತ್ವಗಳ ಮೂಲಕ ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡಿದರು‌. ಧರ್ಮ ಸಾಮಾನ್ಯ ಜನರಿಗೂ ನೈತಿಕವಾಗಿ, ಮಾನಸಿಕವಾಗಿ ಶಕ್ತಿ ತುಂಬುತ್ತದೆ. ನಮ್ಮನ್ನು ಕಾಪಾಡುವುದು ಧರ್ಮ ಎಂಬ ನಂಬಿಕೆಯೇ ನಮ್ಮಲ್ಲಿ ಶಕ್ತಿ ತುಂಬುತ್ತದೆ ಎಂದರು.

ಧರ್ಮಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟನ್ನು ಮಾತ್ರ ನೀಡಬೇಕು. ನಮ್ಮ ಧರ್ಮದಂತೆಯೇ ಬೇರೆ ಧರ್ಮದ ಜನರು ಕೂಡ ಒಳ್ಳೆಯವರು. ಸಮಾಜದಲ್ಲಿ ಶಾಂತಿ- ಸೌಹಾರ್ದತೆ ಕಾಪಾಡಲು ಧರ್ಮ ಸರಿಯಾದ ಮಾರ್ಗ. ಆದರೆ ಧರ್ಮವನ್ನು ರಾಜಕೀಯಗೊಳಿಸಿ, ಬಳಸಿಕೊಂಡ ಹಲವು ದೇಶಗಳು, ಸಮಾಜಗಳು ಹಾಳಾಗಿವೆ ಎಂಬುದಕ್ಕೆ ಇತಿಹಾಸದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನಗಳಂತಹ ದೇಶಗಳೇ ಸಾಕ್ಷಿಯಾಗಿದೆ ಎಂದರು.

ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ, ಜಿ.ಪಂ. ಮಾಜಿ ಸದಸ್ಯೆ ಸುಷ್ಮಾ ರಾಜು, ಮುಖಂಡರಾದ ಸಿ ಪಿ  ರಾಜು, ಸವಿತಾ, ಮರಿಗೌಡ, ಟ್ರಸ್ಟ್ ಅಧ್ಯಕ್ಷ ಲಿಂಗಣ್ಣ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!