Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳೆಹಾನಿ: ಜಿಲ್ಲೆಗೆ 400 ಕೋಟಿ ಹಣ ಬಿಡುಗಡೆ ಮಾಡಲು ವಿಧಾನ ಪರಿಷತ್ ಸದಸ್ಯರ ಆಗ್ರಹ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಕೃತಿ ವಿಕೋಪ ನಿಧಿಯಿಂದ 400 ಕೋಟಿ ರೂ. ಹಣ ಕೂಡಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುವಂತೆ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ ಹಾಗೂ ಮಧು ಜಿ.ಮಾದೇಗೌಡ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸಚಿವ ಕೆ.ಗೋಪಾಲಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮಧು ಜಿ.ಮಾದೇಗೌಡ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿಯ ಬಗ್ಗೆ ಸಂಪೂರ್ಣ ವಿವರ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 400 ಕೋಟಿ ರೂ. ಹಣ ತಕ್ಷಣ ಬಿಡುಗಡೆ ಮಾಡಲು ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯಾದ್ಯಂತ ಕಳೆದ 3 ತಿಂಗಳಿನಿಂದ ಸುರಿದ ಭಾರೀ ಮಳೆಯಿಂದಾಗಿ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿನ ಜನ – ಜಾನುವಾರು , ಕೃಷಿ – ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಶಾಲೆಗಳು, ಆಸ್ಪತ್ರೆಗಳು, ಗ್ರಾಮೀಣ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ, ಸಣ್ಣ ನೀರಾವರಿ, ವಿದ್ಯುತ್ ಕಂಬಗಳ ಲೈನ್‌ಗಳು ಸೇರಿದಂತೆ ಜಿಲ್ಲೆಯ ಮೂಲಭೂತ ಸೌಲಭ್ಯಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ 264.54 ಹೆಕ್ಟೇರ್ ಕೃಷಿ ಬೆಳೆ ಹಾಗೂ 707.81 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿ ಹಾನಿಯಾಗಿದೆ.259 ಶಾಲೆಗಳಿಗೆ,535 ಶಾಲಾ ಕೊಠಡಿ,51 ಸೇತುವೆಗಳು 25 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ.180 ಹಳ್ಳಿಗಳ 245.4 ಕಿ.ಮೀ ರಸ್ತೆಗಳು,1000 ಕ್ಕೂ ಹೆಚ್ಚು ಮನೆಗಳ ಹಾನಿಯಾಗಿದ್ದು ಪ್ರಾಥಮಿಕ ಅಂದಾಜು ಒಟ್ಟಾರೆ 7 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 400 ಕೋಟಿಗೂ ಹೆಚ್ಚು ಅಸ್ತಿ-ಪಾಸ್ತಿ, ಜನ – ಜಾನುವಾರುಗಳು ಮೂಲಭೂತ ಸೌಕರ್ಯಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದ್ದರಿಂದ ಈ ಕೂಡಲೇ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ತುರ್ತಾಗಿ ಮೂಲಭೂತ ಸೌಕರ್ಯಗಳು ಹಾಗೂ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಪ್ರಕೃತಿ ವಿಕೋಪ ನಿಧಿಯಿಂದ ತುರ್ತಾಗಿ ಹಣ ಬಿಡುಗಡೆಗೊಳಿಸಲು ಸೂಕ್ತ ಆದೇಶ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸಂಕಷ್ಟದಲ್ಲಿರುವ ಮಂಡ್ಯ ಜಿಲ್ಲೆಯ ಜನತೆಯ ನೆರವಿಗೆ ಧಾವಿಸಬೇಕೆಂದು ಸಚಿವರಿಗೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!