Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಪಟ ನಾಟಕಕ್ಕೆ-ಕಣ್ಣೀರಿಗೆ ಬೆಲೆ ಕೊಡಬೇಡಿ : ಹೆಚ್‍.ಡಿ. ಕುಮಾರಸ್ವಾಮಿ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಎದುರಾಳಿಯೊಬ್ಬ ಕಣ್ಣೀರು ಹಾಕುತ್ತಾ,ದಯವಿಟ್ಟು ನನಗೆ ಮತ ಮತ ನೀಡಿ ಎನ್ನುತ್ತಿದ್ದಾರೆ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿರುವ ಈತನ ಕಪಟ ನಾಟಕಕ್ಕೆ, ಕಣ್ಣೀರಿಗೆ ಬೆಲೆ ಕೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ. ಕುಮಾರಸ್ವಾಮಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಹೆಸರೇಳದೆ ಕಿಡಿಕಾರಿದರು.

ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ನವರ ನಾಮಪತ್ರ ಸಲ್ಲಿಕೆಯ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ರವೀಂದ್ರ ಶ್ರೀಕಂಠಯ್ಯ ನೇರ ಮಾತುಗಾರ. ಆದರೆ ಅವನ ಹೃದಯ ಪರಿಶುದ್ಧವಾಗಿದೆ.ನಮ್ಮ ಪಕ್ಷದ ಎದುರಾಳಿ ಈಗ ಕಣ್ಣೀರು ಹಾಕುತ್ತಾ ದಯವಿಟ್ಟು ನನಗೆ ಮತ ಹಾಕಿ ಎಂದು ಕೇಳುತ್ತಿದ್ದಾರೆ. ದೇವೇಗೌಡರು ಅವರ ಕುಟುಂಬಕ್ಕೆ ರಾಜಕೀಯ ಆಸರೆ ನೀಡಿದವರು.ಅವರ ಬೆನ್ನಿಗೆ ಚೂರಿ ಹಾಕಿ ಹೋದಾಗ ಕಣ್ಣೀರು ಬರಲಿಲ್ಲವೇ? ನಾನು ಸಹ ಕಣ್ಣೀರು ಹಾಕಿದ್ದೇನೆ. ಬಡವರ ಕಷ್ಟ,ನೋವು ನೋಡಿದಾಗ ನನಗೂ ಕಣ್ಣೀರು ಬರುತ್ತದೆ. ಆದರೆ ಕಪಟ ನಾಟಕ ಮಾಡುತ್ತಾ, ಕಣ್ಣೀರು ಹಾಕುವವರಿಗೆ ಬೆಲೆ ಕೊಡಬೇಡಿ ಎಂದು ರಮೇಶ್ ಬಾಬು ಬಂಡಿಸಿದ್ದೇಗೌಡರ ಮೇಲೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಿಂದ ಸ್ಪರ್ಧಿಸಲ್ಲ

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ನೀಡಿರುವುದು ಸಂತೋಷ ತಂದಿದೆ. ಕಳೆದೊಂದು ವಾರದ ಹಿಂದೆ ಈ ಸುದ್ದಿಯನ್ನು ಹಬ್ಬಿಸಲಾಗಿದೆ.

ಇದಕ್ಕೆ ಮಹಾನ್ ನಾಯಕರೊಬ್ಬರು ನನ್ನ ವಿರುದ್ಧ ಮಂಡ್ಯದಿಂದ ಸ್ಪರ್ಧಿಸುವ ಮಾತುಗಳನ್ನಾಡಿದ್ದಾರೆ. ಅವರಂತೆ ನಾನು ದುರಂಹಕಾರದ ಮಾತುಗಳನ್ನು ಆಡಲು ಹೋಗುವುದಿಲ್ಲ. ಮಂಡ್ಯದಿಂದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುವುದಾಗಿ ಹೇಳಿದರು.

ಧೂಳೀಪಟ ಸಾಧ್ಯವಿಲ್ಲ
ಜನರ ಸೇವೆಯ ಜಾತ್ಯಾತೀತ ಜನತಾದಳವನ್ನು ಕೆಲವರು ಧೂಳೀಪಟ ಮಾಡುವುದಾಗಿ ತಿರಸ್ಕಾರದಿಂದ ಮಾತನಾಡಿದ್ದಾರೆ. ಡಂಭಾಚಾರದ ರಾಜಕಾರಣ ನಮ್ಮದಲ್ಲ.ನಮ್ಮ ಪಕ್ಷದ ಬಳಿ ಶ್ರೀಮಂತರು ಬರೋದಿಲ್ಲ. ಬಡ ಜನರು, ಸಾಮಾನ್ಯ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿರುವ ಜೆಡಿಎಸ್ ಪಕ್ಷವನ್ನು ಎಂದಿಗೂ ಧೂಳೀಪಟ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ರೈತರ ಪಕ್ಷ ಮುಗಿಸುವ ಸವಾಲನ್ನು ಕೆಲವರು ಮಾಡಿದ್ದು,ರಾಜ್ಯದ ಜನರ ಪ್ರೀತಿ, ವಿಶ್ವಾಸದ ಮುಂದೆ ಯಾರ ಮಾತು ನಡೆಯುವುದಿಲ್ಲ ಅಂದರು.

ಉಡುಗೊರೆ ನೀಡಿ
ಮಂಡ್ಯ ಜಿಲ್ಲೆಗೆ ನಾನೆಂದು ದ್ರೋಹ ಮಾಡಿಲ್ಲ. ಮಂಡ್ಯದಲ್ಲಿ ರೈತಸಂಘದಲ್ಲಿದ್ದ ಎಸ್.ಡಿ. ಜಯರಾಮ್ ಅವರನ್ನು ಬೆಳೆಸಿದ್ದು ದೇವೇಗೌಡರು. ಕೆ.ವಿ. ಶಂಕರೇಗೌಡರು ಮನೆಯಲ್ಲಿದ್ದಾಗ ಅವರನ್ನು ಲೋಕಸಭೆಗೆ ನಿಲ್ಲಿಸಿ ಅವರಿಗೆ ರಾಜಕೀಯ ಜನ್ಮ ನೀಡಿದ್ದು ದೇವೇಗೌಡರ ಜನತಾದಳ.ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವ ವ್ಯಕ್ತಿಗಳಿಗೆ ಸರಿಯಾದ ಪಾಠವನ್ನು ಜೆಡಿಎಸ್ ಕಾರ್ಯಕರ್ತರು, ಮತದಾರರು ಕಲಿಸಿದ್ದಾರೆ. ಮೇ 18ಕ್ಕೆ ದೇವೇಗೌಡರು 92ನೇ ವರ್ಷಕ್ಕೆ ಕಾಲಿಡುತ್ತಾರೆ.ಮೇ 13ಕ್ಕೆ ಫಲಿತಾಂಶವಿದೆ.ಮಂಡ್ಯ ಜಿಲ್ಲೆಯಲ್ಲಿ ಕಳೆದ ಬಾರಿ 7 ಕ್ಕೆ 7 ಕ್ಷೇತ್ರಗಳನ್ನು ಗೆಲ್ಲಿಸಿದಂತೆ, ಜನರು ಈ ಬಾರಿಯೂ 7 ಕ್ಕೆ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇವೇಗೌಡರಿಗೆ ಹುಟ್ಟು ಹಬ್ಬದ ಉಡುಗೊರೆ ಕೊಡಬೇಕು ಎಂದು ಮನವಿ ಮಾಡಿದರು.

ಸ್ವತಂತ್ರ ಅಧಿಕಾರ ನೀಡಿ
ಜೆಡಿಎಸ್ ಪಕ್ಷ ಉತ್ತರ ಕರ್ನಾಟಕದಲ್ಲಿ ಈ ಬಾರಿ ಉತ್ತಮ ಸಾಧನೆ ಮಾಡಲಿದೆ. ಪಂಚರತ್ನ ಯೋಜನೆಯ ಮೂಲಕ ದಲಿತ,ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ಸಮುದಾಯದ ಜನರು ನೆಮ್ಮದಿಯ ಜೀವನ ಮಾಡಲು ಯೋಜನೆ ರೂಪಿಸಿದ್ದೇನೆ. ಇದಕ್ಕಾಗಿ 2.50 ಲಕ್ಷ ಕೋಟಿ ಖರ್ಚು ಮಾಡಬೇಕಾಗುತ್ತದೆ.ಪೂರ್ತಿ ಐದು ವರ್ಷ ನಮಗೆ ಸಂಪೂರ್ಣ ಸ್ವತಂತ್ರ ಅಧಿಕಾರ ಸ್ವತಂತ್ರವಾಗಿ ಅಧಿಕಾರ ನೀಡಿದರೆ ಇವೆಲ್ಲವೂ ಸಾಧ್ಯವಾಗುತ್ತದೆ. ನನಗೆ ಅಧಿಕಾರದ ಆಸೆ ಇಲ್ಲ ಆದರೆ ಈ ರಾಜ್ಯದ ಜನರು ಉತ್ತಮ ಜೀವನ ನಡೆಸಲು ನನಗೆ ಅಧಿಕಾರ ನೀಡಿ ಎಂದರು.

ಹೆಚ್ಚು ಮತಗಳಿಂದ ಗೆಲ್ಲಿಸಿ
ಕಳೆದ ಚುನಾವಣೆಯಲ್ಲಿ ರವೀಂದ್ರ ಶ್ರೀಕಂಠಯ್ಯ ನವರನ್ನು ಬಾರಿ ಅಂತರದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಅದಕ್ಕಿಂತ ಇನ್ನೂ 10,000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕು. ಮಂಡ್ಯದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಮಾಡುವುದು ನನ್ನ ಯೋಜನೆ. ಈ ಭಾಗದ ಯುವಕರಿಗೆ 40 ರಿಂದ 50 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡುವ ಹೊಣೆಗಾರಿಕೆ ನನ್ನದು. ನನಗೆ ಸ್ಪಷ್ಟ ಬಹುಮತ ನೀಡಬೇಕು. ಅಧಿಕಾರಕ್ಕೆ ಬಂದು ನನ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ವಿಧಾನಸಭೆ ವಿಸರ್ಜನೆ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ,ಜೆಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಮುಖಂಡರಾದ ಸಂತೋಷ್, ಜಿ.ಪಂ. ಮಾಜಿ ಸದಸ್ಯ ಮರಿಗೌಡ ಮತ್ತಿತರದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!