Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚುತ್ತಿದೆ : ಚೇತನ್

ರಾಜ್ಯ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚುತ್ತಿದೆ ಎಂದು ಚಿತ್ರನಟ, ಪ್ರಗತಿಪರ ಚಿಂತಕ ಚೇತನ್ ಕಿಡಿಕಾರಿದರು.

ಶ್ರೀರಂಗಪಟ್ಟಣದ ಅಂಬೇಡ್ಕರ್ ಭವನದ ಬಳಿ ಸಮಾನ ಮನಸ್ಕರ ವೇದಿಕೆ ಏರ್ಪಡಿಸಿದ್ದ ಬಹುಸಂಸ್ಕೃತಿ ಸಾಮರಸ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು,ಕಳೆದ 300 ವರ್ಷದ ಇತಿಹಾಸದಲ್ಲಿ ದಾಖಲಾಗಿರುವ ಪ್ರಕಾರ ಇಡೀ ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ವ್ಯಕ್ತಿಯೆಂದರೆ ಅದು ಟಿಪ್ಪು ಸುಲ್ತಾನ್.

ಭೂಮಾಲೀಕರಿಂದ ಜಮೀನನ್ನು ಶೋಷಿತ ಮತ್ತು ಬಡ ಜನರಿಗೆ ನೀಡಿದ ಟಿಪ್ಪುಸುಲ್ತಾನ್ ದಲಿತ ಬಹುಜನರಿಗೆ ಘನತೆ, ಗೌರವ ಹಾಗೂ ಉದ್ಯೋಗವನ್ನು ನೀಡಿದವರು.

ಆದರೆ ಟಿಪ್ಪು ಸುಲ್ತಾನ್ ಮುಸ್ಲಿಂ ಎಂಬ ಕಾರಣದಿಂದ ಆತನನ್ನು ವಿಲನ್ ಎಂಬಂತೆ ಚಿತ್ತಿಸುತ್ತಿರುವುದು ಅಕ್ಷಮ್ಯ ಎಂದರು.

ರಣರಂಗದಲ್ಲಿ ವೀರಾವೇಶದಿಂದ ಹೋರಾಡಿದ ಟಿಪ್ಪುಸುಲ್ತಾನ್ ರನ್ನ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಬಿಂಬಿಸುತ್ತಿರುವ ಆಡಳಿತ ಸರ್ಕಾರ ಇತಿಹಾಸವನ್ನು ತಿರುಚುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದರು.

ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರ ಧರ್ಮಗಳ ನಡುವೆ ‌ಬೆಂಕಿ ಹಚ್ಚುವ ಕೆಲಸ ಮಾಡಲು ಹೊರಟಿದೆ.ಹಾಗಾಗಿ ಧಾರ್ಮಿಕ ಗ್ರಂಥಗಳನ್ನು ಅಧ್ಯಯನಕ್ಕಾಗಿ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಬಾರದು ಎಂದು ಹೇಳಿದರು.

ಸಂವಿಧಾನದಲ್ಲಿ ಜಾತ್ಯಾತೀತ ಆಶಯ ಮುಖ್ಯ ಅಂಶವಾಗಿದೆ. ಆದರೆ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆ, ಬೈಬಲ್, ಕುರಾನ್ ಗಳಲ್ಲಿ ಒಳ್ಳೆಯದು,

ಕೆಟ್ಟದ್ದು ಹಾಗೂ ಅಸಮಾನತೆಯ ವಿಷಯಗಳು ಇರುವುದರಿಂದ ಪಠ್ಯಪುಸ್ತಕಕ್ಕೆ ಸೇರ್ಪಡೆ ಮಾಡಬಾರದು. ಇದರ ಅವಶ್ಯಕತೆ ಇರುವವರು ಗುಡಿ ಹಾಗೂ ಮನೆಗಳಲ್ಲಿ ಓದಿಕೊಳ್ಳಲಿ ಎಂದರು.

ಪ್ರಸ್ತುತ ದಲಿತರಿಗೆ ಬ್ರಾಹ್ಮಣ್ಯ, ಮುಸ್ಲಿಂ ಸಮುದಾಯದವರಿಗೆ ಕೋಮುವಾದ ಶತ್ರುಗಳಾಗಿವೆ. ಅಸಮಾನತೆ, ಭೇದ- ಭಾವ,ಅವೈಜ್ಞಾನಿಕತೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ.

ಇದಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪುರವರ ಸಮಾನತೆ, ನ್ಯಾಯ, ವೈಜ್ಞಾನಿಕತೆ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಟಿಪ್ಪು ಸುಲ್ತಾನರ ಖಡ್ಗ ಬೇಕಾಗಿಲ್ಲ,ಅವರ ಸುಧಾರಣೆಗಳು ಮುಖ್ಯವಾಗಿವೆ, ಅಹಿಂಸೆ ನಮ್ಮಗಳ ಗುರಿಯಾಗಿರಬೇಕು,

ಸಮಾನತೆ, ನ್ಯಾಯದಿಂದ ಪರಿವರ್ತನೆ ಸಾಧ್ಯ. ಬಸವಣ್ಣ ಲಿಂಗಾಯತ ಸಮುದಾಯದವರ ಮಠಾಧೀಶರಲ್ಲ. ಅದಕ್ಕಿಂತ ಹೆಚ್ಚಾಗಿ ಅವರ ರಾಜಕೀಯ ಗುರುಗಳು ಅಲ್ಲ ಎಂದು ತಿಳಿಸಿದರು.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶ್ರೀಮಂತರು ಮತ್ತಷ್ಟು ಧನವಂತ ರಾಗುತ್ತಿದ್ದಾರೆ.ಆದರೆ ಬಡಜನರ ಬದುಕು ಕಷ್ಟಕರವಾಗಿದೆ,ಮಾಧ್ಯಮ ಸಹ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿದ್ದು ಇಂತಹ ಸಂದರ್ಭದಲ್ಲಿ ಪರ್ಯಾಯ ಮಾಧ್ಯಮ ಮುಖ್ಯವಾಗಿದೆ,

ಸಾಮಾಜಿಕ ಜಾಲತಾಣ ಬಳಸುವುದಕ್ಕಿಂತ ಹೆಚ್ಚಾಗಿ ಜನಪರವಾಗಿ ಮಾತಾಡುವುದನ್ನು ಹೆಚ್ಚು ಮಾಡಬೇಕು.ಹಿಜಾಬ್ ವಿರೋಧಿಗಳಿಗೆ ಹೇಗೆ ನೀಲಿ ಶಾಲು ಪ್ರತ್ಯುತ್ತರವೊ ಹಾಗೆ ಜೈ ಶ್ರೀರಾಮ್ ಗೆ ಜೈ ಭೀಮ್ ಘೋಷಣೆ ಮದ್ದು ಎಂದು ಹೇಳಿದರು.

ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್, ಸಾಮಾಜಿಕ ಕಾರ್ಯಕರ್ತ ಕೆ.ಎಲ್. ಅಶೋಕ, ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್, ರೈತ ಸಂಘದ ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಸಮಾನ ಮನಸ್ಕರ ವೇದಿಕೆಯ ಪ್ರೊ.ಹುಲ್ಕೆರೆ ಮಹದೇವ್. ಜಿ.ಟಿ ವೀರಪ್ಪ, ಲಕ್ಷ್ಮಣ ಚೀರನಹಳ್ಳಿ, ದಲಿತ ಮುಖಂಡರಾದ ಅಂದಾನಿ ಸೋಮನಹಳ್ಳಿ, ಕುಬೇರಪ್ಪ,ವಕೀಲರಾದ ವೆಂಕಟೇಶ್, ಬಿ.ಟಿ ವಿಶ್ವನಾಥ್, ಮುಖಂಡರಾದ ಡಾ.ಉದಯಕುಮಾರ್, ಮುಕ್ತಾರ್ ಅಹ್ಮದ್, ಅಬ್ದುಲ್ ಮುಜೀದ್, ಸೈಯದ್ ಇರ್ಫಾನ್, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ,ಸಿದ್ದರಾಜು,ಜಾ.ದಳದ ನಜ್ಮಾ ನಜೀರ್, ಮಂಜೇಶ್ ಗೌಡ,ಗಂಜಾಂ ರವೀಂದ್ರ, ನಾರಾಯಣ ತಿರುಮಲಾಪುರ, ಪುರಸಭೆ ಸದಸ್ಯ ದಿನೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!