Thursday, September 19, 2024

ಪ್ರಾಯೋಗಿಕ ಆವೃತ್ತಿ

ರಕ್ತದಾನದ ಮಹತ್ವದ ಬಗ್ಗೆ ಜನ ಜಾಗೃತಿ ಹೆಚ್ಚಾಗಬೇಕಿದೆ : ಬಿ.ಆರ್. ರಾಮಚಂದ್ರು

ರಕ್ತದಾನದ ಮಹತ್ವ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಜನಜಾಗೃತಿ ಆಗಬೇಕಾಗಿದೆ. ಪ್ರತಿಯೊಬ್ಬ ಯುವಕ-ಯುವತಿಯರು ರಕ್ತದಾನ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿ ರಕ್ತದ ಅಭಾವವನ್ನು ತಪ್ಪಿಸಬೇಕೆಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಮಚಂದ್ರು ಮನವಿ ಮಾಡಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಗ್ರೀನ್ ಪ್ಯಾಲೇಸ್‌ನಲ್ಲಿ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಬಿ.ಆರ್.ರಾಮಚಂದ್ರು ಅವರ 43 ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಆಡಂಬರದ ಹುಟ್ಟುಹಬ್ಬ ಆಚರಣೆಗಳು ಹೆಚ್ಚಾಗಿದ್ದು, ಕೋವಿಡ್-19 ಮಾರಕ ಕಾಯಿಲೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆಯು ಆರೋಗ್ಯ ಸ್ನೇಹಿಯಾಗಿರಬೇಕೆಂದು ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಕ್ತನಿಧಿ ಕೇಂದ್ರದಲ್ಲಿ ಪ್ರತಿದಿನ 100 ರಿಂದ 200 ಯೂನಿಟ್ ರಕ್ತದ ಅವಶ್ಯಕತೆಯಿದ್ದು, ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜು ಆದ ನಂತರ ಡಯಾಲಿಸಿಸ್, ಹೆರಿಗೆ, ಅಪಘಾತ ಶಸ್ತçಚಿಕಿತ್ಸೆ ಇವುಗಳಿಗೆ ಹೆಚ್ಚು ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಯುವಕ-ಯುವತಿಯರು ಸಾಮಾಜಿಕ ಕಳಕಳಿ ಇಟ್ಟುಕೊಂಡು ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಮನ್‌ಮುಲ್ ಉಪಾಧ್ಯಕ್ಷ ರಘುನಂನದ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಶಂಭೂಗೌಡ, ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಸುರೇಶ್, ಗ್ರಾಪಂ ಸದಸ್ಯರಾದ, ರಾಜೇಶ್, ಕುಮಾರ್, ಹೊಸೂರು ಗ್ರಾಪಂ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ಕಿರಣ್, ಜಾ.ದಳ ಮುಖಂಡರಾದ ಬೂದನೂರು ಸ್ವಾಮಿ, ಕನ್ನಲಿ ವಿಜಯ್ ಇತರರು ಭಾಗವಹಿಸಿದ್ದರು.

ಮಂಡ್ಯ ತಾಲ್ಲೂಕಿನ ಕೆರಗೋಡು, ಹಲ್ಲೇಗೆರೆ, ಮರಿಲಿಂಗನದೊಡ್ಡಿ, ಜಿ.ಹೊಸಹಳ್ಳಿ, ದೊಡ್ಡಕೊತ್ತಗೆರೆ, ಸಾತನೂರು, ಹೊನಗಾನಹಳ್ಳಿ ಗ್ರಾಮಗಳಲ್ಲೂ ಬಿ.ಆರ್.ರಾಮಚಂದ್ರು ಅಭಿಮಾನಿಗಳು ಹಾಗೂ ಜಾ.ದಳ ಕಾರ್ಯಕರ್ತರು ಬಿ.ಆರ್. ರಾಮಚಂದ್ರು ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರನ್ನು ತೆರೆದ ವಾಹನದಲ್ಲಿ ಕೆರಗೋಡು ಹಾಗೂ ಹಲ್ಲೇಗೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳು ಮೆರವಣಿಗೆ ನಡೆಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!