Thursday, June 13, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾರಿನ ಮೇಲೆ ಉರುಳಿದ ಮರ: ಯುವಕ ಬಲಿ

ಮಂಡ್ಯ ನಗರದಲ್ಲಿ ಸೋಮವಾರ ರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮರವೊಂದು ಕಾರಿನ ಮೇಲೆ‌ ಉರುಳಿದ ಪರಿಣಾಮ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮಂಡ್ಯ ತಾಲೂಕು ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯ ಅವರ ಪುತ್ರ ಕಾರ್ತಿಕ್(27) ಮೃತ ಯುವಕ.ಕಾರ್ತಿಕ್ ಅವರ ತಂದೆ ರಾಮಯ್ಯ ಅನಾರೋಗ್ಯದಿಂದ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಕಾರ್ತಿಕ್ ಬಂದಿದ್ದ.ಅಲ್ಲದೆ ಮಂಗಳವಾರ ಕಾರ್ತಿಕ್ ಜನ್ಮದಿನವಿತ್ತು.

ತಂದೆಯ ಆರೋಗ್ಯ ವಿಚಾರಿಸಿಕೊಂಡು ನಂತರ ಹೊಸ ಬಟ್ಟೆ ಖರೀದಿಸುವ ಭಾಗವಾಗಿ ಮೊದಲು ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಆರೋಗ್ಯ ವಿಚಾರಿಸಿ ಹೊರಬರುತ್ತಿದ್ದಂತೆ ರಾತ್ರಿ ಎಂಟು ಗಂಟೆ ಸುಮಾರಿಗೆ ಜೋರು ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ತಿಕ್ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕುಳಿತಿದ್ದನು.  ದುರಾದೃಷ್ಟವಶಾತ್ ಬೃಹತ್ ಗಾತ್ರದ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಕಾರಿನಲ್ಲಿದ್ದ ಕಾರ್ತಿಕ್ ಸ್ನೇಹಿತರಾದ ಸುನಿಲ್ ಹಾಗೂ ಮಂಜು ಪಾರಾಗಿದ್ದಾರೆ.

ಸ್ಥಳಕ್ಕೆ ಮಂಡ್ಯದ ಪೂರ್ವ ಠಾಣೆಯ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಕ್ರೇನ್ ಸಹಾಯದಿಂದ ನಜ್ಜು ಗುಜ್ಜಾಗಿದ್ದ ಮಾರುತಿ ಆಮ್ನಿಯಿಂದ ಕಾರ್ತಿಕ್ ಶವ ಹೊರತೆಗೆದರು. ನಂತರ ಮೃತ ದೇಹವನ್ನು ಮಿಮ್ಸ್ ಶವಗಾರಕ್ಕೆ ಸಾಗಿಸಲಾಯಿತು.

ಸಾರ್ವಜನಿಕರ ಆಕ್ರೋಶ

ಮಂಡ್ಯ ನಗರದ ಹಲವು ರಸ್ತೆಗಳಲ್ಲಿ ಮರಗಳನ್ನು ಬೆಳೆಸಲಾಗಿದೆ. ಆದರೆ ಮರಗಳ ನಿರ್ವಹಣೆಯನ್ನು ಅರಣ್ಯ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಬೇರು ಗಟ್ಟಿ ಇಲ್ಲದ ಮರಗಳನ್ನು ಬೆಳೆಸಿರುವುದರಿಂದ ಗಾಳಿ ಮಳೆ ಬಿದ್ದ ಸಂದರ್ಭದಲ್ಲಿ ಮರಗಳು ಧರೆಗೆ ಉರುಳುತ್ತಿವೆ. ದೊಡ್ಡ ಗಾತ್ರದ ಮರಗಳ ಕೊಂಬೆಗಳು ರಸ್ತೆಗಳಿಗೆ ಚಾಚಿಕೊಂಡಿವೆ.ಅದೇ ರೀತಿ ಒಣಗಿದ ಕೊಂಬೆಗಳನ್ನು ಹಾಗೆ ಬಿಡಲಾಗಿದೆ, ಅರಣ್ಯ ಇಲಾಖೆ ಜೊತೆಗೆ ನಗರಸಭೆ ಬೇಜವಾಬ್ದಾರಿ ತೋರುತ್ತಿರುವುದರಿಂದ ಜನರು ಬಲಿಯಾಗುತ್ತಿದ್ದಾರೆ.

ಕೂಡಲೇ ರಸ್ತೆಗೆ ಚಾಚಿಕೊಂಡಿರುವ ರೆಂಬೆ ಕೊಂಬೆಗಳನ್ನು ಹಾಗೂ ಒಣಗಿದ ಮರಗಳನ್ನು ಕಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!