Friday, September 20, 2024

ಪ್ರಾಯೋಗಿಕ ಆವೃತ್ತಿ

ಮೋದಿ – ಶಾ ನೂರು ಬಂದ್ರೂ ಜೆಡಿಎಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ : ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ ನೂರು ಭಾರಿ ಬಂದು ಪ್ರಚಾರ ಮಾಡಿದರೂ ನಮ್ಮ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಈ ಭಾರಿಯೂ ಸಹ ಮಂಡ್ಯ ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳಿಗೆ ಜಯ ಸಿಗಲಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಸೋಮವಾರ ನಡೆದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಮುಖಂಡರು ಹಾಗೂ ಹಾಲಿ ದರಖಾಸ್ತು ಕಮಿಟಿ ಸದಸ್ಯ ಕೆ.ಆರ್.ಹೇಮಂತಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ರಾಮೇಗೌಡ, ಪುರಸಭೆ ಸದಸ್ಯರಾದ ಗಿರೀಶ್, ಇಂದ್ರಾಣಿ ವಿಶ್ವನಾಥ್, ನೇಕಾರ ಸಮಾಜದ ನಾಯಕ ಕೆ.ಆರ್.ಪುಟ್ಟಸ್ವಾಮಿ, ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಚಿಕ್ಕೋನಹಳ್ಳಿ ಶಿವರಾಮೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ  ನೂರಾರು ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಪರವಾದ ಅಲೆಯು ಜೋರಾಗಿ ಬೀಸುತ್ತಿದೆ. ಪಂಚರತ್ನ ಯೋಜನೆಯ ಅನುಷ್ಠಾನಕ್ಕೆ ಪೂರಕವಾದ ವಾತಾವರಣವು ಕಂಡುಬರುತ್ತಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ಸಮೀಕ್ಷೆ ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ತಮ್ಮ ಪರ ಬರೆಸುತ್ತಿರುವ ಸಮೀಕ್ಷೆಯಾಗಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಈ ಭಾರಿ ನಮ್ಮ ಜೆಡಿಎಸ್ ಪಕ್ಷವು ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರುವುದುಖಚಿತವಾಗಿದೆ. ನಮ್ಮ ಪಕ್ಷ ಕೇವಲ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹೇಳುತ್ತಿವೆ ಆದರೆ ನನ್ನ ಜಾ.ದಳ ಪಕ್ಷವು ಇಡೀ ರಾಜ್ಯಾದ್ಯಂತ ಉತ್ತಮ ಜನಬೆಂಬಲ ಹೊಂದಿರುವ ಪಕ್ಷವಾಗಿದೆ. ನಾನು ಸ್ವತಂತ್ರವಾಗಿ ಐದು ವರ್ಷ ಆಡಳಿತ ನೀಡುವಂತೆ ರಾಜ್ಯದ ಜನತೆ ಬಹುಮತ ನೀಡುವ ವಿಶ್ವಾಸವಿದೆ ಎಂದರು.

ಪಂಚರತ್ನ ಯೋಜನೆಯಲ್ಲಿ ಜನರಿಗೆ ಬಹುಮುಖ್ಯವಾಗಿ ಬೇಕಾಗುವ ಶಿಕ್ಷಣ, ಆರೋಗ್ಯ, ವಸತಿ ಯೋಜನೆಗಳನ್ನು ಜಾರಿಗೊಳಿಸುತ್ತೇನೆ. ಇದರಿಂದ ಬಡವರಿಗೆ ಉಚಿತ ಶಿಕ್ಷಣ ಸಿಗುತ್ತದೆ. ಬಡವರಿಗೆ ಎಲ್ಲಾ ಖಾಯಿಲೆಗಳಿಗೂ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಲಾಗುವುದು. ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವ ಆಶ್ರಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಈ ಮೂಲಕ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಗೆ ನಾನು ಮತ್ತು ಹೆಚ್.ಡಿ.ರೇವಣ್ಣ ಏನೂ ಕೊಡುಗೆ ನೀಡಿಲ್ಲ ಎಂದು ಬುರುಡೆ ಬಿಡುತ್ತಿರುವ ಸಚಿವ ನಾರಾಯಣಗೌಡ ಆತ್ಮಾವಲೋಕನ ಮಾಡಿಕೊಳ್ಳಲಿ, ಉಂಡಮನೆಗೆ ಕೇಡು ಬಯಸಿದರೆ ಆ ದೇವರೂ ಕೂಡ ಕ್ಷಮಿಸಲ್ಲ ಎಂಬ ಅರಿವಿರಲಿ. ಮುಂಬೈ ನಗರದಲ್ಲಿದ್ದ ನಾರಾಯಣಗೌಡ ಅವರನ್ನು ಕೆ.ಆರ್.ಪೇಟೆಗೆ ಕರೆತಂದು ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದು ಜೆಡಿಎಸ್ ಪಕ್ಷ ಎಂಬ ಅರಿವಿರಲಿ ಎಂದು ತಿರುಗೇಟು ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿ.ವಿ.ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮನ್‌ಮುಲ್ ಮಾಜಿ ಅಧ್ಯಕ್ಷ
ಎಂ.ಬಿ.ಹರೀಶ್, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಅಶ್ವಿನ್‌ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!