Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಾಣಿ-ಪಕ್ಷಿ, ಜಲ ಸಂರಕ್ಷಣೆಗಾಗಿ ಜೀವ ಮುಡಿಪಿಟ್ಟ ಕಾಯಕಯೋಗಿ

✍🏿 ನ.ಲಿ.ಕೃಷ್ಣ


  • ಪ್ರಾಣಿ-ಪಕ್ಷಿಗಳಿಗೆ ನೀರುಣಿಸಿದ ಭಗೀರಥ ಕಾಮೇಗೌಡ

  • ಬರಡು ಭೂಮಿಯಲ್ಲಿ ಕೆರೆ ಕಟ್ಟಿದ ಹಸಿರು ಸೇನಾನಿ

ಕೆರೆ ಕಾಮೇಗೌಡ ಎಂದೆ ಹೆಸರಾದ ದಾಸನದೊಡ್ಡಿ ಕಾಮೇಗೌಡ ಸಾಮಾನ್ಯ ಕುಟುಂಬದಿಂದ ಬಂದ ತಮ್ಮೊಳಗಿನ ಪರಿಸರಪರತೆಯ ಕಾರಣಕ್ಕಾಗಿ ಆಸಾಮಾನ್ಯ ವ್ಯಕ್ತಿಯಾಗಿ ಎತ್ತರಕ್ಕೆ ಬೆಳೆದವರು.

ತಮ್ಮೂರಿಗೆ ಕಳಸದಂತಿಹ ಕುಂದನ ಗುಡ್ಡೆಯ ಕಲ್ಲುಗುಡ್ಡದಲ್ಲಿ ಜಲರಾಶಿ ಹಾಕಿದ ಹಿರಿಮೆ ಕಾಮೇಗೌಡರದು.

ಕುಂದನಗುಡ್ಡೆ ಕಡಿದಾಗಿರುವ ಕಾರಣ ಬಿದ್ದ ಮಳೆ ನೀರು ಹಿಂಗದೆ ಓಡೋಡಿ ಕೆಳಗೆ ಹರಿದು ಬಿಡುತ್ತದೆ, ಬಿದ್ದ ನೀರು ಹಿಂಗಲು ಕಲ್ಲು ಮಿಶ್ರಿತ ನೆಲ ಸಹಕರಿಸದು ಅದಕ್ಕೆಂದೆ ಈ ಬೆಟ್ಟ ಇಂದಿಗೂ ಸಸ್ಯಗಳು ಬೆಳೆಯಲಾಗದೆ ಬರಡಾಗಿ ನಿಂತಿದೆ.

ಇರುವುದು ಕೇವಲ ಕುರುಚಲು ಗಿಡಗಳು ಮಳೆಗಾಲದಿ ಒಂದಷ್ಠು ದಿನ ಹುಲ್ಲುಗಾವಲು ಮಾತ್ರ
ಇದೆ. ಪರಿಸರದಲ್ಲಿ ಒಗ್ಗಿಕ್ಕೊಂಡು ವಾಸಿಸುತ್ತಿರುವ ಇಲ್ಲಿನ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಕಾದ ಕುಲುಮೆಯಂತಾಗುವ ಈ ಗುಡ್ಡದಲ್ಲಿ ಎಲ್ಲಿಯು ನೀರಿನ ಲಭ್ಯತೆ ಇಲ್ಲದೆ ಪರಿತಪಿಸಿ ಜೀವ ಉಳಿಸಿಕ್ಕೊಳ್ಳಲು ಸಂಕಟಪಡಬೇಕಾದ ಸ್ಥಿತಿ ಎದುರುಗುತ್ತದೆ.

ಇದೆ ಕುರುಚಲು ಗುಡ್ಡವನ್ನು ದಾಸನದೊಡ್ಡಿ ಹಾಗು ಸುತ್ತಲಿನ ರೈತರು ಜಾನುವಾರುಗಳ ಮೇವಿಗಾಗಿ ಆಶ್ರಯಿಸುತ್ತಾ ಬಂದಿದ್ದಾರೆ, ಹೀಗೆ ಜಾನುವಾರುಗಳ ಮೇವಿಗಾಗಿ ಎಳೆವೆಯಿಂದಲೆ ಈ ಗುಡ್ಡಕ್ಕೆ ಜಾನುವಾರುಗಳ ಜೊತೆ ಬಂದ ಕಾಮೇಗೌಡ ಎಲ್ಲಾ ಪಶುಪಾಲಕರಂತೆ ತಾನಾಯಿತು ತನ್ನ ಜಾನುವಾರುಗಳ ಹೊಟ್ಟೆ ತುಂಬಿಸಿಕ್ಕೊಳ್ಳುವುದಾಯಿತು ಎಂದು ಯೋಚಿಸದೆ ಬಿರು ಬೇಸಿಗೆಯಲ್ಲಿ ಜಾನುವಾರುಗಳು ಕಾಡುಪ್ರಾಣಿಗಳು ನೀರಿಗಾಗಿ ಪರಿತಪಿಸುವುದನ್ನ ಗ್ರಹಿಸಿ ಚಿಂತನೆ ಮಾಡಿ ಗುಡ್ಡದಲ್ಲಿ ನೀರಿನ ಲಭ್ಯತೆ ಪಡೆಯುವ ಬಗ್ಗೆ ಅನ್ವೇಷಣೆಗಿಳಿದವರು ರೈತ ಕಾಮೆಗೌಡ.

ನಿತ್ಯ ಕುರಿಗಳೊಂದಿಗೆ ಗುಡ್ಡಕ್ಕೆ ಹೋಗಿ, ಗುಡ್ಡದಲ್ಲಿ ಮಳೆಗಾಲದಲ್ಲಿ ನೀರಿನ ಹರಿಯುವಿಕೆಯ ದಾರಿ ಗುರುತಿಸಿ, ಆ ಎಲ್ಲಾ ದಾರಿಗಳ ಕೂಡುವಿಕೆ ಗುರುತಿಸಿ ಆ ಜಾಗದಿ ಕಲ್ಲುಮಿಶ್ರಿತ ಮಣ್ಣನ್ನು ಆಗೆದು ಗುಂಡಿ ತೋಡಿ ಬೇಸಿಗೆಗೆ ನೀರು ಸಂಗ್ರಹಿಸುವ ದೃಢ ನಿಶ್ಚಯ ಮಾಡಿ, ಹಾರೆ, ಗುದ್ದಲಿ ಹಿಡಿದು ನಿಂತಾಗ ಇತರೆ ದನಗಾಹಿಗಳು ಇವರದು ಹುಚ್ಚುತನ ಎಂದು ನಗಾಡಿದವರೆ ಎಲ್ಲಾ, ಯಾರು ಏನೇ ಮಾಡಿದರೂ ನಕ್ಕರು ಹೀಯಾಳಿಸಿದರು, ಕಾಮೇಗೌಡರು ಮಾತ್ರ ಏಕಾಗ್ರತೆಯಿಂದ ತನ್ನೊಳಗಿನ ದೂರದೃಷ್ಠಿಯಂತೆ ಬದ್ದತೆಯಿಂದ ಸಾಗಿ ತನ್ನ ಕನಸಿನಂತೆ ಗುಡ್ಡದಲ್ಲಿ ಬಿರು ಬೇಸಿಗೆಯಲ್ಲೂ ಜಲರಾಶಿ ವನ್ಯ ಪ್ರಾಣಿಗಳಿಗೆ ಲಭ್ಯವಾಗಿಸಬೇಕೆಂದು ಅಹರ್ನಿಶಿ ಶ್ರಮಿಸಿದರು.

ಕಾಮೇಗೌಡ ಮಕ್ಕಳು ಬಲರಾಮ ಮತ್ತು ಕೃಷ್ಣ
ಕುಂದನ ಗುಡ್ಡದ ತಪ್ಪಲಿನಲ್ಲಿ

ಇಂತಹ ಶ್ರಮಿಸುವಿಕೆ ಕಾಮೇಗೌಡರ ಜೀವನ ಪೂರ ಹತ್ತಾರು ವರ್ಷಗಳ ಕಾಲ ಸಾಗಿ ಕೆರೆಗಳ ಮಾದರಿಯ ಹಲವು ಕಟ್ಟೆಗಳನ್ನು ತೋಡಿದರು.  ಅದಕ್ಕೆ ಸುಭದ್ರ ಮಣ್ಣಿನ ಏರಿ ನಿರ್ಮಿಸಿದರು, ಒಂದು ಕಟ್ಟೆ ತುಂಬಿದರೆ ಅದರ ಹೆಚ್ಚುವರಿ ನೀರು ಮತ್ತೊಂದು ಕಟ್ಟೆಗೆ ಹರಿದು ಸಾಗುವಂತೆ ತಮ್ಮ ಜೀವಿತ ಅವಧಿಯ ಅನುಭವ ಆಧಾರಿಸಿ ನಿರ್ಮಿಸಿದರು. ನೀರು ಹರಿದು ಬರುವ ದಾರಿಯನ್ನು ಗುರುತಿಸಿ ಈ ದಾರಿಗಳ ಗುಚ್ಚ ಸೇರುವ ಬಿಂದುವಿನಲ್ಲಿ ಕಟ್ಟೆ ತೆಗೆದ ಕಾಮೇಗೌಡರ ಜ್ಞಾನ ನುರಿತ ಎಂಜಿನಿಯರ್ ಗಳ ಜ್ಞಾನಕ್ಕೆ ಸಮಾನವಾದದ್ದು ಎಂದರೆ ಅಚ್ಚರಿಪಡಬೇಕಿಲ್ಲ.

ಇಂದು ಆ ಎಲ್ಲಾ ಕಟ್ಟೆಗಳಲ್ಲಿ ನೀರು ತುಂಬಿ ತುಳಕುತ್ತಿರುವುದು ಕಂಡಾಗ ಕಾಮೇಗೌಡರೊಳಗಿನ ಅಭಿಯಂತರ, ಅವರೊಳಗಿನ ವನ್ಯಜೀವಿಗಳ ಪರ ಕಾಳಜಿ ಮತ್ತು ಜಲಸಂರಕ್ಷಣೆಯ ಕುರಿತ ಚಿಂತನೆ ಎಂತವರಲ್ಲಿಯೂ ಅಚ್ಚರಿ ಮೂಡಿಸುತ್ತದೆ.

ನೀರು ಕದಡದಿರಿ : ಕಾಮೇಗೌಡ ಕಟ್ಟೆಗಳನ್ನು ಒಂದರ ನಂತರ ಒಂದು ತೆಗೆಯುತ್ತಾ ಹೋದಂತೆ ಮಳೆ ಬಂದು ಕಟ್ಟೆಗಳು ತುಂಬಿಕ್ಕೊಂಡವು, ಇದು ವನ್ಯ ಪ್ರಾಣಿಗಳು ಹಾಗು ಸ್ಥಳೀಯ ರೈತರು ಹಾಗೂ ಅವರ ಜಾನುವಾರುಗಳ ಪಾಲಿಗೆ ಖುಷಿ ಹಾಗೂ ನೆಮ್ಮದಿಯನ್ನು ತಂದು, ಬಿರು ಬೇಸಿಗೆಯಲ್ಲಿಯು ನೀರಿನ ಕೊರತೆ ನೀಗಿಸದವು.
ತಾನು ಕಟ್ಟಿದ ಕಟ್ಟೆಯಲ್ಲಿ ಪ್ರಾಣಿ, ಪಕ್ಷಿಗಳು, ಜಾನುವಾರುಗಳು ನೀರು ಕುಡಿದು ಸಂತೃಪ್ತಿ ಹೊಂದುವುದನ್ನು ಕಂಡು ಈ ಹಿರಿಯ ಜೀವ ತನ್ನ ಶ್ರಮ ಮರೆತು ಸಾರ್ಥಕತೆಯ ಭಾವನೆ ಜೊತೆಗೆ ಪುಳಕಗೊಂಡಿತು.

ಅಲ್ಲಿಗೆ ಇವರ ಯೋಚನೆ ಲಹರಿ ನಿಲ್ಲಲಿಲ್ಲ.ಕಡು ಬೇಸಿಗೆಯ ಕೊನೆ ದಿನಗಳಲ್ಲಿ ಕಟ್ಟೆಯ ನೀರು ಕಡಿಮೆಯಾದಾಗ ಕಡಿಮೆ ನೀರಿನಲ್ಲಿ ಎಮ್ಮೆಗಳು ಮಲಗಿದಾಗ ನೀರು ಕುಡಿಯಲು ಜಾನುವಾರುಗಳು ಬೇಕಾ ಬಿಟ್ಟಿ ಕಟ್ಟೆಗಿಳಿದಾಗ ನೀರು ಬಗ್ಗಡವಾಗಿ ವನ್ಯಪ್ರಾಣಿಗಳಿಗೆ ನೀರು ಕುಡಿಯಲು ಯೊಗ್ಯವಲ್ಲದ ಸ್ಥಿತಿಗೆ ತಲುಪುವುದನ್ನ ಕಂಡು
ಜಾನುವಾರು ಮೇಯಿಸಲು ಬರುವ ಪಶುಪಾಲಕರಿಗೆ ಕಟ್ಟೆಯೊಳಗೆ ಜಾನುವಾರು ಇಳಿಸಿ ನೀರು ಕದಡಿ ಬಗ್ಗಡ ಎಬ್ಬಸಿಬೇಡ್ರೋ, ದಂಡೆಯಲ್ಲಿ ನೀರು ಕುಡಿಸಿ ಜೋಪಾನವಾಗಿ ಜಾನುವಾರುಗಳನ್ನು ಮೇಲಕ್ಕೆ ಕರೆ ತನ್ನಿ ಎಂದು ಸಾರಿ ಹೇಳಿದ ಹಿಂದೆ ವನ್ಯಪ್ರಾಣಿಗಳಿಗೆ ಕುಡಿಯುವ ನೀರಿನ ಲಭ್ಯತೆ ಕಾಯ್ದುಕ್ಕೊಳ್ಳುವ ಕಾಳಜೀ ಎಂತದ್ದು ಎಂದು ಅರಿವಾಗುತ್ತದೆ.

ಕಟ್ಟೆ ತೋಡುವಾಗ ಕಾಮೇಗೌಡರನ್ನ ಕೆಕ್ಕರಿಸಿ ನೋಡಿ ಗಹಗಹಿಸಿ ನಕ್ಕವರು, ಕಟ್ಟೆಯ ನೀರು ಬಗ್ಗಡ ಮಾಡಬೇಡ್ರೋ ಎನ್ನುವ ಮಾತು ಕೆರೆಯ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ ಎಂಬಂತೆ ಭಾಷವಾಗಿ ಕಾಮೇಗೌಡರ ದೂರದೃಷ್ಟಿ ಪರಿಸರಪರತೆ ಜಲಸಂರಕ್ಷತೆ ವನ್ಯಪ್ರಾಣಿಗಳ ಪರ ಕಾಳಜಿ ತಿಳಿಯದೆ ಸ್ಥಳೀಯರಲ್ಲಿ ಕೆಲವರಿಗೂ ಕಾಮೇಗೌಡರಿಗೂ ಸ್ವಲ್ಪ ಅಂತರ ಉಂಟಾಗಿದ್ದು ಉಂಟು.

ಇಲ್ಲಿನ ಸ್ಥಳೀಯ ಪತ್ರಕರ್ತರ ಸಂಘದವರು ಕಾಮೇಗೌಡರ ಕಾಳಜಿ ಕುರಿತು ಮಾಧ್ಯಮಗಳಲ್ಲಿ ವರದಿ ಮಾಡಿದ ಪರಿಣಾಮ ಕಾಮೇಗೌಡರ ಸಾಧನೆ ಜಗತ್ತಿಗೆ ಪರಿಚಯವಾಗಿ ಅವರ ಸಾಧನೆ ಪುರಷ್ಕರಿಸಲ್ಪಟ್ಟಿತು.

ಪ್ರಧಾನ ಮಂತ್ರಿ ನರೇಂದ್ರ ಮೊದಿಯವರು ಆಕಾಶವಾಣಿಯ “ಮನದ ಮಾತು ” ವಿನಲ್ಲಿ ಕಾಮೇಗೌಡರ ಸಾಧನೆ ಪ್ರಸ್ತಾಪಿಸಿದಾಗಲಂತೂ ಕಾಮೇಗೌಡರ ಸಾಧನೆ ವ್ಯಾಪಕ ಪ್ರಚಾರ ಪಡೆಯಿತು. ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳು ಕಾಮೇಗೌಡರ ಸಾಧನೆ ಅರಿಯಲು ಕುಂದನ ಗುಡ್ಡಕ್ಕೆ ಧಾವಿಸತೊಡಗಿದರು. ಜಲಸಂರಕ್ಷಣೆ ಕುರಿತು ವಿಶೇಷ ಅಧ್ಯಯನಕ್ಕೆ ಕಾಮೇಗೌಡರ ಈ ಸಾಧನೆ ತಾಣ ಉತ್ತಮ ಕಲಿಕೆಯಾಗಲಿದೆ.

ಕಾಡಿದ ಕಾಲು ನೋವು

ಹಠವಾದಿಯು ಕಂಚಿನದ್ವನಿಯುಳ್ಳ ಗಟ್ಟಿದೇಹದ ಕಾಮೇಗೌಡರು ಪ್ರಶಸ್ತಿಗಳಿಂದ ಬೀಗಿದವರಲ್ಲಾ
ಎಂತಹ ಟೀಕೆ ಟಿಪ್ಪಣಿ ಬಂದಾಗಲು ಭಾಗಿದವರು ಅಲ್ಲಾ, ಇವರನ್ನು ತೀವ್ರವಾಗಿ ಭಾದಿಸಿದ್ದು ಕಾಲಿನ ಗಾಯ ಈ ಗಾಯದ ಕಾರಣದಿಂದಲೇ ಅವರು ಬಳಲಿದರು.

ಮೊದಲ ಹಂತದಲ್ಲಿ ಕೋವಿಡ್ ಇವರನ್ನು ಆವರಿಸಿತು, ಜಿಲ್ಲಾಡಳಿತ ಈ ವೇಳೆ ವಿಶೇಷ ಆಸಕ್ತಿ ವಹಿಸಿ ಗುಣಮುಖಗೊಳಿಸಿತಾದರೂ ಅವರ ಕಾಲು ನೋವಿನಿಂದ ಅವರು ಹೊರಬರಲಾಗಲಿಲ್ಲ. ಮನೆಯಲ್ಲಿದ್ದ ಬಡತನ, ಕುರಿ ಕೊಟ್ಟಿಗೆಯೊಟ್ಟಿಗೆ ಕೊಪ್ಪಲಿನಂತಹ ಮನೆಯಲ್ಲಿ ವಾಸ, ಹಾರೈಕೆ ಕೊರತೆ ವಯೋಸಹಜತೆ ಇವೆಲ್ಲವೂ ಕಾಮೇಗೌಡರು ತಾನು ಸಾಧಿಸಿದನ್ನು,  ಸಮಾಜ ಶ್ಲಾಘಿಸಿದ್ದನ್ನು ಅನುಭವಿಸಲಾಗದೆ ನರಳುವಂತೆ ಮಾಡಿದ್ದೆ ಹೆಚ್ಚು, ಆ ನಡುವೆ ಇಂದು ಅವರು ನಮ್ಮನ್ನಗಲಿದ್ದಾರೆ.

ಈಡೇರದ ಬಯಕೆ 

ತನಗೊಂದು ವಾಸಿಸಲು ಯೋಗ್ಯವಾದ ಪುಟ್ಟಮನೆ ಮಾಡಿ ಕೊಡಿ ಎಂದು ತನ್ನ ಭೇಟಿಗೆ ಬಂದ ಅಧಿಕಾರಿಗಳಿಗೆಲ್ಲಾ ಮನವಿ ಮಾಡಿಕೊಂಡರಾದರೂ ಇದು ಕೇವಲ ಭರವಸೆಯಾಗಿಯೇ ಉಳಿಯಿತು.

ಕಾಡು ಪ್ರಾಣಿಗಳ ಅಳಲನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಈಡೇರಿಸಿದ ಕಾಮೇಗೌಡರಿಗೆ ಒಂದು ಪುಟ್ಟ ಮನೆಯನ್ನು ನಿರ್ಮಿಸಿಕೊಡಲು ಯಾರೂ ಮುಂದೆ ಬರಲಿಲ್ಲ ಎಂಬುದು ನೋವಿನ ವಿಚಾರ.

ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮೇಗೌಡರ ಸಾಧನೆಯಿಂದ ಆತನ ಕಟ್ಟೆಗಳ ಪರಿಕಲ್ಪನೆಯಿಂದ ನೋಡಿ ಕಲಿಯುವುದು ಸಾಕಷ್ಠಿದೆ, ಕಾಮೇಗೌಡರ ಕಟ್ಟೆಗಳನ್ನು ಜತನಗೊಳಿಸುವ ಮೂಲಕವಾದರೂ ಸರ್ಕಾರ ಕಾಮೇಗೌಡರಿಗೆ ನೈಜ ಗೌರವ ಸಲ್ಲಿಸಬೇಕಾಗಿದೆ

ಅಪ್ಪನ ಇಂತಹ ಸಾಧನೆಗಳ ನಡುವೆಯು ಮುಗ್ದತೆಯಿಂದ ಕುಂದನಗುಡ್ಡದಲ್ಲಿ ಕುರಿ ಮೇಯಿಸುವ ಇವರ ಇಬ್ಬರು ಮಕ್ಕಳಾದ ಬಲರಾಮ ಹಾಗು ಕೃಷ್ಣ ಅವರಿಗಾದರೂ ವಾಸಯೋಗ್ಯ ಮನೆ ನಿರ್ಮಿಸಿಕೊಡಲು ಸರ್ಕಾರ ಮುಂದಾಗಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!