Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಸರ್ಕಾರದಿಂದ ಜನಪರ ಆಡಳಿತ – ಸಿ.ಡಿ. ಗಂಗಾಧರ್

ಮತದಾರರು ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದಿದ್ದು, ಅವರ ಆಸೆಗೆ ತಣ್ಣೀರೆರಚದೆ ಜನಪರ ಆಡಳಿತ ನಡೆಸಲಿದೆ, ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಭರವಸೆ ನೀಡಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜನಪ್ರತಿನಿಧಿಗಳ ರೀತಿ ದ್ವೇಷ ಮಾಡದೆ ಯಾರನ್ನೂ ವೈಯಕ್ತಿಕವಾಗಿ ಹೀಯಾಳಿಸದೆ ಅಗೌರವ ತೋರದೆ ಎಲ್ಲರನ್ನೂ ಒಟ್ಟುಗೂಡಿಸಿ ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಟೀಕೆ ಟಿಪ್ಪಣಿಗಳಿಗೆ ಜಿಲ್ಲೆಯ ಜನ ಸೊಪ್ಪು ಹಾಕದೆ ಅಭಿವೃದ್ಧಿ ದೃಷ್ಠಿಯಿಂದ ನಮಗೆ ಮತ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲು-ನೀರು ಹಗರಣ ಹಾಗೂ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದಿರುವ 72 ಕೋಟಿ ಹಗರಣವನ್ನೂ ಸೇರಿದಂತೆ ತನಿಖೆಗೆ ಒಳಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೇಲುಕೋಟೆ ಫಲಿತಾಂಶದ ನಂತರ ಚಿನಕುರಳಿ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಅಶಾಂತಿ ಉಂಟುಮಾಡಲು ಪ್ರಯತ್ನಿಸಿರುವುದು ಖಂಡನೀಯ. ಪ್ರಸ್ತುತ ಚುನಾವಣೆಯಲ್ಲಿ ಅಭಿವೃದ್ಧಿ ಕಾರ‌್ಯಕ್ರಮಗಳ ಆಧಾರದ ಮೇಲೆ ಮತಯಾಚನೆ ಮಾಡುವುದರ ಬದಲಾಗಿ, ವೈಯಕ್ತಿಕ ನಿಂದನೆ ಮತ್ತು ಸೇಡಿನ ರಾಜಕಾರಣ ಮಾಡಿರುವವರಿಗೆ ಮತದಾರರು ಮತದಾನದ ಮೂಲಕ ಉತ್ತರ ನೀಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ವಿರುದ್ಧ ಗುಡುಗಿದರು.

ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಹಾಕಿದ ಮತದಾರರಿಗೆ ಹಾಗೂ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿರುವ ಎಲ್ಲಾ ಕಾಂಗ್ರೆಸ್ ಕಾರ‌್ಯಕರ್ತರನ್ನು ಅಭಿನಂದಿಸುವುದಾಗಿ ಹೇಳಿದರು.

ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಮಹಿಳಾಧ್ಯಕ್ಷೆ ಅಂಜನಾ, ಮುಖಂಡರಾದ ಸಿ.ಆರ್. ರಮೇಶ್, ಮುಜಾಹಿದ್, ನಗರಸಭಾ ಸದಸ್ಯರಾದ ಶ್ರೀಧರ್, ನಹೀಂ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!