Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆಟ್ಟ ಚಟಗಳಿಂದ ದೂರವಿರಿಸಿ ಓದುವ ಹವ್ಯಾಸ ಬೆಳೆಸಿ : ಟಿ.ತಿಮ್ಮೇಗೌಡ

ಹಳ್ಳಿಯ ಮಕ್ಕಳು ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಉನ್ನತ ಅಧಿಕಾರಿಗಳಾಗಿ ಕೆಲಸ ಮಾಡಬಹುದು. ಇದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ದಿಕ್ಕಿನಲ್ಲಿ ಪೋಷಕರು ಮಕ್ಕಳ ಚಲನವಲನದ ಬಗ್ಗೆ ಗಮನಕೊಡಬೇಕು. ಅವರನ್ನು ಕೆಟ್ಟ ಚಟಗಳಿಂದ ದೂರವಿರಿಸಿ ಓದುವ ಹವ್ಯಾಸ ಬೆಳೆಸಬೇಕೆಂದು ಕರ್ನಾಟಕ ಜಾನಪದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ವಿಶ್ರಾಂತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಭಾರತೀನಗರ ಸಮೀಪದ ಮೆಣಸಗೆರೆಯ ಜ್ಞಾನ ಮುದ್ರಾ ವಿದ್ಯಾ ಮಂದಿರದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುವ ಅವರು, ಮಕ್ಕಳಿಗೆ ಅವರ ಆಸಕ್ತಿಗೆ ಅನುಗುಣವಾಗಿ ಉತ್ತಮ ಶಿಕ್ಷಣ ಕೊಡಿಸಿ, ಸುಸಂಸ್ಕೃತ ನಾಗರಿಕರನ್ನಾಗಿ ಮಾಡುವ ಪ್ರಮುಖ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಓದುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕು. ಆಗ ಅವರು ಸಹ ಸಮಕಾಲೀನ ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಸ್ನೇಹಿತರ ಜೊತೆ ಕಲಿಯಲು ಅವಕಾಶ ಸೃಷ್ಟಿಸಬೇಕು. ಆಗ ಸ್ಪರ್ಧಾ ಪ್ರಪಂಚವ ಎದುರಿಸಿ, ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಮಾಡಲು ಸಾಧ್ಯ ಎಂದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ. ಉಮೇಶ್ ಮಾತನಾಡಿ, ಶಿಸ್ತು ಇರುವ ಕಡೆ ಏನಾದರೂ ಸಾಧನೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಮನೋಭಾವ ಬೆಳೆಯಬೇಕು. ಅವರಲ್ಲಿ ಅಶಿಸ್ತು ಬೆಳೆದರೆ ದಾರಿ ತಪ್ಪುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸ್ವೇಚ್ಛೆಯಾಗಿ ಬೆಳೆಯಲು ಬಿಡಬಾರದು. ಅವರಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಆಸಕ್ತಿಯ ಮೂಲಕ ಶಿಸ್ತಿನ ಜೀವನ ರೂಢಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ‌ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಮಂಗಲದ ಟಿ. ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಲಾಯಿತು. ಜ್ಞಾನ ಮುದ್ರಾ ವಿದ್ಯಾಮಂದಿರದ ಸಂಸ್ಥಾಪಕರಾದ ಶಿವಮ್ಮ ಶಿವಕುಮಾರ್, ಡಾ. ಸೌಮ್ಯ ರಾಜೇಶ್, ಪ್ರಾಂಶುಪಾಲೆ ಎಸ್.ಪಿ.ಪ್ರಭಾವತಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!