Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಹಿಳಾ ಮುನ್ನಡೆಯಿಂದ ಮತದಾನದ ಜಾಗೃತಿ ಕಾರ್ಯಕ್ರಮ

ಇಂದು ಮಂಡ್ಯದ ಕಾಳಪ್ಪ ಬಡಾವಣೆಯಲ್ಲಿ ಮಹಿಳಾ ಮುನ್ನಡೆ ಸಂಘಟನೆಯ ವತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲೇಖಕರು ಮತ್ತು ಮಹಿಳಾ ಚಿಂತಕರು ಹಾಗೂ ಹೋರಾಟಗಾರರು ಆದ ದು.ಸರಸ್ವತಿ ರವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಕಡಿವಾಣ ಹಾಕಿ, ಅತ್ಯಾಚಾರ ದೌರ್ಜನ್ಯಗಳನ್ನು ತಡೆಗಟ್ಟಲು ಬೇಕಾಗಿರುವ ಕಾನೂನುಗಳನ್ನು ಬಲಗೊಳಿಸಿ, ದೌರ್ಜನ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಸರ್ಕಾರಗಳು ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟದಲ್ಲಿ ನಿರತರಾಗಿರುವ  ನಮ್ಮ ಭಾರತೀಯ ಕ್ರಿಡಾ ಪಟುಗಳಿಗೆ ನ್ಯಾಯ ಸಿಗಬೇಕು. ಆಳುತ್ತಿರುವ ಸರ್ಕಾರಗಳು ಮಹಿಳಾ ಕ್ರೀಡಾ ಪಟುಗಳ ಜೊತೆಗೆ ನಿಂತು ನೈತಿಕ ಬಲ ತುಂಬಬೇಕು. ನಿಷ್ಪಕ್ಷಪಾತ ತನಿಖೆಯಾಗಿ ಅಪರಾಧಿಗೆ ಶಿಕ್ಷೆಯಾಗಬೇಕು ಎಂದರು.

ನಮ್ಮ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳ ಜೊತೆಗೆ ಈ ದೇಶದ ಮಹಿಳೆಯರು ನಾವಿದ್ದೇವೆ ಎಂದು ಗಟ್ಟಿಯಾಗಿ ಸಾರೋಣ. ಮೇ ತಿಂಗಳನ್ನು ಕಾರ್ಮಿಕರ ಹಕ್ಕುಗಳ ದಿನವನ್ನಾಗಿ ಆಚರಿಸುತ್ತೇವೆ, ಆದರೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ದುಡಿಯುವ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡಿ ಹೆಣ್ಣು ಮಕ್ಕಳನ್ನು ರಾತ್ರಿಪಾಳಿಯಲ್ಲಿ ದುಡಿಯುವಂತೆ ಮಾಡಲಾಗಿದೆ. ಕಾರ್ಮಿಕರ ಹಕ್ಕುಗಳನ್ನು ಪಡೆದು ಕೊಳ್ಳಲು ನಡೆದ ಹೋರಾಟದ ಇತಿಹಾಸ ನಮಗೆ ನೆನಪಾಗಬೇಕು, ಆದರೆ ಈ ದಿನ ಅವೆಲ್ಲವನ್ನೂ ನೆಲಸಮ ಮಾಡಲಾಗುತ್ತಿದೆ ಎಂದರು.

ಆದ್ದರಿಂದ ಇಂತಹ ಕಾರ್ಮಿಕ ಹಾಗೂ ಮಹಿಳಾ ವಿರೋಧಿ ಕಾಯ್ದೆ ವಾಪಸ್ಸಾಗಿ, ಮಹಿಳೆಯರಿಗೆ ಭದ್ರತೆ ಸುರಕ್ಷತೆ ದೊರೆಯಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯಬೇಕು. ಹೆಣ್ಣು ಮಕ್ಕಳ ಬಟ್ಟೆಗಳು ಅವರ ಆಯ್ಕೆಯಾಗಬೇಕೆ ವಿನಹ ಆಡಳಿತ ಮಾಡುವ ರಾಜಕೀಯ ವ್ಯಕ್ತಿಗಳ ತೀರ್ಮಾನ ಆಗಬಾರದು. ಧರ್ಮ ಮತ್ತು ಜಾತಿಗಳ ಮೂಲಕ ಸಮಾಜವನ್ನು ಯಾರು ಆಳ್ವಿಕೆ ಮಾಡಬಾರದು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಿರುವ ಸಂವಿಧಾನದ ಆದರದ ಮೇಲೆ ಆಳ್ವಿಕೆ ನಡೆಯಬೇಕು. ಬುದ್ದ, ಬಸವರ, ಮಾರ್ಗ ನಮ್ಮದಾಗಬೇಕು. ಲೈಂಗಿಕ ಅಲ್ಪಸಂಖ್ಯಾತ ರಿಗೂ ಸಮಾನ ಅವಕಾಶ ಸಿಗುವಂತಾಗಬೇಕು. ನಮ್ಮದು ಮನುಜ ಮತ ವಿಶ್ವ ಪಥವಾಗಬೇಕು,ಕುವೆಂಪು ರವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟದ ರೀತಿ, ಜಾತಿ ಧರ್ಮದ, ಬೇದ ತೊರೆದು ಬದುಕಬೇಕು ಅಂತಹ ವಾತವರಣ ನಿರ್ಮಾಣ ಮಾಡುವವರಿಗೆ ನಮ್ಮ ಮತವನ್ನು ಚಲಾಯಿಸೋಣ ಎಂಬ ಜಾಗೃತಿಯ ಮಾತುಗಳನ್ನು ತಿಳಿಸಿದರು.

ಪ್ರಗತಿಪರ ವಕೀಲರಾದ ಬಿ.ಟಿ. ವಿಶ್ವನಾಥ್  ಮಾತನಾಡಿ ರಾಜಕೀಯ ಮಿಸಲಾತಿ ಎಂಬುದು ಬಾಯಿ ಮಾತಿನ ಶಾಸನವಾಗದೆ, ಪಂಚಾಯ್ತಿ ವ್ಯಾಪ್ತಿಯಿಂದ ನಿರ್ಧಾರ ತೆಗೆದು ಕೊಳ್ಳುವ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗ ಬೇಕು, ಪರಿಶಿಷ್ಟ ಜಾತಿ ಮತ್ತು ದಲಿತ ದಮನಿತರ ಹಾಗೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿಲ್ಲಬೇಕು, ಯುವ ಜನತೆಯನ್ನು ಕೋಮು ರಾಜಕಾರಣಕ್ಕೆ ಪ್ರಚೋದಿಸುವುದು ನಿಲ್ಲಬೇಕು. ಜನಸಾಮಾನ್ಯರ, ರೈತರ, ಕಾರ್ಮಿಕರ ಹಾಗೂ ದಲಿತರ, ಮಹಿಳೆಯರ ಬದುಕಿನ ಭರವಸೆಯ ಮೇಲೆ ಈ ಸಲದ ಚುನಾವಣೆ ನಿರ್ಧರವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ,ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಸಂಜೆ ಸಮಾಚಾರ ನಾಗೇಶ್, ಮಹಿಳಾ ಮುನ್ನಡೆಯ ಕಮಲ, ಶಿಲ್ಪ ಸೌಮ್ಯ,ಮುತ್ತಮ,ವಿದ್ಯಾರ್ಥಿ ಸಂಘಟನೆಯ ಕೌಸಲ್ಯ ಮುಂತಾದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!