Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಳೆ ಮಂಡ್ಯದಲ್ಲಿ ”ಮಹಿಳಾ ಪ್ರತಿರೋಧ ಸಮಾವೇಶ”


  • ಮಹಿಳಾಪರ ಚಿಂತಕಿ ಡಾ.ವಿಜಯಾ ಅವರಿಂದ ಸಮಾವೇಶ ಉದ್ಘಾಟನೆ

  • ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಭಾಗಿ

ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರಗಳ ವಿರುದ್ಧ ಸತತ 15 ದಿನಗಳ ‘ಆಗ್ರಹ ಅಭಿಯಾನ’ದ ನಡೆಸಿದ ವಿವಿಧ ಮಹಿಳಾ ಪರ ಸಂಘಟನೆಗಳು ಡಿ.10ರ ವಿಶ್ವ ಮಾನವ ಹಕ್ಕು ದಿನದಂದು ಮಂಡ್ಯನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಕಲ್ಲುಕಟ್ಟಡ) ಆವರಣದಲ್ಲಿ ಮಹಿಳಾ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಂಡಿವೆ.

ಮಹಿಳಾ ಪ್ರತಿರೋಧ ಸಮಾವೇಶವು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದ್ದು, ನಂತರ  ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಆಂದೋಲನದ ಹಕ್ಕೊತ್ತಾಯ ಸಲ್ಲಿಕೆ ಮಾಡಲಾಗುವುದು.

ಹಿರಿಯ ಮಹಿಳಾಪರ ಚಿಂತಕಿ ಮತ್ತು ಹೋರಾಟಗಾರ್ತಿ ಡಾ.ವಿಜಯಾ ಸಮಾವೇಶ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಭಾಗವಹಿಸುವರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ತಮ್ಮೇಗೌಡ  ಅಧ್ಯಕ್ಷತೆ ವಹಿಸುವರು. ಉಪನ್ಯಾಸಕಿ ಸುವರ್ಣ ಉಪಸ್ಥಿತರಿರುವರು.

ಈ ಸಮಾರಂಭದಲ್ಲಿ ಅತ್ಯಾಚಾರ ವಿರೋಧಿ ಆಂದೋಲನದ ಸಹಭಾಗಿಗಳಾದ ಮಂಡ್ಯ ಜಿಲ್ಲೆಯ ಎಲ್ಲ ಮಹಿಳಾ ಮತ್ತು ಜನಪರ ಸಂಘಟನೆಗಳ ಪ್ರತಿನಿಧಿಗಳು, ತಾಲೂಕುಗಳ ಪ್ರತಿನಿಧಿಗಳು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರತಿನಿಧಿಗಳು, ಮಹಿಳಾಪರ ಕಳಕಳಿಯುಳ್ಳ ಸಮಾನ ಮನಸ್ಕರು ಭಾಗವಹಿಸುವರು.

ಅತ್ಯಾಚಾರ ವಿರೋಧಿ ಆಂದೋಲನವು ಮಂಡ್ಯ ಜಿಲ್ಲೆ ಮತ್ತು ಇನ್ನಿತರ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರಗಳ ವಿರುದ್ಧ ಕಳೆದ 7-8 ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ, ಹಲವು ಮಹಿಳಾ ಮತ್ತು ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಸೇರಿ ರೂಪಿಸಿಕೊಂಡಿರುವ ವೇದಿಕೆಯಾಗಿದೆ.

ಭಾರತದ ಸಂವಿಧಾನ ದಿನವಾದ ನವೆಂಬರ್ 26ರಿಂದ ಅಮಾಯಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾದ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಅತ್ಯಾಚಾರದ ವಿರುದ್ಧ ‘ಆಗ್ರಹ ಅಭಿಯಾನ’ವನ್ನು ಆರಂಭಿಸಿ 15 ದಿನಗಳ ಕಾಲ ಎಲ್ಲ ತಾಲೂಕುಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಹಲವು ಹಳ್ಳಿಗಳಲ್ಲಿ, ಮಂಡ್ಯ ನಗರದ ವಿವಿಧ ಬಡಾವಣೆಗಳಲ್ಲಿ ಅರಿವಿನ ಮತ್ತು ಆಗ್ರಹದ ಕಾರ್ಯಕ್ರಮಗಳನ್ನು ಅತ್ಯಾಚಾರ ವಿರೋಧಿ ಆಂದೋಲನದಿಂದ ಹಮ್ಮಿಕೊಳ್ಳಲಾಗಿತ್ತು.

ಜಗತ್ತಿನಾದ್ಯಂತ ನವೆಂಬರ್ 25ನ್ನು ‘ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಕೊನೆಗೊಳಿಸುವ ಅಂತರಾಷ್ಟ್ರೀಯ ದಿನ’ವನ್ನಾಗಿ ಕಳೆದ 30 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ನವೆಂಬರ್ 25ರಿಂದ ಡಿಸೆಂಬರ್ 10ರವರೆಗಿನ 16 ದಿನಗಳ ಅವಧಿಯಲ್ಲಿ ಗಂಭೀರ ಸ್ವರೂಪದ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಎಚ್ಚರಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಂಡ್ಯ ಜಿಲ್ಲೆಯಲ್ಲೂ ಅದೇ ರೀತಿಯಲ್ಲಿ ಆಗ್ರಹ ಅಭಿಯಾನ ನಡೆಸಿ, ಈಗ ಅದರ ಸಮಾರೋಪವನ್ನು ‘ವಿಶ್ವ ಮಾನವ ಹಕ್ಕುಗಳ ದಿನ’ವಾದ ಡಿಸೆಂಬರ್ 10ರಂದು ಮಂಡ್ಯ ನಗರದಲ್ಲಿ ‘ಮಹಿಳಾ ಪ್ರತಿರೋಧ ಸಮಾವೇಶ’ದ ಮೂಲಕ ಆಚರಣೆ ಮಾಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಪುಸ್ತಕಮನೆ, ಅಶೋಕನಗರ 4ನೇ ಅಡ್ಡರಸ್ತೆ, ಮಂಡ್ಯ. ಮೊ. 8892323523, 72040467773 ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!