Thursday, September 19, 2024

ಪ್ರಾಯೋಗಿಕ ಆವೃತ್ತಿ

ಯಾತ್ರೆಗಳು | ಈ ನಾಟಕದಲ್ಲಿ ನಾವು-ನೀವು ಪಾತ್ರಧಾರಿಗಳು…..

✍️ ವಿವೇಕಾನಂದ ಎಚ್. ಕೆ.

ಯಾತ್ರೆಗಳು………..

ವಿಜಯ ಸಂಕಲ್ಪ” ಯಾತ್ರೆ,
” ಪ್ರಜಾ ಧ್ವನಿ ” ಯಾತ್ರೆ,
” ಪಂಚ ರತ್ನ” ಯಾತ್ರೆ…..

ಅಬ್ಬಾ, ಎಂತಹ ಒಳ್ಳೆಯ ಹೆಸರಿನ ಯಾತ್ರೆಗಳು, ಎಷ್ಟೊಂದು ಕ್ರಮಬದ್ಧವಾಗಿ, ಎಷ್ಟೊಂದು ಶಿಸ್ತಿನಿಂದ, ಎಷ್ಟೊಂದು ಪ್ರಾಮಾಣಿಕವಾಗಿ, ಎಷ್ಟೊಂದು ಬದ್ದತೆಯಿಂದ, ಎಷ್ಟೊಂದು ಅದ್ದೂರಿಯಾಗಿ ಮೂರು ಪ್ರಮುಖ ಪಕ್ಷಗಳು ಈ ಯಾತ್ರೆಯನ್ನು ಮಾಡುತ್ತಿವೆ…..

ಲಕ್ಷ ಲಕ್ಷ ಜನ ಕಾರ್ಯಕರ್ತರು, ಅಪಾರ ಹಣ, ಶ್ರಮ ಎಲ್ಲವನ್ನೂ ವ್ಯಯಿಸಲಾಗುತ್ತಿದೆ. ಸುಮಾರು ಒಂದು ‌ವರ್ಷದ ಮೊದಲಿನಿಂದಲೇ ಜನರನ್ನು ನಂಬಿಸುವ ಪ್ರಕ್ರಿಯೆ ನಡೆಯುತ್ತಿದೆ…..

ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ದೊಡ್ಡ ದೊಡ್ಡ ಏಜೆನ್ಸಿಗಳ ಮೂಲಕ ಸಾಕಷ್ಟು ಪ್ರಮಾಣದ ಹಣ ಕೊಟ್ಟು ಮೂರು ಮೂರು ಬಾರಿ ಸಮೀಕ್ಷೆಗಳನ್ನು ಮಾಡಿಸಲಾಗುತ್ತಿದೆ. ಗೆಲ್ಲುವ ಕುದುರೆಗಳನ್ನು ಆಮಿಷ ಒಡ್ಡಿ ಕೊಳ್ಳಲಾಗುತ್ತಿದೆ. ಎಷ್ಟೊಂದು ದೂರದೃಷ್ಟಿಯ ನಡೆ ಇವರದು. ಅಧಿಕಾರ ಉಳಿಸಿಕೊಳ್ಳಲು ಮತ್ತು ಗಳಿಸಿಕೊಳ್ಳಲು ಅವರು ಮಾಡುತ್ತಿರುವ ಕ್ರಿಯಾಶೀಲ ಚಟುವಟಿಕೆಗಳಿಗೆ ಅವರನ್ನು ಅಭಿನಂದಿಸುತ್ತಾ……

ಅಧಿಕಾರ ಹಿಡಿಯಲು ಅವರು ಹಾಕುತ್ತಿರುವ ಶ್ರಮದಲ್ಲಿ‌ ಕನಿಷ್ಠ ಶೇಕಡಾ 25% ಆದರೂ…….

ಸರ್ಕಾರಿ‌ ಶಾಲೆಗಳ ಅಭಿವೃದ್ಧಿಗಾಗಿ, ಸರ್ಕಾರಿ ಆಸ್ಪತ್ರೆಗಳ ಸುಸಜ್ಜಿತ ನಿರ್ವಹಣೆಗಾಗಿ, ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ, ಕೆರೆ ಕಟ್ಟೆಗಳ ನಿರ್ಮಾಣಕ್ಕಾಗಿ, ಆಹಾರದ ಕಲಬೆರಕೆ ತಡೆಯುವುದಕ್ಕಾಗಿ, ಭ್ರಷ್ಟಾಚಾರ ಹೋಗಲಾಡಿಸುವುದಕ್ಕಾಗಿ, ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಇನ್ನೂ ಮುಂತಾದ ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟಿದ್ದರೆ ಈ ರಾಜ್ಯ ಇದಕ್ಕಿಂತ ಉತ್ತಮ ಗುಣಮಟ್ಟದಲ್ಲಿ ಇರುತ್ತಿತ್ತು…..

ಆದರೆ ಇಡೀ ವ್ಯವಸ್ಥೆ ಕೆಲವೇ ವ್ಯಕ್ತಿಗಳು ಮತ್ತು ಕುಟುಂಬಗಳ ಒಳಿತಿಗಾಗಿ ತನ್ನೆಲ್ಲಾ ಶಕ್ತಿ ಸಾಮರ್ಥ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅನಿಸುವುದಿಲ್ಲವೇ. ಪ್ರಜಾಪ್ರಭುತ್ವ ಎಂಬ ಹೆಸರಿನಲ್ಲಿ ಬಲಿಷ್ಠರು ಮಾತ್ರ ಕೇಂದ್ರ ಬಿಂದುವಾಗಿ ಉಳಿದವರು ಅವರ ಸೇವಕರು ಅಥವಾ ಗುಲಾಮರು ಮಾತ್ರವಾಗಿ ಉಳಿದಿದ್ದಾರೆ ಎಂಬುದು ವಾಸ್ತವವಲ್ಲವೇ…..

ಜನರ ವರ್ತನೆಯು ಕೂಡ ವಿಚಿತ್ರವಾಗಿದೆ. ನಮ್ಮ ಯೋಗ್ಯತೆಯನ್ನು, ನಮ್ಮ ಮಹತ್ವವನ್ನು, ನಮ್ಮ ಗೌರವವನ್ನು, ನಮ್ಮ ಸ್ವಾಭಿಮಾನವನ್ನು, ನಮ್ಮ ಅರ್ಹತೆಗೆ ತಕ್ಕಂತೆ ನಡೆಸಿಕೊಳ್ಳದ, ನಮ್ಮನ್ನು ವ್ಯಾಪಾರದ ಸರಕುಗಳಂತೆ ಪರಿಗಣಿಸಿ ವ್ಯವಹರಿಸುವ, ನಮ್ಮ ಮತವನ್ನು ಪಡೆದು ಅದಕ್ಕೆ ಅನ್ಯಾಯ ಮಾಡುವ, ಆಯ್ಕೆಯಾದ ಮೇಲೆ ತಮ್ಮನ್ನು ಮಾರಿಕೊಳ್ಳುವ ವ್ಯಕ್ತಿಗಳನ್ನೇ ತಲೆಯ ಮೇಲೆ ಹೊತ್ತು ಅವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರಿಗೇ ಜೈಕಾರ ಹಾಕುವ ಜೀತದಾಳುಗಳ ಮನೋಭಾವ ಪ್ರದರ್ಶಿಸುವ ಮೂರ್ಖರಾಗಿದ್ದಾರೆ……

ಕರ್ನಾಟಕದ ಮತದಾರರ ಸಂಖ್ಯೆ ಸುಮಾರು 5 ಕೋಟಿ. ವಿಧಾನ ಸಭಾ ಕ್ಷೇತ್ರಗಳು 224. ಪ್ರತಿಯೊಂದು ಕ್ಷೇತ್ರಕ್ಕೂ ಒಬ್ಬ ಅಭ್ಯರ್ಥಿ ಅಂದಾಜು ಸುಮಾರು 10 ಕೋಟಿಯಿಂದ 50 ಕೋಟಿಯವರೆಗೆ ಅವರವರ ಕ್ಷೇತ್ರದ ಯೋಗ್ಯತೆಗೆ ತಕ್ಕಂತೆ ಖರ್ಚು ಮಾಡುತ್ತಾರೆ. ಸರಾಸರಿ 20 ಕೋಟಿ ಎಂದು ಭಾವಿಸಬಹುದು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಂದರೆ ಒಟ್ಟು 672 ಅಭ್ಯರ್ಥಿಗಳು. ಇದರಲ್ಲಿ ಸುಮಾರು 500 ಅಭ್ಯರ್ಥಿಗಳು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಪರಿಗಣಿಸಿದರೆ 500×20 ಕೋಟಿ = 10000 ಕೋಟಿ. ಇಷ್ಟು ಹಣ ಅನಧಿಕೃತವಾಗಿ ಖರ್ಚಾಗುತ್ತದೆ……

ಆಯ್ಕೆಯಾಗುವ‌ ಶಾಸಕರು ಬಂಡವಾಳ ಹೂಡಿಕೆ ಎಂದು ಇದನ್ನು ಪರಿಗಣಿಸುತ್ತಾರೆ. ಅದನ್ನು ಪಡೆಯಲು ಭ್ರಷ್ಟಾಚಾರ. ಅದಕ್ಕೆ ಸಹಾಯ ಮಾಡಲು ಸರ್ಕಾರಿ ಅಧಿಕಾರಿಗಳು…..

ಒಟ್ಟಿನಲ್ಲಿ ಚುನಾವಣೆಯೂ ಒಂದು ಉದ್ಯಮ. ಆದರೆ ಹೇಳುವುದು ಮಾತ್ರ ಪ್ರಜೆಗಳೇ ಪ್ರಭುಗಳು. ಮತದಾನ ಪವಿತ್ರ ಕರ್ತವ್ಯ. ಇಂತಹ ನಾಟಕದಲ್ಲಿ ನಾವು-ನೀವು ಪಾತ್ರಧಾರಿಗಳು…..

ಒಂದು ಸ್ವಲ್ಪ ವಿವೇಚನೆ, ಒಂದು ಸ್ವಲ್ಪ ಸ್ವಾಭಿಮಾನ, ಒಂದು ಸ್ವಲ್ಪ ಒಳ್ಳೆಯತನ, ಒಂದು ಸ್ವಲ್ಪ ಮಾನವೀಯತೆ ಇಟ್ಟುಕೊಂಡು ನಮ್ಮ ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯವನ್ನು ಉಪಯೋಗಿಸಿದರೆ ನಾವು ಮತ್ತು ಇಡೀ ಸಮಾಜ ನೆಮ್ಮದಿಯ ಬದುಕು ನಡೆಸಬಹುದು.

ಬುದ್ದರು ತನ್ನ ಇಡೀ ದೇಹ ಮತ್ತು ಮನಸ್ಸನ್ನು ದಂಡಿಸಿ ನೋವು ಮುಕ್ತ ಬದುಕಿನ ಸೂತ್ರಕ್ಕಾಗಿ ಜೀವನ ಸಾಗಿಸಿದರು. ಬಸವಣ್ಣನವರು ಇಡೀ ಬದುಕನ್ನು ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಸ್ವಾಮಿ ವಿವೇಕಾನಂದರು ಭಾರತದ ಸಾಂಸ್ಕೃತಿಕ ಏಳಿಗೆಗಾಗಿ ಇಡೀ ಜೀವನ ಪೂರ್ತಿ ದುಡಿದರು. ಗಾಂಧಿ ಸ್ವಾತಂತ್ರ್ಯಕ್ಕಾಗಿ ಇಡೀ ಬದುಕನ್ನೇ ತ್ಯಾಗ ಮಾಡಿದರು. ಅಂಬೇಡ್ಕರ್ ಅವರು ಮಾನವೀಯ ಹಕ್ಕುಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು….

ಆದರೆ ನಾವು ನೀವು ಹಣ ಕೊಡದೆ, ಹಣ ಪಡೆಯದೆ ಚುನಾವಣೆಯಲ್ಲಿ ಭಾಗವಹಿಸುವ ಕರ್ತವ್ಯ ನಿರ್ವಹಿಸಲುಸಾಧ್ಯವಾಗುತ್ತಿಲ್ಲ. ಅಂದರೆ ಯೋಚಿಸಿ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗಿದೆ……..

ಆದ್ದರಿಂದ ಈ ಕ್ಷಣದಿಂದಲೇ ಆತ್ಮಾವಲೋಕನ ಮಾಡಿಕೊಂಡು ಚುನಾವಣಾ ಸಮಯದಲ್ಲಿ ಕನಿಷ್ಠ ಮಟ್ಟದಲ್ಲಾದರೂ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸೋಣ. ನಮ್ಮ ಸಮಾಜ ಮತ್ತು ನಮ್ಮ ಬದುಕು ಇನ್ನಷ್ಟು ಉತ್ತಮವಾಗಿಸುವ ಸಂಕಲ್ಪ ಮಾಡೋಣ. ಆ ಪ್ರಯತ್ನ ಈಗಿನಿಂದಲೇ ಪ್ರಾರಂಭವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!