Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಮೇಲಿನ ಭಾವನಾತ್ಮಕ ಸೆಳೆತ ನನ್ನನ್ನು ಇಲ್ಲಿಗೆ ಕರೆತಂದಿದೆ : ಮಧುಚಂದನ್

‘ವಿದೇಶಗಳಲ್ಲಿ ಕೆಲಸ ಮಾಡಿಕೊಂಡಿದ್ದ ನನಗೆ ಹಣ, ಅಧಿಕಾರ, ಅಂತಸ್ತು ಸಿಕ್ಕಿತ್ತು. ಅವನ್ನೆಲ್ಲ ಬಿಟ್ಟು ತಾಯ್ನೆಲವಾದ ಮಂಡ್ಯದ ಮೇಲಿನ ಭಾವನಾತ್ಮಕ ಸೆಳೆತ ನನ್ನನ್ನು ಇಲ್ಲಿಗೆ ಕರೆತಂದಿದೆ’ ಎಂದು ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಹೇಳಿದರು.

ಮಂಡ್ಯ ನಗರದ ಕಲಾಮಂದಿರದಲ್ಲಿ ಭಾನುವಾರ ನಡೆದ ಕೀರೆಮಡಿ ಮಹಿಳಾ ಸಮಾವೇಶದಲ್ಲಿ ತಮ್ಮ ಹತ್ತು ಹಲವು ಮನದ ಮಾತುಗಳನ್ನು ರೈತ ಮಹಿಳೆಯರ ಸಮ್ಮುಖದಲ್ಲಿ ಹಂಚಿಕೊಂಡರು.

ಅಕ್ಕಪಕ್ಕದ ಜಿಲ್ಲೆಗಳಾದ ತುಮಕೂರು, ಹಾಸನ ಏನೆಲ್ಲ ಅಭಿವೃದ್ಧಿ ಕಂಡಿದೆ. ಅಲ್ಲಿನ ಜನ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಮಂಡ್ಯ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಇಲ್ಲಿನ ರೈತರ ಮಕ್ಕಳು ದೂರದ ನಗರಗಳಲ್ಲಿ ಸಿಕ್ಕ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಅವರ ಮನೆಯವರು ಮಾತ್ರ ಮಂಡ್ಯದ ಹಳ್ಳಿಗಳಲ್ಲಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.

ಸರಿಯಾದ ಕಾರ್ಖಾನೆಗಳಿಲ್ಲ

ಇಲ್ಲಿನ ಹೆಣ್ಣುಮಕ್ಕಳು ಇಲ್ಲಿ ಸರಿಯಾದ ಕಾರ್ಖಾನೆಗಳಿಲ್ಲದೆ, ಗಾರ್ಮೆಂಟ್ಸ್ ಗಳಿಲ್ಲದೆ ಪ್ರತಿದಿನ ವಾಹನಗಳಲ್ಲಿ ಪಕ್ಕದ ತಾಲ್ಲೂಕುಗಳಲ್ಲಿರುವ ಗಾರ್ಮೆಂಟ್ಸ್ ಗಳಿಗೆ ಹೋಗಿಬರುತ್ತಿದ್ದಾರೆ. ಇನ್ನು ಅನೇಕ ಅನಕ್ಷರಸ್ಥ ಮಹಿಳೆಯರು ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಲವರು ವಿಧವೆಯರಿದ್ದಾರೆ. ಕೆಲವರಿಗೆ ಇರುವ ಗಂಡ ಕುಡುಕ, ಜವಾಬ್ದಾರಿಯಿಲ್ಲ…..ಹೀಗೆ ಅನೇಕ ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಅದಕ್ಕಾಗಿ ಆರ್ಗ್ಯಾನಿಕ್ ಮಂಡ್ಯ ವತಿಯಿಂದ ಸುಮಾರು 1500 ನಾಟಿ ಹಸುಗಳನ್ನು ವಿತರಿಸಲಾಗಿದೆ. 23-24 ಸಾವಿರ ಮಹಿಳೆಯರು ಕೀರೇಮಡಿ ಸಂಘದಲ್ಲಿದ್ದಾರೆ. ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಿ ಸಾಧ್ಯವಾದಷ್ಟು ನೆರವು ನೀಡುತ್ತಿದ್ದೇನೆ ಎಂದರು.

nudikarnataka.com

ನಮ್ಮ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಅಧಿಕಾರವಿದ್ದರೂ ಒಂದಷ್ಟು ಜನರಿಗೆ ಉದ್ಯೋಗ ನೀಡುವ ಅವಕಾಶ ಕಲ್ಪಿಸಲಾಗಿಲ್ಲ ಎಂದರೆ ಇವರನ್ನು ಜನಪ್ರತಿನಿಧಿಗಳು ಎನ್ನುತ್ತೀರಾ? ನಾವು ಮಗಳ ಮದುವೆ ಮಾಡಲು ವರನ ಸಂಪೂರ್ಣ ವಿವರ ಕೇಳುತ್ತೇವೆ. ಆದರೆ ನಮ್ಮನ್ನು ಐದು ವರ್ಷ ಕಾಲ ಆಳುವ ವ್ಯಕ್ತಿಯ ಕುರಿತು ಏನೂ ವಿಚಾರಿಸದೆ ಯಾರು ಜಾಸ್ತಿ ಕೊಡುತ್ತಾರೋ ಅವರಿಗೆ ಓಟು ಹಾಕುವುದು ಸರಿಯಲ್ಲ. ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಇನ್ನಷ್ಟು ಸಾಲಗಾರರಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡಬೇಕಾದ ಜ್ಞಾನದಾಸೋಹ ಬಿಟ್ಟು ಬಿಸಿಯೂಟ ಮಾತ್ರ ಕೊಡುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಜನ ಇದನ್ನು ಸವಾಲಾಗಿ ತೆಗೆದುಕೊಂಡು ಮಂಡ್ಯ ನಿರ್ಮಾಣಕ್ಕೆ ಮುಂದಾಗಬೇಕು. ಅದುವೇ ನನ್ನ ಗುರಿ, ಆದ್ಯತೆಯಾಗಿದೆ ಎಂದರು.

ಮಧುಚಂದನ್ ನಮ್ಮ ಶಾಸಕರಾಗಬೇಕು

ಮಹಿಳಾ ಮುಖಂಡರಾದ  ನಾಗರೇವಕ್ಕ ಮಾತನಾಡಿ, ಮಂಡ್ಯ ಬದಲಾಗಬೇಕೆಂದರೆ ಮಧುಚಂದನ್ ನಮ್ಮ ಶಾಸಕರಾಗಬೇಕು. ಆಗ ಮಾತ್ರ ಇಲ್ಲಿ ಮಹಿಳೆಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಒಂದು ಕುಕ್ಕರ್, ಸೀರೆ, ಹಣಕ್ಕಾಗಿ ಆಸೆಪಟ್ಟು ಮತಹಾಕಿದರೆ ಮುಂದೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆಂದು ಎಚ್ಚರಿಸಿದರು.

ಇದುವರೆಗೆ ಮತದಾರರಿಗೆ ಇನ್ನೂರೋ ಮುನ್ನೋರೋ ಕೊಟ್ಟು ಆಯ್ಕೆಗೊಂಡು ಬಂದವರು ತಾವು ಮಾತ್ರ ಕೋಟಿ ಕೋಟಿ ಆಸ್ತಿಗಳಿಸಿಕೊಂಡಿದ್ದಾರೆ. ತಕ್ಷಣದ ಆಸೆ ಬಿಟ್ಟು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗುವಂತಹ ಎಸ್.ಸಿ.ಮಧುಚಂದನ್ ಅವರನ್ನು ಗೆಲ್ಲಿಸಿಕೊಳ್ಳಿ. ಅದಕ್ಕಾಗಿ ದೋಸೆ ಮಗುಚಿದಂತೆ ಈ ಬಾರಿ ಬದಲಾವಣೆ ತನ್ನಿ ಎಂದು ಪ್ರಸನ್ನ ಎನ್.ಗೌಡ ಕರೆ ನೀಡಿದರು.

ಪ್ರಸ್ತುತ ಚುನಾವಣಾ ವ್ಯವಸ್ಥೆ, ಹಣ ಆಮಿಷಕ್ಕೊಳಗಾಗಿ ಮತ ಮಾರಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು, ಆಗಬೇಕಾಗಿರುವ ಬದಲಾವಣೆಗಳೇನು ಎಂಬ ನಿಟ್ಟಿನಲ್ಲಿ ಚಿಂತನ ಮಂಥನ ನಡೆಯಿತು.

ವೇದಿಕೆಯಲ್ಲಿ ಕೀರೆಮಡಿ ಮಹಿಳಾ ಸಂಘದ ಸದಸ್ಯರಿಗೆ ವಿಮಾ ಪತ್ರ ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷರಾದ ನಿರ್ಮಲ ಚಿಕ್ಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಗರಾಧ್ಯಕ್ಷೆ ಸುಜಾತ ಕೃಷ್ಣ, ಹುಲಿವಾನ ರವಿಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ವರಪ್ರಸಾದ್, ತಗ್ಗಹಳ್ಳಿ ಪ್ರಸನ್ನ ಮಾತನಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ