ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅಪೂರ್ಣ ಕಾಮಗಾರಿಗಳ ಉದ್ಘಾಟನೆ ತರಾತುರಿಯಲ್ಲಿ ನಡೆಯುತ್ತಿದ್ದರೂ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು 8-10 ದಿನಗಳಲ್ಲಿ ನೀತಿ ಸಂಹಿತೆ ಘೋಷಣೆಯಾಗುವ ಸಂದರ್ಭದಲ್ಲಿ ಶೇ. 30 ರಿಂದ 40 ರಷ್ಟು ಕೆಲಸ ಬಾಕಿ ಇದ್ದರೂ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸದೆ ಅಪೂರ್ಣ ಕಾಮಗಾರಿಯನ್ನು ಉದ್ಘಾಟನೆ ಮಾಡುತ್ತಿದ್ದರೂ, ಹಾಲಿ ಶಾಸಕರ ಜೊತೆ ಜಿಲ್ಲಾಡಳಿತ ಕೈಜೋಡಿಸಿದೆ ಎಂಬ ಅನುಮಾನ ಮೂಡಿದೆ. ಇಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದ್ದೇವೆ. ಇಂತಹ ಉದ್ಘಾಟನೆಗಳಿಗೆ ಕ್ರಮ ಕೈಗೊಳ್ಳದಿದ್ದರೆ ಸೋಮವಾರ ಚುನಾವಣಾ ಆಯೋಗಕ್ಕೆ ಊರು ನೀಡುವುದಾಗಿ ತಿಳಿಸಿದರು.
ರೈತರಿಗೆ ಅನ್ಯಾಯ
ಮಳವಳ್ಳಿಯ ಪೂರಿ ಗಾಲಿಯಲ್ಲಿ 593 ಕೋಟಿ ವೆಚ್ಚದ ಹನಿ ನೀರಾವರಿ ಯೋಜನೆಯ ಸಾಕಷ್ಟು ಕೆಲಸ ಬಾಕಿ ಇದ್ದರೂ ತರಾತುರಿಯಲ್ಲಿ ಉದ್ಘಾಟಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇನ್ನು ಹನಿ ನೀರಾವರಿಯ ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿಲ್ಲ. ಯಂತ್ರಗಳ ಪ್ರಾಯೋಗಿಕ ಪರೀಕ್ಷೆ ಮಾಡಲು ಕನಿಷ್ಠ ಒಂದು ತಿಂಗಳ ಅವಧಿ ಬೇಕು, ವಿದ್ಯುಚ್ಛಕ್ತಿ ಯಾವ ಹಂತದಲ್ಲಿದೆ, ಎಲ್ಲೆಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕಾಮಗಾರಿ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರೇ ಲಿಖಿತವಾಗಿ ಉತ್ತರ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕಾಮಗಾರಿಯನ್ನು ಉದ್ಘಾಟನೆ ಮಾಡಿದರೆ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಉದ್ಘಾಟನೆ ಎಂದರೆ ಕಾಮಗಾರಿ ಪೂರ್ಣ ಎಂದರ್ಥ. ಹಾಗಾಗಿ ಗುತ್ತಿಗೆದಾರ ಸಂಪೂರ್ಣ ಬಿಲ್ಲನ್ನು ಪಡೆದು ತೆರಳುತ್ತಾನೆ. ಇದರಿಂದ ಯೋಜನೆ ಪೂರ್ಣಗೊಳ್ಳದೆ ರೈತನಿಗೆ ಅನ್ಯಾಯವಾಗುತ್ತದೆ ಎಂದರು.
ಒಳ ಒಪ್ಪಂದ
ಹನಿ ನೀರಾವರಿ ಯೋಜನೆ ಉದ್ಘಾಟನೆ ಸಂಬಂಧ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿದ ಸಂದರ್ಭದಲ್ಲಿ ಅವರು, ಸರ್ಕಾರದಿಂದ ಆದೇಶ ಬಂದರೆ ನಾವು ಉದ್ಘಾಟನೆಗೆ ಸಿದ್ಧತೆ ಮಾಡಿ ಕೊಳ್ಳಬೇಕಾಗುತ್ತದೆ. ಮೇಲಿನಿಂದ ಒತ್ತಡ ಬಂದರೆ ಅಂದರೆ ಏನರ್ಥ, ಇದು ಶಾಸಕರು ಹಾಗೂ ಬಿಜೆಪಿ ಸರ್ಕಾರದ ಒಳ ಒಪ್ಪಂದವನ್ನು ಸೂಚಿಸುತ್ತದೆ ಎಂದರು.
ಹನಿ ನೀರಾವರಿ ಯೋಜೆ ಹತ್ತು-ಇಪ್ಪತ್ತು ಕೋಟಿ ಕಾಮಗಾರಿಯಲ್ಲ. 593 ಕೋಟಿ ರೂ.ಗಳ ಕಾಮಗಾರಿ.ಸುಮಾರು 25,000 ಎಕರೆಗೆ ನೀರು ಒದಗಿಸುವ ಕಾಮಗಾರಿಯನ್ನು, ಕೆಲಸ ಪೂರ್ಣಗೊಳ್ಳದೆ ಲೋಕಾರ್ಪಣೆ ಮಾಡಿದರೆ ರೈತರಿಗೆ ಯಾವುದೇ ಪ್ರಯೋಜನವಿಲ್ಲ.ಗುತ್ತಿಗೆದಾರ ಬಿಲ್ ಮಾಡಿಕೊಂಡು ಹೊರಟರೆ ಅಪೂರ್ಣ ಯೋಜನೆಯಿಂದ ರೈತರುಗೆ ಬಹು ದೊಡ್ಡ ನಷ್ಟವಾಗಲಿದೆ. ಸಂಪೂರ್ಣ ಕಾಮಗಾರಿ ಮುಗಿಸಿ ರೈತರಿಗೆ ನೀಡಿದರೆ ಅನುಕೂಲ ಎಂದು ತಿಳಿಸಿದರು.
ಉದ್ದೇಶಪೂರ್ವಕವಲ್ಲ
ಯತ್ತಂಬಾಡಿ ಮೊರಾರ್ಜಿ ದೇಸಾಯಿ ಶಾಲೆ ಉದ್ಘಾಟನೆ ಸಂದರ್ಭದಲ್ಲಿ ಪೋಲಿಸರು ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಬಂಧಿಸಿದ ಸಂದರ್ಭದಲ್ಲಿ ನಾನು ಮಾಡಿದ ಪದಬಳಕೆ ಸರಿಯಾಗಿರಲಿಲ್ಲ.ನಾನು ಯಾವ ಪಕ್ಷದ ವಿರುದ್ಧ ಪದಬಳಕೆ ಮಾಡಲಿಲ್ಲ.ಒತ್ತಡದ ಸಂದರ್ಭದಲ್ಲಿ ಅಸಂಬದ್ಧ ಪದಬಳಕೆ ಮಾಡಿದ್ದೆ. ಇದಕ್ಕಾಗಿ ನಿನ್ನೆಯೇ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಉದ್ದೇಶ ಪೂರ್ವಕವಾಗಿ ಆಡಿಲ್ಲ ಎಂದರು.
ಶಿಷ್ಟಾಚಾರ ಉಲ್ಲಂಘನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ದಶಪಥ ರಸ್ತೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರಾದ ನನಗೆ ಮತ್ತು ಮಧು ಮಾದೇಗೌಡರಿಗೆ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಹ್ವಾನ ನೀಡಿಲ್ಲದಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು ಶಾಸಕರ ಹಕ್ಕು ಚ್ಯುತಿಯಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಅವರ ಮುಂದೆ ಹಕ್ಕು ಚ್ಯುತಿ ಮಂಡನೆ ಮಾಡಿದ್ದೇವೆ ಎಂದರು.
ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ಮತದಾರರಿಗೆ ಆಮಿಷ ಒಡ್ಡುವಂತಹ ಯಾವುದೇ ಪ್ರಕರಣ ನಡೆದರೆ ಕ್ರಮ ಕೈಗೊಳ್ಳಿ.ಅಲ್ಲದೆ ತರಾತುರಿಯಲ್ಲಿ ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡದಂತೆ ಆದೇಶ ನೀಡಿದ್ದಾರೆ.ಆದರೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಇಂದು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್,ತಾ.ಪಂ.ಮಾಜಿ ಅಧ್ಯಕ್ಷ ನಾಗೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಜಾಹಿದ್ ಉಪಸ್ಥಿತರಿದ್ದರು.