ವರದಿ: ಪ್ರಭು ವಿ ಎಸ್
ಇಬ್ಬರು ಸ್ನೇಹಿತರು ವಿದ್ಯುತ್ ಶಾಕ್ ಗೆ ಬಲಿಯಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಪುಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.
ಅವರಿಬ್ಬರೂ ಸ್ನೇಹಿತರು, ಒಬ್ಬ ಲೈಟ್ ಕಂಬದ ಬಳಿ ಮೊಬೈಲ್ ನಲ್ಲಿ ಮಾತನಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಸ್ನೇಹಿತನಿಗೆ ವಿದ್ಯುತ್ ಶಾಕ್ ಹೊಡೆದಿದ್ದನ್ನು ಕಂಡ ಮತ್ತೊಬ್ಬ ಸ್ನೇಹಿತ ಆತನನ್ನು ರಕ್ಷಿಸಲು ಹೋದಾಗ ಆತನಿಗೂ ಶಾಕ್ ಹೊಡೆದಿದೆ.
ವಿದ್ಯುತ್ ಶಾಕ್ ಹೊಡೆದ ಇಬ್ಬರನ್ನು ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರೂ ಸ್ನೇಹಿತರು ಪ್ರಾಣ ಬಿಟ್ಟಿದ್ದಾರೆ. ಜವರಾಯನ ಅಟ್ಟಹಾಸಕ್ಕೆ ಬಾಳಿ ಬದುಕಬೇಕಿದ್ದ ಎರಡು ಜೀವಗಳು ಬಲಿಯಾಗಿದೆ.
ಈ ದುರ್ಘಟನೆ ನಡೆದಿರುವುದು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಪುಟ್ಟೇಗೌಡನದೊಡ್ಡಿ ಗ್ರಾಮದಲ್ಲಿ.
ಇಂದು (ಗುರುವಾರ) ಬೆಳಿಗ್ಗೆ 11.30 ರ ಸಮಯದಲ್ಲಿ ರಮೇಶ್ ಎಂಬುವವರು (35) ಮನೆ ಮುಂಭಾಗದ ಲೈಟ್ ಕಂಬದ ಬಳಿ ತನ್ನ ಸ್ನೇಹಿತರ ಜೊತೆ ಮೊಬೈಲ್ ನಲ್ಲಿ ಮಾತನಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇವರನ್ನು ರಕ್ಷಣೆ ಮಾಡಲು ಹೋದ ತನ್ನ ಸ್ನೇಹಿತ ಶಂಕರ್ (25) ಅವರಿಗೂ ಶಾಕ್ ಹೊಡೆದಿದೆ.
ತಕ್ಷಣವೇ ಅಕ್ಕಪಕ್ಕದ ಮನೆಯವರು ಹಾಗೂ ಸಂಬಂಧಿಕರು ಇಬ್ಬರನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಹಾಗೂ ಶಂಕರ್ ವಿದ್ಯುತ್ ಶಾಕ್ ಗೆ ಬಲಿಯಾದ ಸುದ್ದಿಯಿಂದ ಪುಟ್ಟೇಗೌಡನ ದೊಡ್ಡಿಯ ಜನರ ಕೂಡ ಆಘಾತಕ್ಕೆ ಒಳಗಾಗಿದ್ದಾರೆ.ಬಾಳಿ ಬದುಕಬೇಕಿದ್ದ ಇಬ್ಬರು ಸ್ನೇಹಿತರ ಅಕಾಲಿಕ ಮರಣ ಎರಡೂ ಕುಟುಂಬಗಳಲ್ಲಿ,ಸ್ನೇಹಿತರು ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದೆ.