Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಪ್ರವಾಸಕ್ಕೆ ಹೋಗಿದ್ದವರ ಮನೆ ಲೂಟಿ: ₹45 ಲಕ್ಷ ಮೌಲ್ಯದ ಚಿನ್ನಾಭರಣ- ನಗದು ಕಳವು

ದುಷ್ಕರ್ಮಿಗಳು ಮನೆಯೊಂದರ ಬಾಗಿಲು ಮುರಿದು ಲಕ್ಷಾಂತರ ರೂ. ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮದ್ದೂರು ಪಟ್ಟಣದ ಕೆ.ಎಚ್.ನಗರದಲ್ಲಿ ಬುಧವಾರ ತಡರಾತ್ರಿ ಜರುಗಿದೆ.

ಕೆ.ಎಚ್. ನಗರದ ನಿವಾಸಿ ಲೇ. ಕೆ.ತಮ್ಮಯ್ಯ ಅವರ ಪುತ್ರ ಡಾ. ಟಿ. ಚಂದ್ರು ರವರ ಮನೆಯ ಬಾಗಿಲನ್ನು ಆಯುಧಗಳಿಂದ ಮೀಟಿ ಒಳ ಪ್ರವೇಶಿಸಿರುವ ದುಷ್ಕರ್ಮಿಗಳು ಸುಮಾರು ೮ ಲಕ್ಷ.ರೂ. ನಗದು ೪೦ ಲಕ್ಷ.ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಡಾ.ಟಿ. ಚಂದ್ರು ಮತ್ತು ದಂಪತಿಗಳು ಬುಧವಾರ ಬೆಳಿಗ್ಗೆ ಕಾಂಚಿಪುರಂಗೆ ಪ್ರವಾಸಕ್ಕೆಂದು ತೆರಳಿದ್ದು ಇದನ್ನೇ ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಒಳಪ್ರವೇಶಿಸಿ ಮನೆಯಲ್ಲಿಟ್ಟಿದ್ದ 14 ಚಿನ್ನದ ಬಳೆಗಳು, 4 ಜೊತೆ ಡೈಮೆಂಡ್ ಓಲೆಗಳು, 2 ಕರಿಮಣಿ ಸರ, 1 ಚಿನ್ನದ ತುಳಸಿ ಹಾರ, 5 ಚಿನ್ನದ ಸರಗಳು, 3 ವೈಟ್ ಪೆಂಡೆಂಟ್, 3 ಗ್ಲೋಡ್ ಪೆಂಡೆಂಟ್ ಹಾಗೂ 2 ಎಳೆ ಚಿನ್ನದ ಸರವನ್ನು ಹಾಗೂ ಗ್ರೀನ್ ಪೆಂಡೆಂಟ್ ಚಿನ್ನದ ಸರವನ್ನು ಕದ್ಯೋಯ್ದಿದ್ದಾರೆ.

ಡಾ.ಟಿ. ಚಂದ್ರು ಅವರು ತೈಲೂರಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿದ್ದು ದೇವಾಲಯಕ್ಕೆ ಸಂಬಂಧಿಸಿದ್ದ 8 ಲಕ್ಷ ರೂ. ನಗದು, ಚಿನ್ನದ ಬಿಳಿಕಲ್ಲಿನ ಗುಂಡಿನ ಸರ ಹಾಗೂ ಇತರೆ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಒಟ್ಟು ಇವುಗಳ ಮೌಲ್ಯ ಸುಮಾರು 45ಲಕ್ಷ ರೂ. ಗಳಾಗಿವೆ ಎಂದು  ಡಾ. ಚಂದ್ರು ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಸಹೋದರನ ಪುತ್ರ ಮನೆ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಅಗತ್ಯ ಮಾಹಿತಿ ಕಲೆಹಾಕಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್, ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ಮತ್ತು ವೃತ್ತ ನಿರೀಕ್ಷಕ ಶಿವಕುಮಾರ್, ವೆಂಕಟೇಗೌಡ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮವಹಿಸಿದ್ದು ಮದ್ದೂರು ಪಿಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!