Friday, September 20, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ಹಸಿರೆಲೆ ಗೊಬ್ಬರ ನೀಡಲು ಸರ್ಕಾರಕ್ಕೆ ಮನವಿ

ಮುಂಬರುವ ಬಜೆಟ್‌ನಲ್ಲಿ ರೈತರಿಗೆ ಹಸಿರೆಲೆ ಗೊಬ್ಬರ ನೀಡುವಂತೆ ರಾಜ್ಯದ ಎಲ್ಲಾ ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದೇವೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎ.ಎಸ್‌.ಅಶೋಕ್‌ ಹೇಳಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಭಾನುವಾರ ಜಿಲ್ಲಾ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದಿಂದ ಆಯೋಜಿಸಿದ್ದ ಸರ್ವ ಸದಸ್ಯರ ಮಾಸಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಹಸಿರೆಲೆ ಗೊಬ್ಬರ ನೀಡಬೇಕೆಂಬ ನಮ್ಮ ಮನವಿಗೆ ಫೆಬ್ರವರಿಯಲ್ಲಿ ನಡೆಯುವ ಆಯವ್ಯಯದಲ್ಲಿ ಸರ್ಕಾರ ಹೆಚ್ಚಿನ ರೀತಿಯಲ್ಲಿ ಸಹಕಾರ ಮಾಡಿದರೆ ಮುಂದಿನ ವರ್ಷಕ್ಕೂ ಆಗುವಷ್ಟು ಹಸಿರೆಲೆ ಗೊಬ್ಬರವನ್ನು ದಾಸ್ತಾನು ಮಾಡಲಾಗುತ್ತದೆ. ಸರ್ಕಾರ ಹಣ ಬಿಡುಗಡೆ ಮಾಡದಿದ್ದಲ್ಲಿ ವಿವಿಧ ಕಾರ್ಯಕ್ರಮಗಳ ಅನುದಾನವನ್ನು ತಡೆದು ರೈತರಿಗೆ ಹಸಿರೆಲೆ ಗೊಬ್ಬರ ಕೊಡಲು ಕ್ರಮ‌ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರೈತರಿಗೆ ನಿಜವಾದ ಹಸಿರೆಲೆ ಗೊಬ್ಬರ ಕೊಡುವುದರಿಂದ ಮಣ್ಣಿನಲ್ಲಿರುವ ಸಾರಜನಕ ಸತ್ವ ಹೆಚ್ಚಾಗಲಿದೆ. ಮಣ್ಣಿಗೆ ಜೀವ ಇದೆ. ಮಣ್ಣು ಸತ್ತರೆ ಪ್ರಪಂಚ ನಾಶವಾಗುತ್ತದೆ. ಹಾಗಾಗಿ ಮಣ್ಣನ್ನು ನಾವು ಹೆಚ್ಚು ಮಾಲಿನ್ಯ ಮಾಡದೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಸಲಹೆ ನೀಡಿದರು.

ಜನರಿಗೆ ಸಕ್ಕರೆ ಬದಲು ಬೆಲ್ಲವನ್ನು ತಿನ್ನುವುದನ್ನು ಅಭ್ಯಾಸ ಮಾಡಿಸಬೇಕು. ಒಮ್ಮೆ ಅದು ಜನರಿಗೆ ಅಭ್ಯಾಸವಾದರೆ, ನಿಧಾನವಾಗಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಮಂಡ್ಯದ ಕಬ್ಬು ಬೆಳೆಗಾರರಿಗೆ ಹಾಗೂ ಬೆಲ್ಲ ತಯಾರಕರಿಗೆ ಹೆಚ್ಚಿನ ಆದಾಯವಾಗಲಿದೆ ಎಂದು ಹೇಳಿದರು.

ಕೊರೋನ ಸಮಯದಲ್ಲಿ ಮನುಷ್ಯರಿಗೆ ವಿಟಮಿನ್‌ ಸಿ, ಜಿಂಕ್‌, ಮೆಗ್ನೆಷಿಯಂ, ಕ್ಯಾಲ್ಸಿಯಂಗೆ ಎಂದು ಹಲವು ಬಗೆಯ ಮಾತ್ರೆಗಳನ್ನು ಸೇವಿಸಿದ್ದೇವೆ. ಇದರಿಂದ ಕೇವಲ ಔಷಧ ವ್ಯಾಪಾರಿ ಕಂಪನಿಗಳು  ಲಾಭ ಮಾಡಿದವು. ಆದರೆ ನಿಜವಾಗಿಯು ಬೆಲ್ಲದಲ್ಲಿಯೇ ಈ ಎಲ್ಲಾ ಔಷಧಿಯ ಗುಣವಿದೆ. ವಿಟಮಿನ್‌ ಸಿಯನ್ನು ಸಹ ಸೇರಿಸಬಹುದು. ಈ ರೀತಿ ನಾವು ನಮ್ಮ ಉತ್ಪನ್ನಗಳನ್ನು ಬ್ರಾಂಡ್‌ ಮಾಡಿ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭವನ್ನೂ ಗಳಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಸ್‌.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಸಿ.ರಮೇಶ್‌, ಕಾರ್ಯದರ್ಶಿ ಎನ್‌.ದ್ವಾರಕನಾಥನ್‌, ಸಹಕಾರ್ಯದರ್ಶಿ ಮಹೇಶ್‌ ಶೆಟ್ಟಿ, ಖಚಾಂಚಿ ಎನ್‌.ಎಸ್‌.ಸೋಮಶೇಖರ್‌, ನಿರ್ದೇಶಕರಾದ ಟಿ.ಕೆ. ಪ್ರಸಾದ್‌ಕುಮಾರ್‌, ಹಚ್‌.ವಿ. ನವೀನ್‌ ಕುಮಾರ್‌, ಎಸ್‌.ಎನ್‌.ಪುಟ್ಟಸ್ವಾಮಿ, ಎಂ.ಪಿ.ಪ್ರಕಾಶ್‌, ಎಂ.ವಿ.ಮಂಜುನಾಥ್‌, ಎನ್‌.ಆರ್‌.ಗೋಪಾಲಕೃಷ್ಣ, ವೆಂಕಟೇಶ್‌ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!