Thursday, September 19, 2024

ಪ್ರಾಯೋಗಿಕ ಆವೃತ್ತಿ

ಭತ್ತದ ಖರೀದಿ ನೋಂದಣಿಯಲ್ಲೂ ‘ದಲ್ಲಾಳಿ’ಗಳ ಗೋಲ್ ಮಾಲ್

✍️ ಹನಿಯಂಬಾಡಿ ಜಗದೀಶ್

ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಅವರ ಶ್ರಮಕ್ಕೆ ಒಂದಷ್ಟು ಹಣ ಸಿಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಇದರಿಂದಾಗಿ ಖರೀದಿಗೂ ಮುನ್ನವೇ ರೈತರನ್ನು ನೋಂದಣಿ ಮಾಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ, ಇದರಲ್ಲಿ ದಲ್ಲಾಳಿಗಳು ಕೈಚಳಕ ನಡೆಸಿ, ರೈತರನ್ನು ವಂಚಿಸಲು ಮುಂದಾಗಿರುವುದು ಮಂಡ್ಯ ಹಾಗೂ ಹಾಸನ ಜಿಲ್ಲೆಯ ವಿವಿಧೆಡೆ ಬೆಳಕಿಗೆ ಬಂದಿದೆ.

ಭತ್ತ ಶೇಖರಣೆಗೆ ಜಾಗದ ಕೊರತೆ

ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕೊಯ್ಲು(ಕಟಾವು) ಕಾರ್ಯ ಡಿಸೆಂಬರ್ ಪ್ರಾರಂಭದಿಂದಲೇ ಶುರುವಾಗಿದೆ. ರೈತ ಕುಟುಂಬಗಳು ವಿಭಕ್ತಗೊಂಡಿದ್ದು, ಮನೆಗಳು ಕೂಡ ಹಂಚಿಕೆಯಾಗಿ, ಚಿಕ್ಕದಾಗಿರುವುದರಿಂದ, ಇರುವ ಚೂರು ಪಾರು ಜಮೀನಿನಲ್ಲಿ ಬೆಳೆದ ಬೆಳೆಯನ್ನು ಶೇಖರಿಸಿಡಲು ಸ್ಥಳಾವಕಾಶ ಕೊರತೆ ಎದುರಾಗಿದೆ, ಇದರಿಂದ ಬಹುತೇಕ ರೈತರು ಭತ್ತವನ್ನು ಕಣದಲ್ಲೇ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

ಶೇಖರಿಸಿಡಲು ಸ್ಥಳಾವಕಾಶ ಇರುವ ರೈತರಷ್ಟೆ ಭತ್ತ ಸಂಗ್ರಹಿಸಿಟ್ಟುಕೊಂಡು, ಸರ್ಕಾರ ಖರೀದಿ ಕೇಂದ್ರ  ತೆರೆಯುವವರೆಗೆ ಕಾಯುತ್ತಾರೆ. ಆದರೆ ಬಹುತೇಕ ರೈತರು ದಲ್ಲಾಳಿಗಳು, ಕೊಡುವ ಕಡಿಮೆ ಬೆಲೆಗೆ ಭತ್ತವನ್ನು ಮಾರಿಕೊಳ್ಳುತ್ತಿದ್ದಾರೆಂದು ರೈತ ಮುಖಂಡ ಶ್ರೀರಂಗಪಟ್ಟಣದ ಜಯರಾಮೇಗೌಡ ತಿಳಿಸಿದ್ದಾರೆ.

ಈಗಾಗಲೇ ಭತ್ತದ ಒಕ್ಕಣೆ ಮಾಡಿರುವ ರೈತರು ಜಮೀನನ ಬಳಿಯಲ್ಲೇ ದಲ್ಲಾಳಿಗಳಿಗೆ ಕ್ವಿಂಟಾಲ್ ವೊಂದಕ್ಕೆ 1700 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಭತ್ತ ಖರೀದಿ ಮಾಡಿದ ದಳ್ಳಾಳಿಗಳು, ಭತ್ತವನ್ನು ಒಂದೆಡೆ ದಾಸ್ತಾನು ಮಾಡಿಕೊಂಡು, ನಂತರ ರೈತರಿಂದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುತ್ತಾರೆ. ಅನಂತರ ಭತ್ತದ ಖರೀದಿ ಪ್ರಾರಂಭವಾದಾಗ ಈ ಮೊದಲೇ ದಾಸ್ತಾನು ಮಾಡಿದ್ದ ಭತ್ತವನ್ನು, ದಳ್ಳಾಳಿಗಳು ಖರೀದಿ ಕೇಂದ್ರದಲ್ಲೇ ಮಾರಾಟ ಮಾಡುತ್ತಾರೆ ಎಂಬುದು ರೈತರ ಆರೋಪವಾಗಿದೆ.

ರೈತರಿಂದ ATM ಕಾರ್ಡ್ ಪಡೆದುಕೊಳ್ಳುತ್ತಿರುವ ದಳ್ಳಾಳಿಗಳು

ಇನ್ನೂ ಕೆಲವು ಭತ್ತದ ದಲ್ಲಾಳಿಗಳು, ರೈತರಿಗೆ ಕಡಿಮೆ ಬೆಲೆ ನೀಡಿ, ಭತ್ತ ಖರೀದಿಸುವುದಲ್ಲದೇ, ರೈತರಿಂದಲೇ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಅಂದರೆ, ಆರ್ ಟಿ ಸಿ, ಅಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ದಾಖಲೆಗಳನ್ನು ಪಡೆದು ನೋಂದಾಯಿಸಿ, ನಂತರ ರೈತರ ATM ಕಾರ್ಡ್ ಗಳನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರ ರೈತರ ಖಾತೆಗೆ ಹಣ ಹಾಕಿದ ಕೂಡಲೇ ಹಣವನ್ನು ದಲ್ಲಾಳಿಗಳು ಡ್ರಾ ಮಾಡಿಕೊಂಡು, ಅವರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರೂ. ನೀಡಿ, ಪೂರ್ಣ ಹಣವನ್ನು ತಾವೇ ಪಡೆದುಕೊಂಡು ಲಾಭ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಂದು ರೈತ ಮುಖಂಡ ಜಗದೀಶ್ ನಗರಕೆರೆ ದೂರಿದ್ದಾರೆ.

ಭತ್ತ ಖರೀದಿ ಕೇಂದ್ರಗಳಲ್ಲಿ ನೈಜ ರೈತನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂಬ ನಿಯಮವಿದೆ, ಇದರಿಂದಾಗಿ ಭತ್ತದ ದಲ್ಲಾಳಿಗಳು, ರೈತರು ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿಯಾದ ತಕ್ಷಣವೇ, ರೈತರ ATM ಕಾರ್ಡ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು ₹1700 ನೀಡಿ ಖರೀದಿಸುತ್ತಿದ್ದಾರೆ. ಆದರೆ ಸರ್ಕಾರವು ಕ್ವಿಂಟಾಲ್ ಭತ್ತಕ್ಕೆ 2,040 ರಿಂದ 2,060 ರೂ. ನಿಗದಿ ಮಾಡಿದೆ. ಇದರಿಂದಾಗಿ ದಲ್ಲಾಳಿಗಳಿಗೆ ಕ್ವಿಂಟಾಲ್ ವೊಂದಕ್ಕೆ  ₹ 360 ಲಾಭ ದೊರೆಯುತ್ತದೆ ಎಂಬುದು ರೈತ ಮುಖಂಡರ ಆರೋಪವಾಗಿದೆ.

ಇತ್ತಿಚೇಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತಸಂಘದ ಮುಖಂಡರು, ದಲ್ಲಾಳಿಗಳು ನಡೆಸುತ್ತಿರುವ ಅಕ್ರಮವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದು, ಕೂಡಲೇ ಖರೀದಿ ಪ್ರಾರಂಭಿಸುವಂತೆ ಒತ್ತಾಯಿಸಿದ್ದು, ಇಂತಹ ಅಕ್ರಮ ತಡೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.

ಚನ್ನರಾಯಪಟ್ಟಣದಲ್ಲೂ ಅಕ್ರಮ 

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿಯೂ ನೋಂದಣಿ ಕಾರ್ಯದಲ್ಲಿ ಅಕ್ರಮ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಮಾದಲಗೆರೆ ಗಿಡ್ಡಯ್ಯ ಎಂಬ ರೈತನ ಹೆಸರಿನಲ್ಲಿ ಆರ್ ಟಿ ಸಿ ಇದ್ದರೆ, ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಚನ್ನಾಪುರ ಗ್ರಾಮದ ರೋಜ ಎಸ್ ಸಿ ಎಂಬ ಮಹಿಳೆಯ ಹೆಸರಿನಲ್ಲಿ ಬ್ಯಾಂಕಿನ ಖಾತೆಯ ದಾಖಲೆಗಳು ಇರುವುದು ಕಂಡು ಬಂದಿದೆ.

ಇಲ್ಲಿ ದಲ್ಲಾಳಿಗಳು ತಮ್ಮ ಕುಟುಂಬದ ಮಹಿಳೆಯರ ಬ್ಯಾಂಕ್  ದಾಖಲೆಗಳನ್ನು ನೀಡಿ ವಂಚಿಸುತ್ತಿದ್ಧಾರೆಂದು ರೈತಸಂಘದ ಮುಖಂಡರು ಆರೋಪಿಸಿದ್ಧಾರೆ. ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಅವರು ಅನುಮಾನ ವ್ಯಕ್ತವಾಗಿವೆ.

ಇಂತಹ ಅಕ್ರಮ ತಡೆಗೆ ಪರಿಹಾರವೇನು ?

ದಲ್ಲಾಳಿಗಳು ಅಕ್ರಮ ಮಾರ್ಗದಲ್ಲಿ ರೈತರನ್ನು ವಂಚಿಸುವುದನ್ನು ತಡೆಯಲು ಸರ್ಕಾರ ವರ್ಷ ಪೂರ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರೈತ ಮುಖಂಡ ಜಯರಾಮೇಗೌಡ ಅವರ ಆಗ್ರಹವಾಗಿದೆ.

ರೈತರು ತಮ್ಮ ಭತ್ತದ ಕೊಯ್ಲು ಮುಗಿದ ತಕ್ಷಣ ಖರೀದಿಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರೆ, ಇಂತಹ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟಬಹುದು, ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!