Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರದ ಕೆಲಸದಲ್ಲಿ‌ ದೇವರ ಕಾಣಿ:ದಿವ್ಯಾ ಪ್ರಭು

ಸರ್ಕಾರಿ ನೌಕರರು ಜನರನ್ನು ಕಚೇರಿಗೆ ಅಲೆಸದೆ ಅವರ ಕೆಲಸವನ್ನು ಮಾಡಿಕೊಡುವ ಮೂಲಕ ದೇವರನ್ನು ಕಾಣಿ ಎಂದು ಜಿಲ್ಲಾ ಪಂಚಾಯತಿ ಸಿಇಒ ದಿವ್ಯಾಪ್ರಭು ಸಲಹೆ ನೀಡಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಸರ್ಕಾರಿ ನೌಕರರ ದಿನಾಚರಣೆ, ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾವುಗಳು ಸರ್ಕಾರಿ ಕೆಲಸದಲ್ಲಿರುವುದು ಹೆಮ್ಮೆಯ ವಿಷಯ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಕಾಯಕ.ನಿಷ್ಟೆ,ಪ್ರಾಮಾಣಿಕತೆ, ಶ್ರದ್ಧೆಯಿಂದ ದೇವರ ಪೂಜೆ ಮಾಡುವಂತೆ ಕೆಲಸವನ್ನೂ ಅದೇ ರೀತಿ ಮಾಡಿದರೆ ಕಾಯಕದಲ್ಲೇ ದೇವರನ್ನು ಕಾಣಬಹುದು ಎಂದರು.

ಕೋವಿಡ್ 1,2 ಮತ್ತು 3ನೇ ಅಲೆಯಲ್ಲಿ ಸರ್ಕಾರಿ ನೌಕರರು ಹಗಲು-ರಾತ್ರಿ ಎನ್ನದೆ ದುಡಿದಿದ್ದರಿಂದ ಸೋಂಕನ್ನು ತಡೆಗಟ್ಟಲು ಸಾಧ್ಯವಾಯಿತು. ಇದಕ್ಕೆ ಕಾರಣ ನಮ್ಮಲ್ಲಿರುವ ನಿಷ್ಠೆ. ಸರ್ಕಾರಿ ನೌಕರರು ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು.

ಸರ್ಕಾರದ ಯೋಜನೆಗಳನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾವಾಗಿ ಜನತೆಗೆ ತಲುಪಿಸಬೇಕೆಂದು ಕರೆ ನೀಡಿದರು.

ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಎಷ್ಟೋ ಜನರಿಗೆ ನನಸಾಗದ್ದು ನಮಗೆ ಆಗಿದೆ. ಆದ್ದರಿಂದ ನಮ್ಮ ಕೆಲಸದಲ್ಲಿ ಗುರಿ ಇಟ್ಟುಕೊಂಡರೆ ಜನರಿಗೆ ನ್ಯಾಯ ಒದಗಿಸಲು ಸಾಧ್ಯ. ಶ್ರದ್ಧೆಯಿಂದ ಕೆಲಸ ಮಾಡಿದರೆ ಅದರ ಫಲ ಸಿಗುತ್ತದೆ ಎಂದು ಹೇಳಿದರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಮಾತನಾಡಿ, ಏ.೨೧ನ್ನು ಇಡೀ ರಾಷ್ಟ್ರಾದ್ಯಂತ ನಾಗರೀಕರ ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದೇ ದಿನ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಏರ್ಪಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸಾರ್ವಜನಿಕರ ಕೆಲಸವನ್ನು ಮಾಡಿಕೊಡುವ ಮೂಲಕ ಅವರ ಬದುಕಿನ ಜೀವನಮಟ್ಟವನ್ನು ಹೆಚ್ಚಿಸಬೇಕು. ಎಲ್ಲರೂ ಕೆಲಸದ ಒತ್ತಡ ಮರೆತು ಎರಡೂ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಕ್ರೀಡಾ ಜ್ಯೋತಿ ಸ್ವೀಕರಿಸಿ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಮಾತನಾಡಿ, ಇಂದಿನ ಆಧುನಿಕ ಬದುಕಿನಲ್ಲಿ ಕ್ರೀಡೆ ಅನಿವಾರ‍್ಯವಾಗಿದೆ. ಯಾಂತ್ರೀಕೃತ ಬದುಕಿನಲ್ಲಿ ಸಿಲುಕಿ ಜೀವನೋತ್ಸಾಹವನ್ನು ಕಳೆದುಕೊಂಡಿದ್ದೇವೆ.

ಕೆಲಸದ ಒತ್ತಡದಿಂದ ಬಸವಳಿಯುವ ನೌಕರರಿಗೆ ಕ್ರೀಡೆ ದಿವ್ಯೌಷಧ ಇದ್ದಂತೆ. ಜನಸೇವೆಯ ಜತೆಗೆ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಶಾಸಕ ಎಂ.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜನತಾ ಶಿಕ್ಷಣ ಸಂಸ್ಥೆಯ ಕೆ.ಎಸ್. ವಿಜಯಾನಂದ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಂಭುಗೌಡ, ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಅಧಿಕಾರಿ ಬಿ.ಎಸ್. ಸೋಮಶೇಖರ್, ಜಿಲಾ ದೈಹಿಕ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಓಂಪ್ರಕಾಶ್, ಸಂಘದ ತಾಲ್ಲೂಕು ಅಧ್ಯಕ್ಷರಾದ ಸಿ.ಜೆ. ಶ್ರೀನಿವಾಸ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!