ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ್ದ ಸರಗಳ್ಳನಿಗೆ 4 ಕಠಿಣ ಸಜೆ ಹಾಗೂ ₹ 5 ಸಾವಿರ ದಂಡ ವಿಧಿಸಿ ಮಂಡ್ಯ ನಗರದ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.
ಶಿವ ಎಂಬುವವರೆ ಶಿಕ್ಷಗೊಳಗಾದ ಅಪರಾಧಿ. 2023ನೇ ಜೂ.23ರ ರಾತ್ರಿ ಮಂಡ್ಯದ ಕುವೆಂಪುನಗರದ 10ನೇ ತಿರುವಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ₹ 36 ಸಾವಿರ ಬೆಲೆ ಬಾಳುವ 8 ಗ್ರಾಂ ತಾಳಿ ಹಾಗೂ ಗುಂಡನ್ನು ಕಿತ್ತುಕೊಂಡು ಬಜಾಜ್ ಪಲ್ಸರ್ ಬೈಕ್’ನಲ್ಲಿ ಪರಾರಿಯಾಗಿದ್ದನು.
ಈ ಕುರಿತು ಮಂಡ್ಯ ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ 392 ಅಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ವಿಜಯಕುಮಾರ್ ರೈ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟಲಕ್ಷ್ಮಮ್ಮ ಜಿ ವಾದ ಮಂಡಿಸಿದ್ದರು.




