Thursday, September 19, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಸಮಾರೋಪ : ಕಾಂಗ್ರೆಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜಾರೋಹಣ

ಎಐಸಿಸಿ ವರಿಷ್ಠ ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಅಭಿಯಾನದ ಸಮಾರೋಪ ಪ್ರಯುಕ್ತ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸ ಲಾಯಿತು.

ಮಂಡ್ಯ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಚ್.ಕೃಷ್ಣ ಮಾತನಾಡಿ, ಒಡೆದ ಮನಸ್ಸುಗಳನ್ನು ಒಂದು ಗೂಡಿಸಲು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಧ್ವನಿ ಎತ್ತಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಐತಿಹಾಸಿಕ ಭಾರತ ಜೋಡೋ ಯಾತ್ರೆ ಸಂಪೂರ್ಣವಾಗಿದೆ ಎಂದರು.

ಕಳೆದ ಐದು ತಿಂಗಳಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ 4,000 ಕಿ.ಮೀ. ಸಾಗಿದ ಈ ಯಾತ್ರೆ ದೇಶದ ಇತಿಹಾಸದ ಪುಟವನ್ನು ಸೇರಿದೆ. ಹೊಸ ಮೈಲುಗಲ್ಲು ಸೃಷ್ಟಿಸಿದೆ, ಬಿಜೆಪಿ ಸರ್ಕಾರಗಳ ಜನವಿರೋಧಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ತುಂಬಲಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ನೆಲದಲ್ಲೂ ಭಾರತ ಜೋಡೋ ಪಾದಯಾತ್ರೆ ಸಾಗಿದೆ, ನಾವು ಕೂಡ ಪಾಲ್ಗೊಂಡು ಪುಳಕಕೊಂಡಿದ್ದೇವೆ, ವಿಭಿನ್ನ ಹವಾಮಾನಗಳ ವೈಪರಿತ್ಯ ಸವಾಲು, ರಾಜಕೀಯ ಎದುರಾಳಿಗಳ ಟೀಕೆ, ಷಡ್ಯಂತ್ರ, ಅಪಪ್ರಚಾರ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿ ಯಾತ್ರೆ ತನ್ನ ಗುರಿ ತಲುಪಿದೆ. ಇದು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರಿಗೆ ದೇಶದ ಬಗ್ಗೆ ಇರುವ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮಹಿಳೆಗೆ ತಿಂಗಳಿಗೆ 2,000 ರೂ. ನೀಡುವ ಭರವಸೆ ನೀಡಿದ ನಂತರ ಶೇ 3ರಷ್ಟು ಬಡ್ಡಿ ದರದಲ್ಲಿ ನೀಡುತ್ತಿರುವ ಸಾಲದ ಮೊತ್ತವನ್ನು ರೂ.10 ಲಕ್ಷದಿಂದ ರೂ.20 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ನಮ್ಮ ನಾಯಕರು ಘೋಷಿಸಿದ್ದಾರೆ ಎಂದರು.

ಭಾರತ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ಯಾವಪ್ಪ ಅವರ ಪತ್ನಿ ರೇಣುಕಾ ದ್ಯಾವಪ್ಪ ಧ್ವಜರೋಹಣ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಗಂಗಾಧರ್, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ವೆಂಕಟೇಶ್ ಹಳವಾಡಿ, ಅಸಂಘಟಿತ ಕಾರ್ಮಿಕ ಸಮಿತಿ ಅಧ್ಯಕ್ಷ ಗುರುರಾಜ್, ರಾಮಶೆಟ್ಟಿ, ಮಹಿಳಾ ಸಮತಿ ಪದಾಧಿಕಾರಿಗಳಾದ ವೀಣಾ, ಸುವರ್ಣವತಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!