Friday, September 20, 2024

ಪ್ರಾಯೋಗಿಕ ಆವೃತ್ತಿ

ಜನರಿಂದ ಮನವಿ ಬರುತ್ತಿರುವವರೆಗೆ ರಸ್ತೆ ಗುಂಡಿ ಮುಚ್ಚುವ ಅಭಿಯಾನ ನಿಲ್ಲಲ್ಲ

ಜೆಡಿಎಸ್ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ನೇತೃತ್ವದಲ್ಲಿ ಆರನೇ ದಿನದ ‘ರಸ್ತೆ ಗುಂಡಿ ಮುಚ್ಚುವ ಅಭಿಯಾನ’ ನಡೆಯಿತು.

ಇಂದು ಮಂಡ್ಯ ನಗರದ ನಂದಾ ಟಾಕೀಸ್, ಅಶೋಕ ನಗರ, ಕಲ್ಲಹಳ್ಳಿ ಸೇರಿದಂತೆ ಹಲವೆಡೆ ಗುಂಡಿ ಮುಚ್ಚಲಾಯಿತು.

ರಸ್ತೆ ಗುಂಡಿ ಮುಚ್ಚುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ನಗರಸಭೆ ಅಧ್ಯಕ್ಷರು ಪ್ರತಿಕ್ರಿಯೆ ನೀಡಿರುವ ಕುರಿತು ನುಡಿ ಕರ್ನಾಟಕ. ಕಾಮ್ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ, ಜನರಿಂದ ಮನವಿ ಬರುತ್ತಿರುವವರೆಗೆ ರಸ್ತೆ ಗುಂಡಿ ಮುಚ್ಚುವ ಅಭಿಯಾನ ನಿಲ್ಲಲ್ಲ ಎಂದು ಉತ್ತರಿಸಿದರು.

ರಸ್ತೆ ಗುಂಡಿ ಮುಚ್ಚುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆಂದು ಕೆಲವರು ಟೀಕೆ ಮಾಡುತ್ತಿರುವುದು ಸರಿಯಲ್ಲ. ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಸೈನಿಕ ಕುಮಾರ್ ಅವರ ಸಾವಿನಿಂದ ಆ ಕುಟುಂಬಕ್ಕೆ ಆಗಿರುವ ನೋವನ್ನು ಕಣ್ಣಾರೆ ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ‘ರಸ್ತೆ ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ ಅಭಿಯಾನ’ ಮಾಡಲಾಗುತ್ತಿದೆ.ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದರು.

ಮರೀಗೌಡ ಬಡಾವಣೆಯ ನಿವಾಸಿ ಎಲ್ಐಸಿ ಉದಯ್ ಕುಮಾರ್ ಎಂಬುವರು ರಸ್ತೆ ಗುಂಡಿಯಿಂದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ರಸ್ತೆ ಗುಂಡಿ ಮುಚ್ಚಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನಾನೇ ಮುಂದೆ ನಿಂತು ಗುಂಡಿ ಮುಚ್ಚಿಸಿದೆ. ಇದರಿಂದ ಬಡಾವಣೆಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು. ನಗರಸಭೆ ಮಾಡೋದಾದ್ರೆ ಸಂತೋಷ ಎಂದರು.

ನಗರಸಭೆ ಇಂಜಿನಿಯರ್ ಅವರು ಹೇಳಿದಂತೆ ನಾಳೆಯಿಂದ ವೈಜ್ಞಾನಿಕವಾಗಿಯೇ ಕಾಮಗಾರಿ ಮಾಡಿಸುತ್ತೇನೆ. ನಾವು ವೆಟ್ ಮಿಕ್ಸ್ ಹಾಕಿ ರೋಲ್ ಮಾಡಿಸಿ ದಿನ ಬಿಟ್ಟು ದಿನ ನೀರು ಹಾಕಿಸುತ್ತಿದ್ದೇನೆ. ನಗರಸಭೆ ಡಾಂಬರು ಮಾಡದಿದ್ದರೆ ನಾನೇ ಅದನ್ನೂ ಹಾಕಿಸುತ್ತೇನೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಅಭಿಯಾನ ಮಾಡುತ್ತಿದ್ದೇನೆ. ಇದರ ಬಗ್ಗೆ ಕೆಲವರು ಟೀಕೆ ಮಾಡಿದರೂ ತಲೆಕೆಡಿಸಿಕೊಳ್ಳದೆ ಸೇವೆ ಮುಂದುವರೆಸುತ್ತೇನೆ. ಇನ್ನಾದರೂ ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡಿಸಲಿ ಎಂದು ಆಗ್ರಹಿಸಿದರು.

ನಂದಾ ಟಾಕೀಸ್ ಮುಂಭಾಗದ ಆಟೋ ನಿಲ್ದಾಣದ ಬಳಿ ಚರಂಡಿಯಲ್ಲಿ ಸಂಗ್ರಹವಾಗುವ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಆದ್ದರಿಂದ ಚರಂಡಿ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ.ಅದನ್ನು ಮಾಡಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮೋಹನ್‌ಗೌಡ ಮುದಿಗೌಡನಕೊಪ್ಪಲು, ವಿ.ಟಿ ವೆಂಕಟೇಶ್, ಶ್ರೀನಿವಾಸ್, ವಿಶ್ವನಾಥ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!