Friday, September 20, 2024

ಪ್ರಾಯೋಗಿಕ ಆವೃತ್ತಿ

ಜೈನ ಮುನಿಗಳ ಹತ್ಯೆಯೂ, ಒಂದಷ್ಟು ಪ್ರಶ್ನೆಗಳೂ…

✍️ ಮಾಚಯ್ಯ ಎಂ ಹಿಪ್ಪರಗಿ

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಎನ್ನುವುದೊಂದು ಕೇಂದ್ರ ಗೃಹ ಸಚಿವಾಲಯದಡಿ ಬರುವ ಸಂಸ್ಥೆ. ದೇಶದಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿಯನ್ನು ಕಲೆಹಾಕಿ, ವರ್ಗೀಕರಿಸಿ, ದತ್ತಾಂಶಗಳನ್ನು ಹಾಜರುಪಡಿಸುವುದು ಈ ಸಂಸ್ಥೆಯ ಹೊಣೆ. ಇದನ್ನು ಆಧರಿಸಿ, ಸರ್ಕಾರಗಳು ಅಗತ್ಯವಿರುವ ಸೂಕ್ತ ಪೊಲೀಸಿಂಗ್ ಕ್ರಮಗಳಿಗೆ ಯೋಜನೆ ರೂಪಿಸುತ್ತವೆ. ಈ ಸಂಸ್ಥೆ ಇತ್ತೀಚೆಗೆ 2021ರ ಅವಧಿಯ ತನ್ನ ವರದಿಯನ್ನು ಬಿಡುಗಡೆಗೊಳಿಸಿತು. ಅದರ ಪ್ರಕಾರ ಆ ವರ್ಷದಲ್ಲಿ ದೇಶಾದ್ಯಂತ 29,272 ಮರ್ಡರ್ ಪ್ರಕರಣಗಳು ದಾಖಲಾಗಿವೆ. ಇಂಥಾ ಮರ್ಡರ್‌ಗಳು ಪ್ರಧಾನವಾಗಿ ಮೂರು ಕಾರಣಗಳಿಗಾಗಿ ನಡೆಯುತ್ತವೆ ಎಂತಲೂ ಎನ್‌ಸಿಆರ್‌ಬಿ ಸ್ಪಷ್ಟವಾಗಿ ವರ್ಗೀಕರಿಸಿದೆ. ಅದರಲ್ಲಿ ಮೊದಲನೇ ಕಾರಣ ಡಿಸ್‌ಪ್ಯೂಟ್‌ನದ್ದು (ಹಣಕಾಸು ಅಥವಾ ಆಸ್ತಿ ವಿವಾದ). ದಾಖಲಾದ ಒಟ್ಟು ಮರ್ಡರ್ ಪ್ರಕರಣಗಳಲ್ಲಿ ಅತಿ ಹೆಚ್ಚು, ಅಂದರೆ 9,765 ಕೊಲೆಗಳು ಆಸ್ತಿ ಅಥವಾ ಹಣಕಾಸು ವಿವಾದದಿಂದಾಗಿ ಸಂಭವಿಸಿದ್ದವು. ನಂತರದ ಸ್ಥಾನದಲ್ಲಿ ವೈಯಕ್ತಿಕ ದ್ವೇಷದಿಂದ ನಡೆಯುವ ಕೊಲೆಗಳು ಹಾಗೂ ಮೂರನೇ ಸ್ಥಾನದಲ್ಲಿ ಲಾಭಕ್ಕಾಗಿ ನಡೆಯುವ ಕಾರಣಗಳು ಇವೆ.

ಅರ್ಥಾತ್ ದೇಶದಲ್ಲಿ ಹಣಕಾಸು ಅಥವಾ ಆಸ್ತಿ ವಿವಾದಕ್ಕೆ ಅತಿ ಹೆಚ್ಚು ಕೊಲೆಗಳಾಗುತ್ತಿರುವುದು ಇದರಿಂದ ಸಾಬೀತಾಗುತ್ತದೆ. ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲದೆ ಹೋದಾಗ ಹಾಗೂ ಅದು ಕಾನೂನುಬದ್ಧ ಲೇವಾದೇವಿ ನಿಯಮಗಳನ್ನು ಉಲ್ಲಂಘಿಸಿದ್ದ ವ್ಯವಹಾರವಾಗಿದ್ದಾಗ ಅಥವಾ ವಿವಾದವು ವೈಯಕ್ತಿಕ ಆರೋಪ-ಪ್ರತ್ಯಾರೋಪವಾಗಿ ರೂಪಾಂತರಗೊಂಡಾಗ ಆ ವಿವಾದಗಳು ಕೊಲೆಯಲ್ಲಿ ಪರ್ಯವಸನಗೊಳ್ಳುತ್ತವೆ ಎಂಬುದನ್ನು ನಾವು ಸುಲಭವಾಗಿ ಅಂದಾಜಿಸಬಹುದು. ಬೆಳಗಾವಿ ಜಿಲ್ಲೆಯ ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ನಡೆದ ಕೊಲೆ ಕೂಡಾ ಇಂತದ್ದೇ ಹಣಕಾಸು ವಿವಾದಕ್ಕೆ ಸಂಭವಿಸಿದ ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತೆ. ಅಪರಾಧಿಗಳೂ ಈಗಾಗಲೇ ಬಂಧಿಯಾಗಿದ್ದಾರೆ. ಆದರೆ ಕೊಲೆಯಾದವರು ಜೈನ ಮುನಿಗಳು ಎಂಬ ಕಾರಣಕ್ಕೆ, ಮಿಕ್ಕೆಲ್ಲ ಹಣಕಾಸು ವಿವಾದದ ಕೊಲೆಗಳಿಗಿಂತ ಇದನ್ನು ಧಾರ್ಮಿಕಗೊಳಿಸುವ ಪ್ರಯತ್ನವೇ ಅಸಂಬದ್ಧ ಎನಿಸುತ್ತದೆ. ಯಾಕೆಂದರೆ, ಈ ಕೊಲೆಯಲ್ಲಿ ಯಾವುದೇ ಧಾರ್ಮಿಕ ಪ್ರಭಾವದ ಪಾತ್ರವಿಲ್ಲದಿರುವುದು ಆರಂಭಿಕ ಮಾಹಿತಿಗಳಿಂದ ತಿಳಿದುಬರುತ್ತಿದೆ. ಈ ಕೊಲೆಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಜೈನಮುನಿ ಗುಣಾಧರ ನಂದಿ ಮಹಾರಾಜರು ಕೂಡಾ ತಮ್ಮ ಮಾತಿನಲ್ಲಿ “ನಾವು ಆಶ್ರಮದ ಮುಖ್ಯಸ್ಥರಾಗಿರುವುದರಿಂದ ಭಕ್ತರೆನಿಸಿಕೊಂಡವರು ಹಣಕಾಸು ಸಹಾಯ ಕೇಳಿಕೊಂಡು ಬರುತ್ತಾರೆ. ನಾವೂ ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಿರುತ್ತೇವೆ. ಆದರೆ ಕೊಟ್ಟ ಹಣವನ್ನು ವಾಪಾಸು ಕೇಳಿದ್ದಕ್ಕೆ ಹೀಗೆ ಕೊಲೆ ಮಾಡಬಹುದೇ?” ಎಂದು ಪ್ರಶ್ನಿಸುವ ಮೂಲಕ ಹಿರೇಕೋಡಿ ಜೈನಮುನಿಗಳ ಕೊಲೆಯಲ್ಲಿ ಹಣದ ವ್ಯವಹಾರ ಇರುವುದನ್ನು ಖಾತ್ರಿ ಪಡಿಸಿದ್ದಾರೆ.

ಧಾರ್ಮಿಕ ಉದ್ದೇಶವಲ್ಲದ ಕಾರಣಕ್ಕೆ ಹಾಗೂ ದೇಶದಲ್ಲಿ ಅತಿಹೆಚ್ಚು ನಡೆಯುತ್ತಿರುವ ಹಣಕಾಸಿನ ವ್ಯವಹಾರದ ಕೊಲೆಗಳ ರೀತಿಯಲ್ಲಿ ನಡೆದ ಒಂದು ಕೊಲೆಗೆ ಧಾರ್ಮಿಕ ಬಣ್ಣವನ್ನು ಬಳಿದು, ಇಡೀ ಜೈನ ಸಮುದಾಯ ಹಾಗೂ ಜೈನ ಮುನಿಗಳ ಪ್ರಾಣ ಆತಂಕದಲ್ಲಿದೆ ಎಂದು ಸಹನೆ ಪ್ರಿಯರಾದ ಜೈನರೇ ಅಸಹನೆಯಿಂದ ಪ್ರತಿಭಟಿಸುವುದು ಹಾಗೂ ಹೇಳಿಕೆ ನೀಡುವುದನ್ನು ಗಮನಿಸಿದರೆ, ಯಾವುದೋ ಪ್ರೇರಣೆಗೆ ಅವರೆಲ್ಲ ಪ್ರಭಾವಿತರಾಗಿದ್ದಾರೆ ಎಂದು ಭಾವಿಸದೇ ಇರಲು ಹೇಗೆ ಸಾಧ್ಯ?

ಧರ್ಮ ಪ್ರಚಾರದ ಕಾಯಕಕ್ಕೆ ಸಂಬಂಧಿಸಿದಂತೆ ನಡೆದ ವಿವಾದದಲ್ಲಿ ಅಥವಾ ಧಾರ್ಮಿಕ ಚಿಂತನೆಯನ್ನು ಒಪ್ಪದ ಎದುರಾಳಿಗಳ ಕೃತ್ಯದಿಂದಾಗಿ ಆ ಮುನಿಗಳು ಕೊಲೆಯಾಗಿದ್ದರೆ, ಆಗ ಜೈನ ಧರ್ಮೀಯರ ಸುರಕ್ಷತೆಯನ್ನು ನಾವು ಚರ್ಚೆಯ ವಿಷಯವಾಗಿಸಿಕೊಳ್ಳಬಹುದು. ಅದು ಅನಿವಾರ್ಯ ಕೂಡಾ. ಆದರೆ ಇಲ್ಲಿ ನಡೆದಿರುವ ಕೃತ್ಯದಲ್ಲಿ ಕೊಲೆಯಾದ ಮುನಿ ಜೈನ ಧರ್ಮಗುರು ಎಂಬುದೊಂದನ್ನು ಬಿಟ್ಟರೆ, ಕೃತ್ಯದ ಪ್ರೇರಣೆಯ (ಮೋಟಿವೇಷನ್ ಆಫ್ ಕ್ರೈಮ್) ವಿಚಾರದಲ್ಲಿ ಧರ್ಮದ ಕಿಂಚಿತ್ತೂ ಪಾತ್ರವಿಲ್ಲ. ಕಡೇ ಪಕ್ಷ, ಇದೆಯೆನ್ನುವ ಸುಳಿವೂ ಇಲ್ಲ. ಹಾಗಿರುವಾಗ ಇದನ್ನು ಧಾರ್ಮಿಕಗೊಳಿಸುವುದೆಂದರೆ, ಜೈನ ಧರ್ಮದಂತಹ ಉದಾತ್ತ ಬೋಧನೆಯ ಧರ್ಮಕ್ಕೆ ಶೋಭೆಯೇ? ನಮ್ಮ ನ್ಯಾಯಾಲಯಗಳು ಕೂಡಾ ಕೊಲೆ ಮಾಡಿದ ಅಪರಾಧಿಗೆ ಶಿಕ್ಷೆ ನೀಡುವಾಗ ‘ಮೋಟಿವೇಷನ್ ಆಫ್ ಕ್ರೈಮ್’ ಅನ್ನು ಪರಿಗಣಿಸಿಯೇ ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸುತ್ತವೆ ಎನ್ನುವುದನ್ನು ನಾವು ಮರೆಯಬಾರದು. ಅಂತದ್ದರಲ್ಲಿ ‘ಮೋಟಿವೇಷನ್ ಆಫ್ ಕ್ರೈಮ್’ ಅನ್ನೇ ನಾವು ಅಪವ್ಯಾಖ್ಯೆಗೊಳಿಸಿದರೆ ಹೇಗೆ?

ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣಕ್ಕೋ, ರಸ್ತೆಯಲ್ಲಿನ ಘಾತುಕ ಗುಂಡಿಗಳಿಂದಾಗಿ ಆದ ಅಪಘಾತದಲ್ಲಿಯೋ, ಕುಡಿಯುವ ನೀರಿನ ಕಲುಷಿತದಿಂದಾಗಿಯೋ ಘಟಿಸುವ ಸಾವುಗಳಿಗೆ ನಾವು ನೇರವಾಗಿ ಸರ್ಕಾರವನ್ನು ಹೊಣೆಗಾರರನ್ನಾಗಿಸಬಹುದು. ಯಾಕೆಂದರೆ, ಇವು ಸರ್ಕಾರದ ಹೊಣೆಗಳು. ಅಲ್ಲಿನ ಲೋಪದಿಂದಾಗಿಯೇ ಸಾವುಗಳು ಸಂಭವಿಸುತ್ತವೆ. ಆದರೆ ವೈಯಕ್ತಿಕ ಹಣಕಾಸು ವಿಚಾರವಾಗಿ ನಡೆಯುವ ಕೊಲೆಗಳಿಗೆ ಸರ್ಕಾರವನ್ನು ನೇರವಾಗಿ ಹೊಣೆಯಾಗಿಸುವುದು, ಅದೂ ಸತ್ತ ವ್ಯಕ್ತಿಯ ಧಾರ್ಮಿಕ ಸ್ಥಾನವನ್ನು ಪರಿಗಣಿಸಿ, ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ತನಿಖೆ ಸರಿಯಾಗಿ ನಡೆಯದಿದ್ದರೆ ಅಥವಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಪೊಲೀಸ್ ವ್ಯವಸ್ಥೆಯಿಂದ ವ್ಯಕ್ತವಾದರೆ, ಆಗ ನಾವು ಸರ್ಕಾರವನ್ನು ಇಂಥಾ ಕೊಲೆಗಳಲ್ಲಿ ದೋಷಿಯಾಗಿ ದೂರಬಹುದು. ಅಂತಹ ಲೋಪವೂ ಈ ತನಿಖೆಯಲ್ಲಿ ಇದುವರೆಗೆ ನಡೆದಿಲ್ಲ. ಅತ್ಯಲ್ಪ ಅವಧಿಯಲ್ಲಿ ಆರೋಪಿಗಳನ್ನೂ ಪೊಲೀಸರು ಬಂಧಿಸಿ, ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟಾದರೂ ಧರ್ಮವನ್ನು ಎಳೆದು ತರುವುದು ಎಷ್ಟು ಸಮಂಜಸ?

ಎನ್‌ಸಿಆರ್‌ಬಿಯ 2021ರ ವರದಿಯಲ್ಲಿ ಉಲ್ಲೇಖಿಸಲಾದ ಹಣಕಾಸು-ಆಸ್ತಿ ವಿವಾದಕ್ಕೆ ಸಂಬಂಧಿಸಿದ 9,765 ಕೊಲೆಗಳಲ್ಲೂ ಕೊಲೆಗೀಡಾದ ವ್ಯಕ್ತಿ ಯಾವುದೋ ಒಂದು ಧರ್ಮಕ್ಕೆ ಖಂಡಿತ ಸೇರಿರುತ್ತಾನೆ. ಹಾಗಾದರೆ ಆಯಾ ಧರ್ಮದವರು ತಮ್ಮ ಧರ್ಮ ಅಪಾಯದಲ್ಲಿದೆ ಅಥವಾ ರಕ್ಷಣೆ ಬೇಕು ಎಂಬ ಸಾರ್ವತ್ರಿಕ ಮನವಿ ಮುಂದಿಟ್ಟರೆ ಹೇಗೆ?

ಹಾಗಂತ ಇಲ್ಲಿ, ಆ ಜೈನ ಮುನಿಗಳ ಸಾವನ್ನು ಕ್ಷುಲ್ಲಕವೆನ್ನುತ್ತಿಲ್ಲ ಅಥವಾ ಸಮರ್ಥಿಸುತ್ತಲೂ ಇಲ್ಲ. ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿದ ಆ ವಿಕೃತ ಅಪರಾಧಿಗಳಿಗೆ ಕಾನೂನಾತ್ಮಕವಾಗಿ ಅತ್ಯುಗ್ರ ಶಿಕ್ಷೆಯೇ ಆಗಬೇಕು. ಮನುಷ್ಯನೊಬ್ಬ ಮನುಷ್ಯನನ್ನು ಕೊಲೆ ಮಾಡುವುದಕ್ಕಿಂತ ಹೇಯ ಕೃತ್ಯ ಮತ್ತೊಂದಿರಲಾರದು. ನಿಜಕ್ಕೂ ಇದೊಂದು ಗಂಭೀರ ಪ್ರಕರಣ. ಕೊಲೆ ಮಾಡಿದ ವ್ಯಕ್ತಿಗಳ ಮನಸ್ಸು, ಒಬ್ಬ ನಿರಾಯುಧ-ನಿರಾಪಾಯದ-ಶಾಂತಮೂರ್ತಿಯಂತಹ ಸಂತನನ್ನು ಅಷ್ಟು ಉಗ್ರವಾಗಿ ಕೊಲ್ಲುವಷ್ಟು ವಿಕೃತಗೊಂಡಿತೇಕೆ? ಮನುಷ್ಯ ಪ್ರತಿಕ್ರಿಯಾತ್ಮಕವಾಗಿ ಇಷ್ಟು ಸಂಕೀರ್ಣಗೊಳ್ಳುತ್ತಿರುವುದೇಕೆ? ಲೌಕಿಕ ಸಮಸ್ಯೆಗಳನ್ನು ತೆಗೆದುಕೊಂಡು ತಮ್ಮ ಬಳಿಗೆ ಬರುವ ಭಕ್ತರಿಗೆ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪರಿಹಾರ ಹೇಳಿ ಮಾರ್ಗದರ್ಶನ ಮಾಡಬೇಕಾದಂತಹ ಸರ್ವಸಂಗ ಪರಿತ್ಯಾಗಿಯಾದ ಸಂತರೊಬ್ಬರು ಯಕಶ್ಚಿತ್ ಹಣಕಾಸು ವ್ಯವಹಾರವನ್ನು ತಮ್ಮ ಪ್ರಾಣಕ್ಕೇ ಎರವಾಗುವಷ್ಟು ಲಂಬಿಸಿಕೊಂಡರೇಕೆ? ಎಂಬ ಚರ್ಚೆಗಳ ನಿಟ್ಟಿನಿಂದ ಇದು ಗಂಭೀರ ಪ್ರಕರಣ. ಅಂತಹ ಚರ್ಚೆಯಲ್ಲಿ ಸಮಾಜಕ್ಕೆ, ಸಮುದಾಯಕ್ಕೆ ಒಳಿತಾಗುವ ಒಳಹುಗಳಾದರೂ ಆಚೆ ಬರುತ್ತವೆ. ಆದರೆ ಇಲ್ಲಿ ಅನಗತ್ಯವಾಗಿ ಧರ್ಮವನ್ನು ಮುನ್ನೆಲೆಗೆ ತರಲಾಗುತ್ತಿದೆ.

ಒಂದೊಮ್ಮೆ ತನಿಖೆಯ ನಂತರ, ಈ ಕೊಲೆಯಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯ ಅಥವಾ ಅಸಹಿಷ್ಣುತೆಯ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಾಗ ಜೈನ ಧರ್ಮೀಯರ ಭದ್ರತೆಯ ಕುರಿತಂತೆ ಧ್ವನಿ ಎತ್ತುವುದರಲ್ಲಿ ಅರ್ಥವಿರುತ್ತದೆ. ಆದರೆ ಅಂತಹ ಯಾವ ಸಂಭಾವ್ಯದ ಲಕ್ಷಣ ಗೋಚರಿಸದೆ, ಸಹಜ ಹಣಕಾಸು ವ್ಯವಹಾರದ ಅಂಶಗಳು ಪತ್ತೆಯಾಗುತ್ತಿರುವಾಗ ಇದನ್ನು ಜೈನ ಮುನಿಗಳು ಧಾರ್ಮಿಕಗೊಳಿಸುವುದು ನಿಜಕ್ಕೂ ಶೋಭೆ ತರುವಂತದ್ದಲ್ಲ.

ಇತ್ತೀಚಿನ ದಿನಮಾನಗಳಲ್ಲಿ, ಜೈನ ಸಮುದಾಯವು ಹಿಂದೂತ್ವ ಬಲಪಂಥೀಯ ಬಹುಸಂಖ್ಯಾತ ಕೋಮುವಾದದೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ, ಧಾರ್ಮಿಕವಲ್ಲದ ಒಂದು ಹತ್ಯೆಯನ್ನು ಧಾರ್ಮಿಕಗೊಳಿಸುತ್ತಿರುವ ಈ ಪ್ರಯತ್ನ ಒಂದು ಗೂಢ ಪ್ರೇರಣೆಯ ಭಾಗವೇನೋ ಎಂಬ ಅನುಮಾನ ಹುಟ್ಟಿಸುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!