ರಾಜ್ಯದಾದ್ಯಂತ ಕಾಂಗ್ರೆಸ್ ಪರ ಅಲೆ ಬೀಸುತ್ತಿದ್ದು ಹೊಸ ಬದಲಾವಣೆಗಾಗಿ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಚಲಾಯಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿವೆ. ಬಿಜೆಪಿಯದು ಬೇಜವಾಬ್ದಾರಿ ಸರಕಾರ. ಯಾವುದೇ ಜನಕಲ್ಯಾಣ ಕಾರ‍್ಯಕ್ರಮಗಳು ರೂಪಿತವಾಗಿಲ್ಲ. ರಾಜ್ಯದ ಜನತೆಗೆ ಅಭಿವೃದ್ದಿಯ ಮುನ್ನೋಟ ನೀಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು.
ಕಾಂಗ್ರೆಸ್ ಗೆ ಗೆಲುವಿಗೆ ಪೂರಕ ವಾತಾವರಣ
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಮಂಡ್ಯ ಜಿಲ್ಲೆಗೂ ವಿಶೇಷ ಆದ್ಯತೆ ನೀಡಲಾಗಿದೆ. ಕೋಮುವಾದಿ ಬಿಜೆಪಿ, ಸೀಮಿತ ಸಂಖ್ಯೆಯೊಂದಿಗೆ ಅಧಿಕಾರದ ಕನಸು ಕಾಣುತ್ತಿರುವ ಜೆಡಿಎಸ್‌ನ್ನು ಜನರು ತಿರಸ್ಕರಿಸಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಎಸ್.ಸತ್ಯಾನಂದ ಮನವಿ ಮಾಡಿದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ರಾಜ್ಯದಲ್ಲಿ ಹಲವಾರು ರಾಜಕೀಯ ಬದಲಾವಣೆ ಮತ್ತು ಸ್ಥಿತ್ಯಂತರವಾಗಿದೆ. ಮತ್ತೆ ಬದಲಾವಣೆಯ ಸನ್ನಿವೇಶ ಎದುರಾಗಿದೆ. ಈಗ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮಂಡ್ಯ ಜಿಲ್ಲೆಯ 7ಕ್ಕೆ ಏಳು ಕ್ಷೇತ್ರಗಳನ್ನು ಜೆಡಿಎಸ್‌ಗೆ ಗೆಲ್ಲಿಸಿಕೊಟ್ಟು ಆದ ಪ್ರಯೋಜನವಾದರೂ ಏನು? ಬಿಜೆಪಿ ಸರಕಾರದಲ್ಲಿ ಜಿಲ್ಲೆಯವರೇ ಆದ ಕೆ.ಸಿ.ನಾರಾಯಣಗೌಡರು ಸಚಿವರಾಗಿ ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಾದರೂ ಏನು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹತ್ತಾರು ಜ್ವಲಂತ ಸಮಸ್ಯೆಗಳಿದ್ದವು. ಅವುಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ. ಸಾರ್ವಜನಿಕ ಸಂಸ್ಥೆಗಳನ್ನು ಉಳಿಸಲಿಲ್ಲ, ಪುನಶ್ಚೇತನಗೊಳಿಸಲಿಲ್ಲ. ಮೈಶುಗರ್‌ನ್ನು ಕಾಟಾಚಾರಕ್ಕೆ ಪುನಾರಂಭ ಮಾಡಲಾಯಿತು. ಪಿಎಸ್‌ಎಸ್‌ಕೆಯನ್ನು ಖಾಸಗಿಯವರಿಗೆ ಒಪ್ಪಿಸಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಮೈಶುಗರ್‌ನ ಹೊಸ ಕಾರ್ಖಾನೆ ಸ್ಥಾಪಿಸಲಾಗುವುದು. ಮಂಡ್ಯದ ಸುತ್ತಲೂ ರಿಂಗ್‌ರೋಡ್ ನಿರ್ಮಿಸಲಾಗುವುದು. ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಅಂಶಗಳನ್ನು ಪ್ರಸ್ತಾಪಿಸಿದರು.
ರೈತರು ನಗರದಲ್ಲಿ 106 ದಿನ ಅಹೋರಾತ್ರಿ ಹೋರಾಟ ನಡೆಸಿದರೂ ಜಿಲ್ಲೆಯ ಯಾವುದೇ ಶಾಸಕರು ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಮಂಡ್ಯ ಜಿಲ್ಲಾ ಪಂಚಾಯಿತಿ ಆಡಳಿತ ಅದೋಗತಿಗೆ ಹೋಗಲು, ಮನ್‌ಮುಲ್‌ನ ಹಾಲು-ನೀರು ಹಗರಣದ ಸೂತ್ರದಾರರಿಗೆ ಈ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ್, ನಗರಸಭೆ ಸದಸ್ಯ ಎಂ.ಎನ್.ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಬಿ.ಟಿ.ಗುರುರಾಜ್, ಸಾತನೂರು ಕೃಷ್ಣ, ಮುಜಾಯಿದ್ ಹಾಜರಿದ್ದರು.




