Friday, September 20, 2024

ಪ್ರಾಯೋಗಿಕ ಆವೃತ್ತಿ

ಘನತೆಯ ಬದುಕಿಗಾಗಿ ನಡೆದ ಭೀಮಾ ಕೋರೆಂಗಾವ್ ಯುದ್ಧ : ಚಂದ್ರಹಾಸ 

ಶೋಷಿತರ ಸ್ವತಂತ್ರ ಮತ್ತು ಘನತೆಯ ಬದುಕಿಗಾಗಿ ನಡೆದ ಮಹಾಯುದ್ಧವೇ ಭೀಮಾ ಕೋರೆಂಗಾವ್ ವಿಜಯೋತ್ಸವ ಎಂದು ಬೆಂಗಳೂರಿನ ಸೂಪರಿಡೆಂಟ್ ಇಂಜಿನಿಯರ್ ಚಂದ್ರಹಾಸ ಹೇಳಿದರು.

ಮಂಡ್ಯನಗರದ ಜಿಲ್ಲಾಧಿಕಾರಿಗಳ ಕಚೇರಿಯ ಉದ್ಯಾನವನದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಬಹುಜನ್ ವಾಲೆಂಟಿಯರ್ ಫೋರ್ಸ್ ಜಿಲ್ಲಾ ಶಾಖೆ ಮತ್ತು ಬುದ್ಧಿಸ್ಟ್ ಟ್ರಸ್ಟ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಇವರು ಆಯೋಜಿಸಿದ್ದ ಭೀಮಾ ಕೋರೆಂಗಾವ್ 205ನೇ ವರ್ಷದ ವಿಜಯೋತ್ಸವ ಮತ್ತು ವಿಚಾರ ಸಂಕಿರಣವನ್ನು ಗಣ್ಯರೊಂದಿಗೆ ಬುದ್ದ-ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ-ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಐತಿಹಾಸಿಕ ಚರಿತ್ರೆಯಲ್ಲಿ ಮುಚ್ಚಿಟ್ಟಿದ್ದ ಸತ್ಯಘಟನೆ ಅಂಬೇಡ್ಕರ್ ಅವರ ಸಂಶೋಧನೆಯಿಂದ ಬೆಳೆಕಿಗೆ ಬಂದು ಇಂದು ಶೋಷಿತ ಅಸ್ಮಿತೆಯಾಗಿರುವ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಿಸಿ ಸ್ವತಂತ್ರ  ಮತ್ತು ಘನತೆಯ ಬದುಕಿನ ಸಂಕೇತವನ್ನು ತಿಳಿದುಕೊಳ್ಳುತ್ತಿದ್ಧೇವೆ ಎಂದು ನುಡಿದರು.

1818ರಲ್ಲಿ ಮನುವಾದಿ ಪೇಶ್ವೆ ಆಡಳಿತದ ಸೈನಿಕರಿಗೂ ಮಹರ್ ರೆಜಿಮೆಂಟ್‌ನ ಮಹಾಯೋಧರಿಗೂ ಭೀಮಾ ತೀರದಲ್ಲಿ ಯುದ್ದ ನಡೆದು, 500 ಮಂದಿ ಮಹಾರ್‌ ಯೋಧರು 20 ಸಾವಿರಕ್ಕೂ ಹೆಚ್ಚು ಪೇಶ್ವೆ ಸೈನಿಕರನ್ನು ಸೋಲಿಸಿ, ಸ್ವತಂತ್ರ ಮತ್ತು ಘನತೆಯ ಬದುಕನ್ನು ಬ್ರಿಟಿಷರಿಂದ ಕೊಡಿಸುವಲ್ಲಿ ಸಫಲತೆ ಕಾಣುತ್ತಾರೆ, ವಿಜಯದ ಸಂಕೇತಕ್ಕಾಗಿ ವಿಜಯಸ್ಥಂಭವನ್ನು ನಿಲ್ಲಿಸಿ, ವೀರಯೋಧರ ಹೆಸರುಗಳನ್ನು ಕೆತ್ತಿಸಿದ್ದಾರೆ ಎಂದು ವಿವರಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಪ್ರಪಂಚವೇ ಜನವರಿ ಒಂದನ್ನು ಹೊಸವರ್ಷ ಆಚರಣೆ ಮಾಡುತ್ತಿದೆ, ಭಾರತ ದೇಶದಲ್ಲಿ ವಿರೋಧಭಾಷಗಳ ನಡುವೆ ವರ್ಷಾಚರಣೆ ನಡೆಯುತ್ತಿದೆ, ಏನು ವಿರೋಧ ಭಾಷ ಎಂದರೆ ಹಿಂದೂ ಪರ ಸಂಘಟನೆಗಳು, ಆರ್.ಎಸ್.ಎಸ್. ಬಿಜೆಪಿಗರು ಈ ರೀತಿಯ ಬಲಪಂಥೀಯ ಎಂದು ಕರೆಯುವ ಸಂಘಟನೆಗಳು, ಇದು ನಮ್ಮ ಹೊಸವರ್ಷ ಅಲ್ಲ, ಯುಗಾದಿ ಎಂದು ಬಿಂಬಿಸುತ್ತಿದ್ದಾರೆ ಎಂದು ನುಡಿದರು.

ಭಾರತೀಯ ಮನುವಾದಿ ಇತಿಹಾಸಕಾರರು ಭೀಮಾ ಕೋರೆಗಾಂವ್ ಯುದ್ಧದ ಇತಿಹಾಸವನ್ನು ದಾಖಲು ಮಾಡಿಲ್ಲ, ಯಾಕೆ ದಾಖಲು ಮಾಡಿಲ್ಲ ಅಂದರೆ ಈ ಚರಿತ್ರೆ ಹಿಂದುಳಿದ ಮತ್ತು ಅಸ್ಪೃಶ್ಯರಿಗೆ ಸಂಬಂಧಪಟ್ಟದ ಚರಿತ್ರೆಯಾಗಿದೆ. ಮನು ಸ್ಮೃತಿ ಮೂಲಕ 2 ಸಾವಿರ ವರ್ಷಗಳ ಕಾಲ ಹಿಂದುಳಿದ ಜಾತಿಗಳನ್ನ ಮತ್ತು ಅಸ್ಪೃಶ್ಯರನ್ನ ಹೀನಾಯವಾಗಿ ನಡೆಸಿಕೊಂಡಿದ್ದು ದುರಂತ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಜೈ ಭೀಮ್ ಘೋಷಣೆ ಮೊಳಗಿಸಿದರು.

ಕಾರ್ಯಕ್ರಮದಲ್ಲಿ ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪರಶಿವಮೂರ್ತಿ ರವಣಿ, ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾಧ್ಯಕ್ಷ ಅಂದಾನಿ, ಪ್ರಗತಿಪರ ಚಿಂತಕ ಪ್ರೊ.ಮಹದೇವ ಹುಲ್ಕೆರೆ, ಬುದ್ಧಿಸ್ಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ವಿಚಾರವಾದಿ ಡಾ.ಸಿ ಮಹಾದೇವ, ಬಿ ಎಸ್ ಪಿ ರಾಜ್ಯ ಕಾರ್ಯದರ್ಶಿ ಡಾ.ಶಿವಕುಮಾರ್, ವಕೀಲ ಮಹೇಶ್, ಪ್ರಮೋದ್, ರವಿಕುಮಾರ್, ಯೋಗೇಶ್‌ಮೌರ್ಯ, ಗೋವಿಂದರಾಜ್, ಶಿವಶಂಕರ್, ಅಭಿಷೇಕ್, ತರುಣ್, ಮಹಾದೇವ್ ಪ್ರಸಾದ್, ಉಮೇಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!